ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜತ್ತಿಗೆ, ಹಗ್ಗದ ನೆರವಿಲ್ಲದೇ 20 ಎಕರೆ ಬಿತ್ತನೆ

Last Updated 11 ಅಕ್ಟೋಬರ್ 2017, 5:14 IST
ಅಕ್ಷರ ಗಾತ್ರ

ಬಾಗಲಕೋಟೆ: ತಾಲ್ಲೂಕಿನ ಬೆನಕಟ್ಟಿ ಗ್ರಾಮದ ರೈತ ಅಶೋಕ ಮೆಳ್ಳಿ ಅವರ ಎತ್ತುಗಳು ಒಂದೇ ದಿನದಲ್ಲಿ 20 ಎಕರೆ ಹೊಲ ಬಿತ್ತನೆ ಮಾಡಿ ಅಪೂರ್ವ ಸಾಧನೆ ಮಾಡಿವೆ.
ಅದೂ ಕೊರಳಿಗೆ ಜತ್ತಿಗೆಯಿಲ್ಲದೆ, ಹಗ್ಗದ ಸಹಾಯವೂ ಇಲ್ಲದೇ ಹೆಗಲ ಮೇಲೆ ಬರೀ ನೊಗವನ್ನು ಇಟ್ಟುಕೊಂಡು ಕೂರಿಗೆಯನ್ನು ಎಳೆಯುತ್ತ ಹೊಲವನ್ನು ತಾವೇ ಸಾಲು ಹಿಡಿದು ಬಿತ್ತುವದರ ಮೂಲಕ ನೋಡುಗರು ಹುಬ್ಬೇರಿಸುವಂತೆ ಮಾಡಿವೆ.

ಜತ್ತಿಗೆ ಕಟ್ಟಿ, ಹಗ್ಗ ಹಚ್ಚಿ ಬಿತ್ತನೆ ಮಾಡುವ ಎತ್ತುಗಳು ಸಾಮಾನ್ಯವಾಗಿ ಒಂದು ದಿನಕ್ಕೆ 6 ರಿಂದ 8 ಎಕರೆ ಹೊಲ ಬಿತ್ತನೆ ಮಾಡುತ್ತವೆ. ಆದರೆ ಈ ಎತ್ತುಗಳು ನಿಜವಾಗಿಯೂ ಅಪರೂಪದ ಸಾಧನೆ ಮಾಡಿವೆ.

ಮನ್ನಿಕಟ್ಟಿ ಗ್ರಾಮದ ರೈತ ಶಿವಪ್ಪ ಡೊಳ್ಳಿ ಅವರ ಹೊಲದಲ್ಲಿ ಮಂಗಳವಾರ ಬೆಳಿಗ್ಗೆ 6-.30ಕ್ಕೆ ಬಿತ್ತನೆ ಆರಂಭಿಸಿದ ಈ ಎತ್ತುಗಳು ಮಧ್ಯದಲ್ಲಿ ಒಂದು ನಿಮಿಷವೂ ಕೂಡ ವಿಶ್ರಾಂತಿಯಿಲ್ಲದೇ ನಿರಂತರವಾಗಿ ನಡೆದಾಡಿ ಸಾಯಂಕಾಲ ಐದು ಗಂಟೆಗೆ 20 ಎಕರೆ ಹೊಲ ಬಿತ್ತನೆ ಮಾಡುವ ಗುರಿಯನ್ನು ಪೂರೈಸಿದವು. ಬಸವರಾಜ ಮರಿಗೌಡರ ನಿರಂತರವಾಗಿ ಒಬ್ಬನೇ ಬಿತ್ತನೆ ಮಾಡಿದ್ದು, ಹನಮಂತ ಯಡಹಳ್ಳಿ ಕೂರಿಗೆಯ ಹಿಂದೆ ಪಳಿಗೂಡಿಸಿದ್ದು ಸಹ ವಿಶೇಷ.

ಜನಸಾಗರ: ದೂರದ ಜೇವರ್ಗಿ, ಯಾದಗಿರಿ, ಕೊಪ್ಪಳ, ನರಗುಂದ, ನವಲಗುಂದ, ಮುಧೋಳ ತಾಲ್ಲೂಕಿನ ಮೆಳ್ಳಿಗೇರಿ, ಬೀಳಗಿ ತಾಲೂಕಿನ ಸೊನ್ನ, ಬಾದಾಮಿ, ಹುನಗುಂದ ಹಾಗೂ ಬಾಗಲಕೋಟ ತಾಲ್ಲೂಕಿನ ವಿವಿಧ ಅನೇಕ ಗ್ರಾಮಗಳ ರೈತರು ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಬೆನಕಟ್ಟಿ ಗ್ರಾಮಕ್ಕೆ ತಂಡೋಪತಂಡವಾಗಿ ಬಂದಿದ್ದರು.

ಹಗ್ಗ, ಜತ್ತಿಗೆಯಿಲ್ಲದೇ ಬಿತ್ತನೆಗೈಯುವ ಮೆಳ್ಳಿ ಅವರ ಎತ್ತುಗಳ ಸಾಹಸ ಕಂಡು ಬೆರಗಾದರು. ಯಾವುದೇ ಸಂದರ್ಭದಲ್ಲೂ ಸಾಲನ್ನು ಬಿಡದೇ, ಹೊಲದ ಬದುವಿಗೆ ಬಂದು ತಿರುಗಿ ಯಾರ ಸಹಾಯವೂ ಇಲ್ಲದೇ ಮತ್ತೆ ಸಾಲು ಹಿಡಿದು ನಡೆದಾಡಿದ ಎತ್ತುಗಳ ಸಾಹಸವನ್ನು ಮನಸಾರೆ ಕೊಂಡಾಡಿದರು.

ಜನಪ್ರತಿನಿಧಿಗಳ ಭೇಟಿ: ಶಾಸಕ ಎಚ್.ವೈ.ಮೇಟಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಹೊಲಕ್ಕೆ ಭೇಟಿ ನೀಡಿ ಎತ್ತುಗಳ ಬಿತ್ತನೆ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

₹ 10 ಸಾವಿರ ಬಹುಮಾನ ನೀಡಿದ ಮೇಟಿ
ಹೊಲಕ್ಕೆ ಬಂದ ಶಾಸಕ ಎಚ್.ವೈ.ಮೇಟಿ ಕೆಲಹೊತ್ತು ಸ್ವತ: ಹೆಗಲಿಗೆ ಉಡಿಚೀಲ ಹಾಕಿ ಬಿತ್ತನೆ ಮಾಡಿ ಎತ್ತುಗಳ ಸಾಹಸವನ್ನು ಪ್ರಶಂಸಿಸಿದರು. ಈ ವೇಳೆ ರೈತ ಅಶೋಕ ಮೆಳ್ಳಿ ಅವರಿಗೆ ₨10 ಸಾವಿರ ಬಹುಮಾನ ನೀಡಿದರು. ಮಳೆಯಾಶ್ರಿತ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುವ ಬೆನಕಟ್ಟಿಯ ರೈತರು ಉಳಿದವರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT