ಸೋಮವಾರ, ಸೆಪ್ಟೆಂಬರ್ 16, 2019
29 °C

ವೈದ್ಯರಿಲ್ಲದೇ ಸೊರಗಿದ ಆರೋಗ್ಯ ಕೇಂದ್ರ

Published:
Updated:
ವೈದ್ಯರಿಲ್ಲದೇ ಸೊರಗಿದ ಆರೋಗ್ಯ ಕೇಂದ್ರ

ನಾಯಕನಹಟ್ಟಿ: ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಹೋಬಳಿಯ ನೆಲಗೇತನಹಟ್ಟಿ ಗ್ರಾಮಸ್ಥರು ಮಂಗಳವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ಎನ್.ಮುತ್ತಯ್ಯ ಮಾತನಾಡಿ, ಒಂಬತ್ತು ದಿನಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಮೋಡಕವಿದ ವಾತವರಣ ಇರುವುದರಿಂದ ಹಲವು ರೋಗಗಳು ಹರಡುತ್ತಿವೆ. ಆಸ್ಪತ್ರೆಗಾಗ ನಾಯಕನಹಟ್ಟಿ, ಚಿತ್ರದುರ್ಗಕ್ಕೆ ತೆರಳಬೇಕು ಎಂದರು.

ಈ ಹಿಂದೆ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಾದ ಡಾ.ನಳಿನಾಕ್ಷಿ ಹೆರಿಗೆ ರಜೆ ತೆರಳಿದ್ದಾರೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವವರು ಇಲ್ಲದಂತಾಗಿದೆ. ಸಣ್ಣಪುಟ್ಟ ಕಾಯಿಲೆಗಳು ಉಂಟಾದರೆ ನಾಯಕನಹಟ್ಟಿ, ಚಳ್ಳಕೆರೆ ಇಲ್ಲವೇ ಚಿತ್ರದುರ್ಗಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಯಿಲೆಗೆ ತುತ್ತಾದ ಸಂದರ್ಭದಲ್ಲಿ ಚಿಕಿತ್ಸೆಗೆ ಬಂದ ವೇಳೆ ವೈದ್ಯರಿಲ್ಲದೇ ಬೇರೆ ಕಡೆ ಹೋಗಲು ಹಣಕಾಸಿನ ತೊಂದರೆ ಎದುರಾಗುವುದು. ಹಾಗಾಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಕಾರಣ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಆಸ್ಪತ್ರೆಗೆ ಹಾಕಿದ್ದೇವೆ. ವೈದ್ಯರನ್ನು ನಿಯೋಜಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರೇಮಸುಧಾ ಮಾತನಾಡಿ, ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಹೆರಿಗೆ ರಜೆ ಹೋಗಿದ್ದಾರೆ. ವೈದ್ಯರ ಕೊರತೆ ಇದ್ದು, ಡಾ.ಮಹಂತೇಶ್ ಎನ್ನುವ ವೈದ್ಯರನ್ನು ನಿಯೋಜಿಸಲಾಗಿದೆ. ಎಂದಿನಂತೆ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ.  ಪ್ರತಿಭಟನೆಯನ್ನು ಹಿಂಪಡೆಯುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸಣ್ಣಬೋರಯ್ಯ, ರೈತ ಮುಖಂಡ ಕೊಡ್ಲಿ ಬೋರಯ್ಯ, ಡಿ.ಜೆ.ಕೆ.ಓಬಣ್ಣ, ಕೆ.ಬಿ.ದೊಡ್ಡಬೋರಯ್ಯ, ಅಂಗಡಿ ತಿಪ್ಪೇರುದ್ರಪ್ಪ, ಮೂಗನಬೋರಯ್ಯ, ಸಣ್ಣಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.

Post Comments (+)