ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ನೀರು ಬಳಕೆಗೆ ನಿರುತ್ಸಾಹ?

Last Updated 11 ಅಕ್ಟೋಬರ್ 2017, 7:07 IST
ಅಕ್ಷರ ಗಾತ್ರ

ಹಿರೇಕೆರೂರ: ಇತ್ತೀಚೆಗೆ ಸುರಿಯುತ್ತಿರುವ ರಭಸದ ಮಳೆಗೆ ಕುಮುದ್ವತಿ ನದಿ ತುಂಬಿ ಹರಿಯುತ್ತಿದ್ದು, ತಾಲ್ಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆಯೂ ಭರ್ತಿಯಾಗಿದೆ.ಕುಮುದ್ವತಿ ನದಿಯು ಶಿಕಾರಿಪುರ ತಾಲ್ಲೂಕು ಮೂಲಕ ಹರಿದು ಬಂದು ಮದಗ ಕೆರೆ ಸೇರುತ್ತದೆ.

ಬಳಿಕ ಕೆರೆಯ ನೀರು ಕೋಡಿ ಮೂಲಕ ಹರಿದು ಚಿಕ್ಕಪುಟ್ಟ ತೊರೆಗಳನ್ನು ನಿರ್ಮಿಸುತ್ತ ಮುಂದೆ ಸಾಗಿ ಮತ್ತೆ ಕುಮುದ್ವತಿ ಸೇರುತ್ತಿದೆ. ಕೋಡಿಯಿಂದ ಹರಿಯುವ ನೀರು ಎರಡು ಗುಡ್ಡಗಳನ್ನು ಸೀಳಿ ಬಂಡೆಗಲ್ಲುಗಳ ಮೇಲಿಂದ ಧುಮ್ಮಿಕ್ಕಿ ‘ಜಲಪಾತ’ ಸೃಷ್ಟಿಸಿ, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

‘ವಿವಿಧೆಡೆಯಿಂದ ಬರುವ ಜನರು ಕೆರೆಯ ವೈಭವ, ಜಲಪಾತದ ಸೊಬಗು ಸವಿಯುತ್ತಿದ್ದಾರೆ. ಆದರೆ, ಕೋಡಿ ಮೂಲಕ ಹರಿದು ನದಿ ಸೇರುವ ನೀರನ್ನು ಕೃಷಿ ಇಲ್ಲವೇ ಕೆರೆ ತುಂಬಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ಸಾಹ ತೋರುತ್ತಿಲ್ಲ’ ಎಂಬುದು ಸ್ಥಳೀಯರು, ರೈತರ ಮುಖಂಡರ ಆರೋಪ.

‘ಕುಮುದ್ವತಿ ನದಿ ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ತಡೆಯಲು ತಿಪ್ಪಾಯಿಕೊಪ್ಪ, ಖಂಡಿಬಾಗೂರು, ಹಿರೇಮೊರಬ ತೋಟಗಂಟಿ ಹಾಗೂ ಹಿರೇಮಾದಾಪುರ ಗ್ರಾಮಗಳ ಸಮೀಪ ಚೆಕ್‌ಡ್ಯಾಂ ನಿರ್ಮಿಸಲು ಒತ್ತಾಯಿಸಲಾಗಿದೆ. ಈ ಕುರಿತು ಚಿಕ್ಕ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್ ಮುಖಂಡ ಬಿ.ಸಿ.ಪಾಟೀಲ ತಿಳಿಸಿದ್ದಾರೆ.

ಇನ್ನು, ‘ಬಿ.ಎಚ್.ಬನ್ನಿಕೋಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ಮದಗ ಕೆರೆಯ ಕೋಡಿಯನ್ನು ಎತ್ತರಿಸಲಾಗಿತ್ತು. ಇದರಿಂದ ತಾಲ್ಲೂಕಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು. ಆದರೆ, ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಪಕ್ಕದ ತಾಲ್ಲೂಕಿನವರು ಕೋಡಿ ಒಡೆದು ಹೆಚ್ಚು ನೀರು ನಿಲ್ಲದಂತೆ ನೋಡಿಕೊಂಡರು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಕಾಶ ಬನ್ನಿಕೋಡ ದೂರುತ್ತಾರೆ.

‘ಮದಗ ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಕಾಲುವೆ ಮೂಲಕ 715 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಬಲದಂಡೆ ಕಾಲುವೆಯು 6 ಕಿ.ಮೀ. ಮುಂದೆ ಒಡೆದಿದೆ. ಹೀಗಾಗಿ ನೀರು ಮುಂದೆ ಹರಿಯುತ್ತಿಲ್ಲ’ ಎಂದು ನೀರಾವರಿ ಇಲಾಖೆಯ ಹಾನಗಲ್ ಉಪ ವಿಭಾಗದ ಸಹಾಯಕ ಎಂಜಿನಿಯರ್ ಜಾವೀದ್ ಮುಲ್ಲಾ ತಿಳಿಸಿದ್ದಾರೆ.

‘ಎಡದಂಡೆ ಕಾಲುವೆಯೂ ಅಲ್ಲಲ್ಲಿ ದುರಸ್ತಿ ಮಾಡಬೇಕಿದೆ. ಎಡದಂಡೆ ಕಾಲುವೆಯ ಆರಂಭದ 600 ಮೀಟರ್ ದೂರದಲ್ಲಿ ನಿರ್ಮಿಸಿರುವ ಬ್ರಿಟಿಷರ ಕಾಲದ ಸೇತುವೆ ಶಿಥಿಲಗೊಂಡಿದೆ. ಹೊಸ ಸೇತುವೆ ನಿರ್ಮಿಸಲು ₹1.50 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಅವರು ಹೇಳಿದ್ದಾರೆ.

ಇಆರ್‌ಸಿ ಮುಂದೆ ಕೆರೆ ತುಂಬಿಸುವ ಯೋಜನೆ: ‘ಮದಗ ಕೆರೆಯಿಂದ ಹಿರೇಕೆರೂರಿನ ದುರ್ಗಾದೇವಿ ಕೆರೆಗೆ ನೀರು ತುಂಬಿಸುವ ₹24 ಕೋಟಿ ಮೊತ್ತದ ಯೋಜನೆಗೆ ಅಂದಾಜು ಮರು ಪರಿಶೀಲನೆ ಸಮಿತಿ(ಇಆರ್‌ಸಿ) ಮುಂದಿದೆ. ಈ ಮಾರ್ಗದ ನಡುವಣ ಎಂಟು ಕೆರೆಗಳನ್ನು ತುಂಬಿಸಿಕೊಂಡು ದುರ್ಗಾದೇವಿ ಕೆರೆಗೆ ನೀರು ತರುವ ಯೋಜನೆ ಇದಾಗಿದೆ. ಈ ಸಮಿತಿಯಿಂದ ಅನುಮೋದನೆ ಸಿಕ್ಕ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆಕ ಎಂದು ಜಾವೀದ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT