ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆಯಿಂದ ಅವಾಂತರ

Last Updated 11 ಅಕ್ಟೋಬರ್ 2017, 5:28 IST
ಅಕ್ಷರ ಗಾತ್ರ

ಘಟಪ್ರಭಾ: ಕಳೆದ ಹದಿನೈದು ದಿನಗಳಿಂದ ಪಟ್ಟಣದ ಎಲ್ಲೆಡೆ ಸುರಿಯುತ್ತಿರುವ ಮಳೆಯು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಗುಡ್ಡದಿಂದ ಕಲ್ಲುಬಂಡೆಗಳು ರಸ್ತೆ ಮೇಲೆ ಹರಡಿಕೊಳ್ಳುವುದರಿಂದ ರಸ್ತೆ ಸಂಚಾರ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಸಮೀಪದ ಧುಪದಾಳದ ರಸ್ತೆಗಳ ಪಕ್ಕ ಅಲ್ಲಲ್ಲಿ ಇದ್ದ ತಗ್ಗುಗಳೆಲ್ಲವೂ ಈಗ ನೀರಿನಿಂದ ತುಂಬಿಕೊಂಡಿವೆ. ಕೆಲವು ರಸ್ತೆಗಳ ಮಧ್ಯೆ ನೀರು ನಿಂತು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಧುಪದಾಳದ ಸರ್ಕಾರಿ ಶಾಲೆಯ ಎದುರಿನ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ ದೊಡ್ಡ ದೊಡ್ಡ ಗುಂಡಿಗಳ ನಿರ್ಮಾಣವಾಗಿವೆ. ಇಲ್ಲಿ ಸಂಚರಿಸುವ ವಾಹನಗಳ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡೆ ಸಾಗಬೇಕು.

ಧುಪದಾಳದಿಂದ ಘಟಪ್ರಭಾದೆಡೆಗೆ ಸಾಗುವ ರಸ್ತೆ ಬಳಿಯಲ್ಲಿರುವ ಚರ್ಚ್‌ ಎದುರಿನ ರಸ್ತೆಯಲ್ಲಿ ನೀರು ನಿಂತಿದೆ. ಇಲ್ಲಿ ರಸ್ತೆ ಸಂಚಾರಿಗಳಿಗೆಲ್ಲ ರಾಡಿ ನೀರಿನ ಅಭಿಷೇಕದ ಅನುಭವವಾಗಲಿದೆ. ಸಮೀಪದ ಗೋಕಾಕ ಜಲಪಾತ–ಗೋಕಾಕ ಮಧ್ಯೆ ಇರುವ ರಸ್ತೆ ವಿಸ್ತರಣೆ ಕಾಮಾಗಾರಿ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ.

ವ್ಯಾಪಕ ಮಳೆಯಿಂದಾಗಿ ರಸ್ತೆಯ ಇಕ್ಕೇಲಗಳಲ್ಲಿ ನೀರಿನ ಕೋಡಿ ಹರಿದ ಪರಿಣಾಮ ಕೊರೆತ ಉಂಟಾಗಿ ತಗ್ಗುಗಳು ನಿರ್ಮಾಣಗೊಂಡಿವೆ. ಸುತ್ತಲೂ ಗುಡ್ಡವಿರುವುದರಿಂದ ಕಲ್ಲುಗಳು ಕುಸಿದು ಬೀಳುತ್ತಿವೆ. ಮಳೆಯಿಂದಾಗಿ ಹರಳುಗಳು, ಕಲ್ಲುಗಳು ರಸ್ತೆ ಮೇಲೆಲ್ಲ ಹರಡಿವೆ.

ಇದರಿಂದ ದ್ವಿಚಕ್ರ ವಾಹನಗಳ ಸಂಚಾರ ಬಲು ಕಷ್ಟದಾಯಕವಾಗಿದೆ. ಕಾಮಗಾರಿಯನ್ನು ಅವೈಜ್ಞಾನಿಕ ರೀತಿಯಲ್ಲಿ ಮಾಡಿರುವುದರಿಂದ ಸಮಸ್ಯೆಯು ಗಂಭೀರ ರೂಪ ತಾಳಲು ಕಾರಣವಾಗಿದೆ ಎಂದು ದಿನನಿತ್ಯ ಸಂಚರಿಸುವ ಶಿಕ್ಷಕ ದೀಪಕ ಪವಾರ ದೂರಿದರು.

ರಸ್ತೆ ದೀಪಗಳ ಅಳವಡಿಸಿ: ಈ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರವಿರುವುದರಿಂದ ದೀಪಗಳನ್ನು ಅಳವಡಿಸಬೇಕೆಂದು ಜನರ ಆಗ್ರಹವಾಗಿದೆ. ಖಾಸಗಿ ಕಂಪೆನಿಗೆ ಸಂಚರಿಸಿರುವ ಕಾರ್ಮಿಕರ ಅನುಕೂಲಕ್ಕಾಗಿ ಖಾಸಗಿ ಪ್ರಾಯೋಜಕತ್ವದಲ್ಲಾದರೂ ಸೋಲಾರ್‌ ದೀಪಗಳನ್ನಾಗಲಿ, ರೆಡಿಯಂ ಸ್ಟಿಕ್ಕರ್‌ ಆಗಲಿ ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಗೋಕಾಕ ಫಾಲ್ಸಿನ ಸಮಾಜ ಸೇವಕ ಪಟ್ಟಣಕೋಡಿ ಆಗ್ರಹಿಸಿದ್ದಾರೆ.

ಕೂಡಲೆ ಸಂಬಂಧಪಟ್ಟ ಇಲಾಖೆ ದುರಸ್ತಿ ಕೆಲಸಕ್ಕೆ ಮುಂದಾಗಬೇಕು. ಮತ್ತು ನೀರು ಹರಿಯುವಂತೆ ಕೊಳವೆಗಳನ್ನು ಅಳವಡಿಸಬೇಕು. ರಸ್ತೆ ಪಕ್ಕದ ಗುಡ್ಡದಿಂದ ಕಲ್ಲುಗಳು ಬೀಳದಂತೆ ಜಾಳಿಗೆಗಳನ್ನು ಹಾಕಬೇಕು. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ, ಗುಡ್ಡದ ಪ್ರದೇಶವಾಗಿದೆ ಅಲ್ಲದೆ ತಿರುವುಗಳಿವೆ. ಕಾರಣ ಕೂಡಲೆ ದುರಸ್ತಿಗೊಳಿಸಬೇಕು ಎಂದು ಬಾಳಪ್ಪ ನಾಯಿಕ, ಗಂಗಪ್ಪ ಗಾಡಿವಡ್ಡರ ಹಾಗೂ ಲಕ್ಷ್ಮಣ ಪಡತಾರ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT