ಸೋಮವಾರ, ಸೆಪ್ಟೆಂಬರ್ 16, 2019
29 °C

ಜಿಲ್ಲೆಗೂ ದಾಂಗುಡಿ ಇಟ್ಟ ಸೈನಿಕ ಹುಳು

Published:
Updated:
ಜಿಲ್ಲೆಗೂ ದಾಂಗುಡಿ ಇಟ್ಟ ಸೈನಿಕ ಹುಳು

ಬಾಗಲಕೋಟೆ: ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬೆಳೆದು ನಿಂತ ಸಾವಿರಾರು ಹೆಕ್ಟೇರ್‌ ಮೆಕ್ಕೆಜೋಳವನ್ನು ಸಂಪೂರ್ಣ ಧ್ವಂಸ ಮಾಡಿರುವ ಸೈನಿಕ ಹುಳು (ಲದ್ದಿ ಹುಳು) ಈಗ ಜಿಲ್ಲೆಗೂ ಲಗ್ಗೆ ಇಟ್ಟಿವೆ. ಮುಧೋಳ ತಾಲ್ಲೂಕಿನ ಲೋಕಾಪುರ ಸಮೀಪದ ಪಿ.ಎಂ.ಬುದ್ನಿಯ ರೈತ ಪರಮಾನಂದ ಮಣಿಗಾರ ಅವರ ಎರಡು ಎಕರೆ ಮೆಕ್ಕೆಜೋಳದ ಹೊಲದಲ್ಲಿ ಮಂಗಳವಾರ ಮೊದಲ ಬಾರಿಗೆ ಕಾಣಿಸಿಕೊಂಡಿವೆ.

ಕಬ್ಬಿಗೆ ಹರಡುವ ಭೀತಿ: ಸೈನಿಕ ಹುಳುಗಳು ಮೆಕ್ಕೆಜೋಳದ ಜೊತೆಗೆ ಕಬ್ಬಿಗೂ ದಾಂಗುಡಿ ಇಡುವ ಭೀತಿ ಎದುರಾಗಿದೆ. ಇದು ರೈತರು ಹಾಗೂ ಕೃಷಿ ಅಧಿಕಾರಿಗಳನ್ನು ತಲ್ಲಣಗೊಳಿಸಿದೆ. ಮುಂಜಾಗರೂಕತಾ ಕ್ರಮಕ್ಕಾಗಿ ಹೋಬಳಿಗೆ ತಲಾ ಎರಡರಂತೆ ಅಧಿಕಾರಿಗಳು ಹಾಗೂ ತಂತ್ರಜ್ಞರ ತಂಡವನ್ನು ಕೃಷಿ ಇಲಾಖೆ ರಚನೆ ಮಾಡಿದೆ.

ಏನಿದು ಸೈನಿಕ ಹುಳು: ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಹೆಕ್ಟೇರ್‌ಗಟ್ಟಲೇ ಬೆಳೆಯನ್ನು ತಿಂದು ತೇಗುವ ಸೈನಿಕ ಹುಳುಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತವೆ. ಮೋಡ ಮುಚ್ಚಿದ ಹಾಗೂ ಆಗಾಗ ಬಿಡುವು ನೀಡಿ ಬಿಸಿಲ ಝಳ ಹೆಚ್ಚುವ ವಾತಾವರಣ ಅವುಗಳಿಗೆ ಅಚ್ಚುಮೆಚ್ಚು. ಹೆಚ್ಚು ಮಳೆಯ ಕಾರಣ ಬೇರಿನ ಭಾಗದಲ್ಲಿ ತೇವಾಂಶ ಹೆಚ್ಚಿರುವುದು ಸೈನಿಕ ಹುಳುಗಳ ಸಂತಾನ ಹೆಚ್ಚಳಕ್ಕೆ ಅನುಕೂಲವಾಗಿದೆ ಎನ್ನಲಾಗುತ್ತಿದೆ.

ವೇಗದ ಸಂತಾನೋತ್ಪತ್ತಿ: ಪ್ರತಿ ಪತಂಗವೂ ಒಮ್ಮೆಗೆ 800ರಿಂದ 900 ಮೊಟ್ಟೆಗಳನ್ನು ಮೆಕ್ಕೆಜೋಳದ ಎಲೆಯ ಹಿಂಭಾಗದಲ್ಲಿ ಇಡುತ್ತವೆ. ಆ ತತ್ತಿಗಳು 15 ದಿನಗಳಲ್ಲಿಯೇ ಮರಿಗಳಾಗಿ ಬದಲಾಗುತ್ತವೆ. ಅವು ರಾತ್ರಿಯಿಡೀ ಎಲೆಯ ಹಸಿರು ಭಾಗವನ್ನು ತಿಂದು ಹಾಕುತ್ತವೆ. ಇದರಿಂದ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಧ್ವಂಸ ಕಾರ್ಯಕ್ಕೆ ಅವಕಾಶವಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಪಿ.ರಮೇಶಕುಮಾರ ಹೇಳುತ್ತಾರೆ.

‘ಜಿಲ್ಲೆಯಲ್ಲಿ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಇದೆ. ಅದೀಗ ಕೊಯ್ಲಿಗೆ ಬಂದಿರುವುದರಿಂದ ಅಷ್ಟಾಗಿ ತೊಂದರೆಯಾಗುವುದಿಲ್ಲ. ಆದರೆ ಸೈನಿಕ ಹುಳು ಕಬ್ಬಿನ ಬೆಳೆಗೆ ದಾಳಿ ಮಾಡಿದರೆ ಎಂಬ ಆತಂಕ ನಮ್ಮದು. ಮೆಕ್ಕೆಜೋಳ ಬಿಟ್ಟರೆ ಕಬ್ಬಿನ ಗರಿಯೇ ಅವುಗಳಿಗೆ ಒಳ್ಳೆಯ ಜಾಗ’ ಎಂದು ರಮೇಶ ಕುಮಾರ ಹೇಳುತ್ತಾರೆ.

‘ಮುಧೋಳ, ಜಮಖಂಡಿ ಭಾಗ ಸೇರಿದಂತೆ ಜಿಲ್ಲೆಯಲ್ಲಿ ಈಗ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕೊಯ್ಲಿಗೆ ಬಂದಿರುವ ಕಬ್ಬಿಗೆ ಸಮಸ್ಯೆ ಇಲ್ಲ. ಆದರೆ ಎರಡು ತಿಂಗಳ ಹಿಂದಷ್ಟೇ ನಾಟಿ ಮಾಡಿರುವ ಕಬ್ಬಿಗೆ ಹಾನಿಯಾಗಲಿದೆ. ಹಾಗಾಗಿ ಸೈನಿಕ ಹುಳುಗಳ ನಾಶಕ್ಕೆ ಇಲಾಖೆಯೊಂದಿಗೆ ರೈತರು ಕೈ

ಜೋಡಿಸಬೇಕು’ ಎಂದು ಅವರು ಮನವಿ ಮಾಡುತ್ತಾರೆ.

Post Comments (+)