ಮಂಗಳವಾರ, ಸೆಪ್ಟೆಂಬರ್ 17, 2019
25 °C

ಕಾಲುವೆ ಹೂಳು ಹೂಳುವುದು ಎಲ್ಲಿ?

Published:
Updated:
ಕಾಲುವೆ ಹೂಳು ಹೂಳುವುದು ಎಲ್ಲಿ?

ಬೆಂಗಳೂರು: ರಾಜಕಾಲುವೆಗಳಿಂದ ಹೊರತೆಗೆಯುತ್ತಿರುವ ಟನ್‌ಗಟ್ಟಲೆ ಹೂಳನ್ನು ವಿಲೇವಾರಿ ಮಾಡುವುದು ಎಲ್ಲಿ?

ನಿತ್ಯವೂ ಕಸ ವಿಲೇವಾರಿ ಕುರಿತ ಒಂದಿಲ್ಲ ಒಂದು ಸಮಸ್ಯೆಯಿಂದ ಹೈರಾಣಾಗಿದ್ದ ಬಿಬಿಎಂಪಿ ಅಧಿಕಾರಿಗಳನ್ನು ಕಾಡುತ್ತಿರುವ ಹೊಸ ಚಿಂತೆ ಇದು.

‘ಯಲಹಂಕ ಸಮೀಪದ ಬೆಲ್ಲಹಳ್ಳಿ, ಪೀಣ್ಯ ದಾಸರಹಳ್ಳಿ ಸಮೀಪದ ಮಲ್ಲಸಂದ್ರ, ಗೊಲ್ಲಹಳ್ಳಿ ಕ್ವಾರಿಗಳಲ್ಲಿ ಹೂಳನ್ನು ಹೂಳುತ್ತಿದ್ದೆವು. ಮಲ್ಲಸಂದ್ರ ಕ್ವಾರಿಯಲ್ಲಿ ಹೂಳು ವಿಲೇವಾರಿ ಮಾಡುತ್ತಿದ್ದೆವು. ಆದರೆ, ಆ ಕ್ವಾರಿ ಭರ್ತಿಯಾಗಿದ್ದು, ಅಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ. ಬೆಲ್ಲಹಳ್ಳಿ ಕ್ವಾರಿಯಲ್ಲಿ ಕಸ ಹಾಗೂ ಹೂಳನ್ನು ವಿಲೇವಾರಿ ಮಾಡಲು ಸ್ಥಳೀಯರ ವಿರೋಧ ಇದೆ. ನಗರದ 20–30 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೂ ಕ್ವಾರಿಗಳು ಸಿಗುತ್ತಿಲ್ಲ. ಹೂಳನ್ನು ಎಲ್ಲಿ ಹಾಕಬೇಕು ಎಂಬುದೇ ಸಮಸ್ಯೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಬೆಟ್ಟೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘2016-17ರಲ್ಲಿ ಹಾಗೂ 2017–18ನೇ ಸಾಲಿನಲ್ಲಿ 155 ಕಿ.ಮೀ. ಕಾಲುವೆಗಳಲ್ಲಿ ಹೂಳು ತೆಗೆಯುವ ಗುರಿ ಇಟ್ಟುಕೊಂಡಿದ್ದೇವೆ. ₹26 ಕೋಟಿ ವೆಚ್ಚದಲ್ಲಿ ಹೂಳು ತೆರವು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, 8 ವಲಯಗಳಲ್ಲಿ 19 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಈವರೆಗೆ ಶೇ 45ರಷ್ಟು ಕೆಲಸ ಪೂರ್ಣಗೊಂಡಿದೆ’ ಎಂದು ಅವರು ಮಾಹಿತಿ ನೀಡಿದರು.

‘ನಗರದಲ್ಲಿ ಎರಡು ತಿಂಗಳುಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಹೂಳು ತೆರವುಗೊಳಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಸದ್ಯ ಪ್ರವಾಹಪೀಡಿತ ಪ್ರದೇಶಗಳ ಕಾಲುವೆಗಳಲ್ಲಿ ತುಂಬಿರುವ ಹೂಳು ಹಾಗೂ ಕಸವನ್ನು ಮಾತ್ರ ತೆರವುಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಮಳೆ ನಿಂತ ಕೂಡಲೇ ರಾಜಕಾಲುವೆಗಳ ಹೂಳು ತೆರವುಗೊಳಿಸಲು ನಿರ್ಧರಿಸಿದ್ದೇವೆ’ ಎಂದು ವಿವರಿಸಿದರು.

ಶೇ 30ರಷ್ಟು ಪ್ಲಾಸ್ಟಿಕ್‌: ‘ಸಾರ್ವಜನಿಕರು ಪ್ಲಾಸ್ಟಿಕ್‌ ಹಾಗೂ ಥರ್ಮಕೋಲ್‌ ತ್ಯಾಜ್ಯವನ್ನು ಕಾಲುವೆಗಳಿಗೆ ಹಾಕುತ್ತಾರೆ. ಕಾಲುವೆಗಳಲ್ಲಿ ಥರ್ಮಕೋಲ್ ಸಿಕ್ಕಿಕೊಳ್ಳುವುದರಿಂದ ನೀರಿನ ಹರಿವಿಗೆ ತೊಂದರೆ ಉಂಟಾಗುತ್ತದೆ. ಇದರಿಂದ ನೀರು ಉಕ್ಕಿ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ಕಾಲುವೆಗಳಲ್ಲಿ ಸಂಗ್ರಹಗೊಳ್ಳುವ ಹೂಳಿನಲ್ಲಿ ಶೇ 25ರಿಂದ 30ರಷ್ಟು ಪ್ಲಾಸ್ಟಿಕ್‌ ಹಾಗೂ ಥರ್ಮಕೋಲ್‌ ಇರುತ್ತದೆ. ಇವುಗಳನ್ನು ವಿಂಗಡಿಸುವುದು ಸವಾಲಾಗಿದೆ. ಹೂಳಿನ ಜತೆ ಪ್ಲಾಸ್ಟಿಕ್‌, ಥರ್ಮಕೋಲ್‌ ಇದ್ದರೆ ಅದನ್ನು ವಿಲೇವಾರಿ ಘಟಕಗಳಲ್ಲಿ ತೆಗೆದುಕೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

‘ಕಲ್ಲಿನಿಂದ ನಿರ್ಮಿಸಿದ್ದ ಕಾಲುವೆ ಗೋಡೆಗಳನ್ನು ಕೆಡವಿ ಕಾಂಕ್ರೀಟ್‌ ಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಟಾಚಿ ಯಂತ್ರಗಳನ್ನು ಕಾಲುವೆಗೆ ಇಳಿಸಬೇಕು. ಇದಕ್ಕಾಗಿ ಕಾಲುವೆಯ ಗೋಡೆಯನ್ನು ಒಡೆಯಬೇಕು. ಕೋರಮಂಗಲದ ಎಸ್‌.ಟಿ.ಬೆಡ್‌ನಲ್ಲೂ ಕಾಮಗಾರಿ ಸಲುವಾಗಿ ಗೋಡೆ ಒಡೆದಿದ್ದೆವು. ಅದೇ ವೇಳೆ ಭಾರಿ ಮಳೆ ಬಂತು. ಇದರಿಂದಾಗಿ ಕಾಲುವೆಯ ನೀರು ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿತ್ತು’ ಎಂದರು.

ಇಂಗದ ನೀರು: ‘ನಗರದಲ್ಲಿ ಈ ಹಿಂದೆಯೂ ಉತ್ತಮ ಮಳೆ ಬೀಳುತ್ತಿತ್ತು. ಈಗಲೂ ಬೀಳುತ್ತಿದೆ. ಆದರೆ, ಹಿಂದೆ ತಿಂಗಳಿಗೆ ಒಟ್ಟು 450 ಮಿ.ಮೀ.ನಷ್ಟು ಮಳೆಯಾದರೂ ಅದು ಒಮ್ಮೆಲೆ ಸುರಿಯುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಒಂದೇ ದಿನದಲ್ಲಿ 200 ಮಿ.ಮೀ. ಮಳೆ ಬಿದ್ದಿದೆ. ಇದರಿಂದ ನೀರಿನ ಹರಿವು ಏಕಾಏಕಿ ಹೆಚ್ಚಾಗಿದೆ. ನಗರದಲ್ಲಿ ಕಾಂಕ್ರೀಟ್‌ ರಚನೆಗಳು ತುಂಬಿಕೊಂಡಿವೆ. ಇದರಿಂದಾಗಿ ಮಳೆ ನೀರು ಭೂಮಿಗೆ ಇಂಗದೆ, ಹರಿದು ಕಾಲುವೆಗಳಿಗೆ ಹೋಗುತ್ತಿದೆ. ಒಮ್ಮೆಲೇ ಅಷ್ಟು ಪ್ರಮಾಣದ ನೀರು ಹರಿದು ಬಂದರೆ ಅದನ್ನು ತಾಳಿಕೊಳ್ಳುವ ಸಾಮರ್ಥ್ಯ ಈಗಿರುವ ಚರಂಡಿ ಹಾಗೂ ಕಾಲುವೆಗಳಿಗೆ ಇಲ್ಲ. ಇವುಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕೃಷಿಕರಿಗೂ ಬೇಡವಾದ ಹೂಳು

‘ಈ ಹಿಂದೆ ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ವ್ಯಾಪಕವಾಗಿತ್ತು. ರಾಜಕಾಲುವೆಯ ಹೂಳನ್ನು ರೈತರ ತೋಟ ಹಾಗೂ ಹೊಲಗಳಿಗೆ ಹಾಕುತ್ತಿದ್ದೆವು. ಈ ಮಣ್ಣಿನಲ್ಲಿ ಹೆಚ್ಚಿನ ಫಲವತ್ತತೆ ಇರುವುದರಿಂದ ರೈತರೇ ಮುಂದೆ ಬಂದು ಹೊಲಗಳಿಗೆ ಇದನ್ನು ಹಾಕಿಸಿಕೊಳ್ಳುತ್ತಿದ್ದರು. ಆದರೆ, ಈಗ ಕೃಷಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ರೈತರೂ ರಿಯಲ್‌ ಎಸ್ಟೇಟ್‌ ಕಡೆ ಮುಖ ಮಾಡಿದ್ದಾರೆ. ಹೂಳನ್ನು ಪಡೆಯಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ’ ಎಂದು ಬೆಟ್ಟೇಗೌಡ ವಿವರಿಸಿದರು.

Post Comments (+)