ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಅಪಹರಿಸಿ ಬರ್ಬರ ಹತ್ಯೆ

* ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಕೃತ್ಯ * ಪೊಲೀಸ್ ಬಲೆಗೆ 21 ಮಂದಿಯ ಗ್ಯಾಂಗ್
Last Updated 10 ಅಕ್ಟೋಬರ್ 2017, 20:21 IST
ಅಕ್ಷರ ಗಾತ್ರ

ಬೆಂಗಳೂರು: ಸಾಲ ಮರಳಿಸಲಿಲ್ಲವೆಂದು ಪತ್ನಿ ಎದುರು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದರಿಂದ ಕೆರಳಿದ ಕುರಿ ವ್ಯಾಪಾರಿಯೊಬ್ಬ, ತನ್ನ 20 ಸಹಚರರ ಜತೆ ಸೇರಿ ಆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಜೆ.ಸಿ.ನಗರ ರೌಡಿಶೀಟರ್ ನೂರ್ ಅಹಮ್ಮದ್ (22) ಕೊಲೆಯಾದವನು. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿರುವ ನೂರ್ ಗೆಳೆಯರಾದ ಮುದಾಸಿರ್ (23) ಹಾಗೂ ಸಲೀಂ ಅಲಿಯಾಸ್ ಕಾಲು (23) ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುದಾಸಿರ್ ಸ್ಥಿತಿ ಚಿಂತಾಜನಕವಾಗಿದೆ.

ಈ ಕೃತ್ಯ ಎಸಗಿದ ಜುನೈದ್ ಖಾನ್ ಹಾಗೂ ಆತನ 20 ಸಹಚರರನ್ನು ಗೌರಿಬಿದನೂರು ಗ್ರಾಮಾಂತರ ಠಾಣೆಯ ಎಸ್‌ಐ ಅವಿನಾಶ್ ನೇತೃತ್ವದ ತಂಡ ಬಂಧಿಸಿ, ಆರ್‌.ಟಿ.ನಗರ ಪೊಲೀಸರ ಸುಪರ್ದಿಗೆ ಒಪ್ಪಿಸಿದೆ.

ಪತ್ನಿ ಎದುರು ಬಟ್ಟೆ ಬಿಚ್ಚಿಸಿದ: ಕುರಿ ವ್ಯಾಪಾರ ಮಾಡುವ ಜುನೈದ್, ಚಾಮರಾಜಪೇಟೆಯಲ್ಲಿ ಟ್ರಾವೆಲ್‌ ಏಜೆನ್ಸಿ ಕೂಡ ನಡೆಸುತ್ತಿದ್ದಾನೆ. ಮೂರು ತಿಂಗಳ ಹಿಂದೆ ಆತ ನೂರ್ ಅಹಮದ್ ಬಳಿ ₹ 5 ಲಕ್ಷ ಸಾಲ ಪಡೆದಿದ್ದ. ಸಕಾಲಕ್ಕೆ ಹಣ ಮರಳಿಸದ ಕಾರಣಕ್ಕೆ ಕೆರಳಿದ ನೂರ್, ಶನಿವಾರ ರಾತ್ರಿ ಇಬ್ಬರು ಸಹಚರರ ಜತೆ ಜುನೈದ್‌ನ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದ. ಅಲ್ಲದೆ, ಆತನ ಪತ್ನಿ ಎದುರೇ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದ. ಇದರಿಂದ ರೊಚ್ಚಿಗೆದ್ದ ಜುನೈದ್, ಆ ಮೂವರನ್ನೂ ಮುಗಿಸಲು ಸಂಚು ರೂಪಿಸಿದ್ದ. ಅದಕ್ಕೆ ಸ್ನೇಹಿತರು ನೆರವಾಗುವ ಭರವಸೆ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಂಚಿನಂತೆ ಸೋಮವಾರ ಮಧ್ಯಾಹ್ನ ನೂರ್‌ಗೆ ಕರೆ ಮಾಡಿದ ಜುನೈದ್, ‘ರಾತ್ರಿ 1 ಗಂಟೆಗೆ ಜೆ.ಸಿ.ನಗರಕ್ಕೆ ಬಂದರೆ ಸಾಲ ಮರಳಿಸುತ್ತೇನೆ’ ಎಂದು ಹೇಳಿದ್ದ. ಆ ಮಾತನ್ನು ನಂಬಿದ ಆತ, ಮುದಾಸಿರ್ ಹಾಗೂ ಸಲೀಂ ಜತೆ ಕಾರಿನಲ್ಲಿ ದೇವೇಗೌಡ ರಸ್ತೆಯ ವಿಕೆಆರ್ ಆಸ್ಪತ್ರೆ ಸಮೀಪದ ಮೈದಾನಕ್ಕೆ ತೆರಳಿದ್ದ. ಸ್ವಲ್ಪ ಸಮಯದ ನಂತರ ಮಾರಕಾಸ್ತ್ರಗಳೊಂದಿಗೆ ಕಾರುಗಳಲ್ಲಿ ಅಲ್ಲಿಗೆ ಬಂದ ಜುನೈದ್ ನೇತೃತ್ವದ ಗುಂಪು, ಆ ಮೂವರನ್ನೂ ಅಪಹರಿಸಿಕೊಂಡು ಗೌರಿಬಿದನೂರಿಗೆ ತೆರಳಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬೆನ್ನಹತ್ತಿದ ಪೊಲೀಸರು: ಈ ಕೃತ್ಯವನ್ನು ನೋಡಿದ ಸ್ಥಳೀಯರು, ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಕೂಡಲೇ ಆರ್.ಟಿ.ನಗರ ಪೊಲೀಸರು ಮೈದಾನದ ಬಳಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಆಗ ಅವರಿಗೆ ‘ಝೂಮ್’ ಕಾರಿನ ನಂಬರ್ ಪ್ಲೇಟ್ ಸಿಕ್ಕಿತ್ತು.

ನೂರ್‌ಗೆ ಸೇರಿದ ಆ ಕಾರಿನಲ್ಲಿ ಜಿಪಿಎಸ್ ಸಾಧನ ಅಳವಡಿಸಿರುವ ವಿಚಾರ ತಿಳಿದ ಪೊಲೀಸರು, ಅದರ ಆಧಾರದ ಮೇಲೆ ಲೊಕೇಷನ್ ಪತ್ತೆ ಮಾಡಿದ್ದರು. ಆ ಕಾರು 2.30ರ ಸುಮಾರಿಗೆ ಗೌರಿಬಿದನೂರು ತಾಲ್ಲೂಕಿನ ಚಿಗಟಗೆರೆ ಗ್ರಾಮದಲ್ಲಿತ್ತು. ತಕ್ಷಣ ಆರ್‌.ಟಿ.ನಗರ ಪೊಲೀಸರು ಸ್ಥಳೀಯ ಠಾಣೆಯ ಎಸ್‌ಐ ಅವಿನಾಶ್‌ಗೆ ಮಾಹಿತಿ ರವಾನಿಸಿದ್ದರು.

ಚಿಗಟಗೆರೆಯಲ್ಲಿ ಜುನೈದ್ ಸ್ನೇಹಿತನೊಬ್ಬನ ತೋಟದ ಮನೆ ಇದೆ. ಆಗಾಗ್ಗೆ ಪಾರ್ಟಿ ಮಾಡಲು ಗೆಳೆಯರ ಜತೆ ಅಲ್ಲಿಗೆ ಹೋಗಿ ಬರುತ್ತಿದ್ದ ಆತ, ಅಪಹರಿಸಿದ ಮೂವರಿಗೆ ಚಿತ್ರಹಿಂಸೆ ನೀಡಲು ಅದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದಾರಿಯುದ್ದಕ್ಕೂ ಕಾರಿನಲ್ಲೇ ಆ ಮೂವರಿಗೂ ಹಿಗ್ಗಾಮುಗ್ಗಾ ಥಳಿಸಿದ್ದ ಆರೋಪಿಗಳು, ಬೆಳಗಿನ ಜಾವ ಅವರನ್ನು ತೋಟದ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಆರೋಪಿಗಳು ಕೇಬಲ್‌ಗಳಿಂದ ಮನಸೋ ಇಚ್ಛೆ ಥಳಿಸಿದ್ದರು. ಕೊನೆಗೆ ಜುನೈದ್‌ನೇ ನೂರ್‌ಗೆ ದೇಹದ ವಿವಿಧ ಭಾಗಗಳಿಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜಿಪಿಎಸ್ ಸುಳಿವು ಆಧರಿಸಿ ತೋಟದ ಮನೆಗೆ ತಲುಪಿದ ಎಸ್‌ಐ ತಂಡ, ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಸಿಟ್ಟು ಬರುವುದಿಲ್ಲವೇ?

‘ಏಳು ತಿಂಗಳ ಹಿಂದಷ್ಟೆ ವಿವಾಹವಾಗಿದ್ದೇನೆ. ಪತ್ನಿಯ ಮುಂದೆಯೇ ಬಟ್ಟೆ ಬಿಚ್ಚಿಸಿದರೆ ಸಿಟ್ಟು ಬರುವುದಿಲ್ಲವೇ. ನೂರ್‌ನಿಂದ ತುಂಬ ಜನ ತೊಂದರೆ ಎದುರಿಸಿದ್ದರು. ಹೀಗಾಗಿ, ಎಲ್ಲರೂ ಸೇರಿ ಆತನನ್ನು ಕೊಂದೆವು’ ಎಂದು ಜುನೈದ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT