ಭೀಷ್ಮಕೆರೆಯಲ್ಲಿ ಬಣ್ಣದ ಕೊಕ್ಕರೆ ಕಲರವ

ಶನಿವಾರ, ಮೇ 25, 2019
22 °C

ಭೀಷ್ಮಕೆರೆಯಲ್ಲಿ ಬಣ್ಣದ ಕೊಕ್ಕರೆ ಕಲರವ

Published:
Updated:
ಭೀಷ್ಮಕೆರೆಯಲ್ಲಿ ಬಣ್ಣದ ಕೊಕ್ಕರೆ ಕಲರವ

ಗದಗ: ನಗರದ ಹೃದಯ ಭಾಗದಲ್ಲಿರುವ ಭೀಷ್ಮಕೆರೆ ಇದೀಗ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತಿದೆ. ರಜಾ ದಿನಗಳಲ್ಲಿ ಕೆರೆಯ ಸೊಬಗು ಕಣ್ತುಂಬಿಸಿಕೊಳ್ಳಲು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಬಸವೇಶ್ವರ ಪುತ್ಥಳಿ ಎದುರಿಗಿರುವ ಆಕರ್ಷಕ ಉದ್ಯಾನ, ಮಕ್ಕಳ ಆಟೋಪಕರಣಗಳು, ದೋಣಿ ವಿಹಾರ ಜನರನ್ನು ಸೆಳೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಭೀಷ್ಮಕೆರೆಯಲ್ಲಿ ವಿವಿಧ ಜಾತಿಯ ಬಾನಾಡಿಗಳ ದರ್ಶನವಾಗುತ್ತಿದ್ದು, ಪಕ್ಷಿಪ್ರಿಯರನ್ನು ಆಕರ್ಷಿಸುತ್ತಿವೆ.

ಸಾಮಾನ್ಯವಾಗಿ ನವೆಂಬರ್‌ನಿಂದ ಜನವರಿ ತಿಂಗಳವರೆಗೆ ಜಿಲ್ಲೆಯ ವಿವಿಧ ಕೆರೆಗಳಿಗೆ ವಿವಿಧ ಜಾತಿಯ ವಿದೇಶಿ ಪಕ್ಷಿಗಳು ವಲಸೆ ಬರುತ್ತವೆ. ಆದರೆ, ಈ ಬಾರಿ ಅಕ್ಟೋಬರ್‌ನಲ್ಲೇ ಕೆಲವು ವಿದೇಶಿ ಬಾನಾಡಿಗಳು ಭೀಷ್ಮಕೆರೆಗೆ ಬಂದಿಳಿದಿವೆ. ಜಿಲ್ಲೆಯ ಪ್ರಮುಖ ಪಕ್ಷಿಧಾಮವಾದ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ಬತ್ತಿದ್ದರಿಂದ ಕಳೆದ ಬಾರಿ ಅಲ್ಲಿಗೆ ಬಂದಿದ್ದ ಕೆಲವು ಪಕ್ಷಿಗಳು ಆಹಾರ ಅರಸುತ್ತಾ ಗದುಗಿನ ಭೀಷ್ಮಕೆರೆಗೂ ಬಂದಿದ್ದವು. ಇನ್ನೂ ಕೆಲವು ಪಕ್ಷಿಗಳು ಲಕ್ಷ್ಮೇಶ್ವರದ ಶೆಟ್ಟಿಕೆರೆಗೆ ಮತ್ತು ಹಿರೇಹಂದಿಗೋಳದ ಕೆರೆಗೆ ಬಂದಿದ್ದವು.

ಕಳೆದ ಎರಡು ವಾರಗಳಿಂದ ಭೀಷ್ಮ ಕೆರೆಯ ನಡುಗಡ್ಡೆಗಳಲ್ಲಿ ಬಣ್ಣದ ಕೊಕ್ಕರೆಗಳು (ಪೇಂಟೆಡ್ ಸ್ಟಾರ್ಕ್‌), ಪಟ್ಟತಲೆ ಹೆಬ್ಬಾತುಗಳ ದರ್ಶನವಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತು ವಾಯುವಿಹಾರಕ್ಕೆ ಕೆರೆ ಅಂಗಳಕ್ಕೆ ಬರುವ ಜನರು ಈ ಪಕ್ಷಿಗಳನ್ನು ಗುರುತಿಸಿದ್ದಾರೆ.

ಅಪರೂಪಕ್ಕೊಮ್ಮೆ ನೀರಿನ ಅಲೆಗೆ ತಕ್ಕಂತೆ ತೇಲುತ್ತ ಹಾರುವ ಗ್ರೇ ಹೆರಾನ್‌, ಕೆನ್ನೀಲಿ ಬಕ, ಬಿಳಿ ಕೊಕ್ಕರೆಗಳು ಸಹ ಕಣ್ಮನ ಸೆಳೆಯುತ್ತಿವೆ. ಬಣ್ಣದ ಕೊಕ್ಕರೆಗಳು ಕೆರೆಯ ನಡುಗಡ್ಡೆಗಳಲ್ಲಿ ಅಲ್ಲಲ್ಲಿ ಹಿಂಡಾಗಿ ಕುಳಿತು ಆಹಾರ ಅರಸುತ್ತಿರುವುದು ಕಾಣಿಸುತ್ತದೆ.'

‘ವಲಸೆ ಪಕ್ಷಿಗಳು ಹೆಚ್ಚಾಗಿ ಗೂಡುಕಟ್ಟಲು,ಮರಿ ಮಾಡಲು ಅನುಕೂಲವಾಗುವ ಪುಟ್ಟ ದ್ವೀಪದಂತಹ, ನಡುಗಡ್ಡೆ ಪ್ರದೇಶಗಳನ್ನು ಹೆಚ್ಚು ಇಷ್ಟಪಡುತ್ತವೆ. ಕೆರೆಯಲ್ಲಿರುವ ಮೀನು, ಕ್ರಿಮಿಕೀಟಗಳನ್ನು ಆಹಾರಕ್ಕಾಗಿ ಅವಲಂಬಿಸಿರುತ್ತವೆ. ಕೆರೆಯಂಗಳದಲ್ಲಿ ಕರಿಜಾಲಿ, ಮುಳ್ಳುಕಂಟಿ ಇದ್ದರೆ ಗೂಡು ಕಟ್ಟಲು ಅನುಕೂಲವಾಗುತ್ತದೆ.

ಭೀಷ್ಮ ಕೆರೆಗೆ ತುಂಗಭದ್ರಾ ನೀರು ಭರ್ತಿ ಮಾಡಿರುವುದರಿಂದ ಕೆರೆಗೆ ಬರುವ ಪಕ್ಷಿಗಳು ಹೆಚ್ಚಿವೆ. ಅಲ್ಲಲ್ಲಿ ನಡುಗಡ್ಡೆಗಳೂ ಇರುವುದರಿಂದ ಪಕ್ಷಿಗಳನ್ನು ಆಕರ್ಷಿಸುತ್ತಿವೆ. ವಲಸೆ ಪಕ್ಷಿಗಳ ಕಾಲ ಆರಂಭವಾಗಿದೆ ’ ಎಂದು ವಲಯ ಅರಣ್ಯ ಅಧಿಕಾರಿ ಕಿರಣ್‌ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಭೀಷ್ಮಕೆರೆಯ ಸುತ್ತಮುತ್ತ ಮರಗಿಡಗಳು ಕಡಿಮೆ. ಹೀಗಾಗಿ, ಇಲ್ಲಿ ಪಕ್ಷಿ ಆವಾಸಯೋಗ್ಯ ಲಕ್ಷಣಗಳು ಕಡಿಮೆ. ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸಿದರೆ, ಅಥವಾ ಪಕ್ಷಿ ಪೂರಕ ವಾತಾರವಣ ನಿರ್ಮಿಸಿದರೆ ಇನ್ನೂ ಹೆಚ್ಚಿನ ಪಕ್ಷಿಗಳನ್ನು ಆಕರ್ಷಿಸಬಹುದು’ ಎನ್ನುತ್ತಾರೆ ನಗರದ ಪಕ್ಷಿ ಪ್ರೇಮಿಯೊಬ್ಬರು.

‘ಕೆರೆಗೆ ನೀರು ತುಂಬಿಸಿ ಬೋಟಿಂಗ್‌ ಪ್ರಾರಂಭಿಸಲಾಗಿದೆ. ಇನ್ನೇನು ವಲಸೆ ಪಕ್ಷಿಗಳು ಬರಲು ಆರಂಭಿಸುತ್ತವೆ. ಆದರೆ, ಬೋಟಿಂಗ್‌ ಶಬ್ದಕ್ಕೆ ಹೆದರಿ ಹೆಚ್ಚಿನ ಪಕ್ಷಿಗಳು ಇತ್ತ ಸುಳಿಯುವುದಿಲ್ಲ. ಪಕ್ಷಿಗಳು ವಲಸೆ ಬರುವ ಸಮಯದಲ್ಲಿ (ಅಕ್ಟೋಬರ್‌ನಿಂದ – ಡಿಸೆಂಬರ್‌ ಅಂತ್ಯದ ವರೆಗೆ) 3 ತಿಂಗಳು ಬೋಟಿಂಗ್‌ ನಿಲ್ಲಿಸಬೇಕು’ ಎನ್ನುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry