ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೋಪಕರಣಗಳಿಂದ ಇಂಗ್ಲಿಷ್ ಕಲಿಸುವ ಶಿಕ್ಷಕ

Last Updated 11 ಅಕ್ಟೋಬರ್ 2017, 6:44 IST
ಅಕ್ಷರ ಗಾತ್ರ

ಬಸವಾಪಟ್ಟಣ: ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಚನ್ನಗಿರಿ ತಾಲ್ಲೂಕು ಮರಬನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎ.ಎನ್‌.ಚಂದ್ರಶೇಖರ್‌, ತಮ್ಮ ಪ್ರಾಮಾಣಿಕ ಬೋಧನಾ ಕಾರ್ಯದಿಂದ ಇತರ ಶಿಕ್ಷಕರಿಗೂ ಮಾದರಿಯಾಗಿದ್ದಾರೆ. ತಮ್ಮ 22ನೇ ವಯಸ್ಸಿಗೇ ಶಿಕ್ಷಕರಾಗಿ ನೇಮಕಗೊಂಡ ಇವರು 2006ರಲ್ಲಿ ಮರಬನಹಳ್ಳಿ ಶಾಲೆಗೆ ವರ್ಗವಾಗಿ ಬಂದರು.

ನವೀನ ಮಾದರಿಯ ಪಾಠಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ವಿಷಯದ ಪರಿಣಾಮಕಾರಿಯಾಗಿ ಬೋಧನೆಗೆ ಅವರು ಕೈಗೊಂಡಿರುವ ‘ಕಲಿಕಾ ಕಾರ್ನರ್‌’ ಕ್ರಮ ಯಶಸ್ವಿಯಾಗಿದೆ.

ಪಾಠದ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳೊಂದಿಗೆ ಇತರ ಕಲಿಕೋಪಕರಣಗಳನ್ನು ಬಳಸಿ ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಬೋಧಿಸುವ ಕಲೆಯನ್ನು ಚಂದ್ರಶೇಖರ್‌ ಇದರಲ್ಲಿ ಬಳಸಿಕೊಂಡಿದ್ದಾರೆ. ತಾವೇ ತಯಾರಿಸಿದ ಸಿ.ಡಿಗಳನ್ನು ಮಕ್ಕಳಿಗೆ ತೋರಿಸಿ, ಇಂಗ್ಲಿಷ್ ಪಾಠಗಳನ್ನು ಅರ್ಥ ಮಾಡಿಸುತ್ತಾರೆ.

ಹಿಂದಿ ಶಿಕ್ಷಕರಾಗಿ ನೇಮಕಗೊಂಡ ಅವರು, ಸ್ವಂತ ಆಸಕ್ತಿಯಿಂದ ಇಂಗ್ಲಿಷ್‌ ಅನ್ನು ಸರಳವಾಗಿ ಬೋಧಿಸಿ, ಮಕ್ಕಳಿಗೆ ಉತ್ತಮ ತರಬೇತಿ ನೀಡಿದ್ದಾರೆ. ಇದರಿಂದ
ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಇವರ ಬೋಧನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ.

ಪಿ.ಯು.ನಂತರ ಟಿ.ಸಿ.ಎಚ್‌. ತರಬೇತಿ ಪಡೆದ ಅವರು ಶಿಕ್ಷಕರಾಗುವ ಮೊದಲೇ ಇಂಗ್ಲಿಷ್‌ ಎಂ.ಎ ಹಾಗೂ ಬಿ.ಎಡ್‌. ಪದವಿ ಪಡೆದರು. ಕವಿಯೂ ಆಗಿರುವ ಅವರು ಪಾಠಕ್ಕೆ ಸಂಬಂಧಿಸಿದ ಗೀತೆಗಳನ್ನು ರಚಿಸಿ ಮಕ್ಕಳಿಗೆ ಕಲಿಸಿದ್ದಾರೆ.

ಶಾಲೆಯ ತುಂಬಾ ಇರುವ ಕಲಿಕೋಪರಣಗಳು, ಮಕ್ಕಳಿಂದ ತಯಾರಿಸಿದ ವಿವಿಧ ಮಾದರಿಗಳು ಚಂದ್ರಶೇಖರ್‌ ಅವರ ಕಾರ್ಯಪ್ರೀತಿಯನ್ನು ಎತ್ತಿ ತೋರಿಸುತ್ತವೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ನಾಗರತ್ನಮ್ಮ.

ಈಗಾಗಲೇ ಗ್ರಾಮಸ್ಥರಿಂದ ಜನಮೆಚ್ಚಿದ ಶಿಕ್ಷಕ ಮತ್ತು ರೈತ ಸಂಘದಿಂದ ಸೃಜನಶೀಲ ಶಿಕ್ಷಕ ಎಂಬ ಪ್ರಶಸ್ತಿಯನ್ನು ಚಂದ್ರಶೇಖರ್ ಪಡೆದಿದ್ದಾರೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳಿಂದ ಅವರು ರಾಜ್ಯ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಈ ಶಾಲೆಯನ್ನು ದತ್ತು ಪಡೆದಿರುವ ಜಿ.ಎಂ.ತೀರ್ಥಪ್ಪ ಹೇಳಿದರು.

ಸಹೋದ್ಯೋಗಿಗಳಾದ ವಿಜಯ ಕುಮಾರ್‌, ರೇಖಾ, ಶಮೀಮ್‌ ಬಾನು ಹಾಗೂ ಗ್ರಾಮ ಪಂಚಾಯ್ತಿ ಮತ್ತು ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅಗತ್ಯ ಚಟುವಟಿಕೆ ನಡೆಸಲು ಸಾಧ್ಯವಾಗಿದೆ. ಒಂದು ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ಸೌಲಭ್ಯವಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಸೇರಿಸದೆ ಕಾನ್ವೆಂಟ್‌ ಶಾಲೆಗಳಿಗೆ ಮಾರು ಹೋಗುತ್ತಿರು ವುದು ವಿಷಾದನೀಯ ಎನ್ನುತ್ತಾರೆ ಚಂದ್ರಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT