ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಕಾಗಿಣಾ ನದಿಯಲ್ಲಿ ಪ್ರವಾಹ ಬೆಚ್ಚಿ ಬಿದ್ದ ಜನತೆ

Last Updated 11 ಅಕ್ಟೋಬರ್ 2017, 7:22 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಧಾರಾಕಾರ ಭಾರಿ ಮಳೆಯಾಗಿದೆ. ಗುಡುಗು ಮಿಂಚಿನೊಂದಿಗೆ ವರುಣ ಅಬ್ಬರಿಸಿದ್ದಾನೆ. ನಿದ್ದೆಗೆ ಜಾರಿದ ಜನರು ಗುಡುಗಿನ ಸದ್ದಿಗೆ ಹಾಸಿಗೆಯಲ್ಲಿ ಬೆಚ್ಚಿ ಬಿದ್ದು ನಿದ್ದೆ ಕೆಡಿಸಿಕೊಳ್ಳುವಂತಾಗಿದೆ. ರಾತ್ರಿ ವಿದ್ಯುತ್ ಕೈಕೊಟ್ಟಿತ್ತು. ಮಿಂಚಿನ ಬೆಳಕು ಮಾತ್ರ ಮನೆಯೊಳಗೆ ನುಗ್ಗಿ ಬರುತ್ತಿತ್ತು.

ಧಾರಾಕಾರ ಮಳೆಯಿಂದ ನದಿ, ನಾಲಾಗಳು ಉಕ್ಕಿ ಹರಿದಿವೆ. ಪ್ರವಾಹ ನೀರು ಹೊಲಗಳಿಗೆ ನುಗ್ಗಿ ತೊಗರಿ ಬೆಳೆ ಹಾಗೂ ಬಿತ್ತನೆ ಮಾಡಿದ ಕಡಲೆ ಬೆಳೆ ಹಾನಿಯಾಗಿದೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ರಾತ್ರಿ ನೀರು ನುಗ್ಗಿ ಜನರು ತೀವ್ರ ಕಷ್ಟ ಅನುಭವಿಸಿದ್ದಾರೆ. ರಾತ್ರಿ 11.30ಕ್ಕೆ ವಿದ್ಯುತ್ ಕೈಕೊಟ್ಟಿದ್ದರಿಂದ ಗ್ರಾಮೀಣ ಪ್ರದೇಶ ಕಾರ್ಗತ್ತಲಿನಲ್ಲಿ ಮುಳುಗಿತ್ತು. ಮಂಗಳವಾರ ಮಧ್ಯಾಹ್ನ 3.15ಕ್ಕೆ ವಿದ್ಯುತ್ ಸರಬರಾಜು ಆರಂಭವಾಯಿತು.

ಪಟ್ಟಣದ ನಾಗಾವಿ ಪರಿಸರದಲ್ಲಿರುವ ವಸತಿನಿಲಯ ಕಟ್ಟಡಗಳು ಜಲಾವೃತ್ತಗೊಂಡು ತೀವ್ರ ಸಮಸ್ಯೆ ಉಂಟಾಗಿತ್ತು. ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಮಯವಾಗಿತ್ತು. ನಾಗಾವಿ ಹಳ್ಳ ಪ್ರವಾಹದಿಂದ ತುಂಬಿ ಹರಿಯುತ್ತಿದೆ. ಅಳ್ಳೊಳ್ಳಿ, ದಿಗ್ಗಾಂವ, ಇಟಗಾ, ಮೊಗಲಾ, ಮರಗೋಳ ಗ್ರಾಮಗಳ ಬಳಿ ಹರಿಯುವ ನಾಲಾಗಳು ಪ್ರವಾಹದಿಂದ ಉಕ್ಕಿ ಹರಿಯುತ್ತಿವೆ. ಪಕ್ಕದ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ಯರಗಲ್, ಕದ್ದರಗಿ, ಜೀವಣಗಿ, ಭಾಗೋಡಿ, ಬೆಳಗುಂಪಾ, ಇವಣಿ, ಗುಂಡಗುರ್ತಿ ಬಳಿ ಹರಿಯುವ ನಾಲಾಗಳು ಮಳೆ ನೀರಿನ ಪ್ರವಾಹದಿಂದ ತುಂಬಿ ಹರಿದಿವೆ. ಬೆಳೆದು ನಿಂತ ತೊಗರಿ ಹೊಲಗಳಿಗೆ ಮತ್ತು ಹಿಂಗಾರು ಬಿತ್ತನೆ ಮಾಡಿದ್ದ ಕಡಲೆ ಬೆಳೆ ಹಾನಿಯಾಗಿದೆ. ತಗ್ಗು ಪ್ರದೇಶದ ಹೊಲಗಳಲ್ಲಿ ನೀರು ನಿಂತು ಹಿಂಗಾರು ಬಿತ್ತನೆಗೆ ತೀವ್ರ ಹಿನ್ನಡೆಯುಂಟಾಗಿದೆ.

ತಾಲ್ಲೂಕಿನ ದಂಡೋತಿ ಬಳಿ ಹರಿಯುವ ಕಾಗಿಣಾ ನದಿಯಲ್ಲಿ ಬೆಳಿಗ್ಗೆ ಪ್ರವಾಹ ಉಕ್ಕಿ ಬಂದು ಅಪಾಯದಮಟ್ಟದಲ್ಲಿ ನದಿ ಹರಿಯುತ್ತಿದೆ. ಸೇತುವೆ ಸಮಾನವಾಗಿ ಪ್ರವಾಹ ತುಂಬಿದ್ದರಿಂದ ಸಾರಿಗೆ ಸಂಚಾರಕ್ಕೆ ತೀವ್ರ ಆತಂಕ ಕಾಡಿತ್ತು. ಸೇತುವೆಯ ಮೇಲೆ ಅಲ್ಲಲ್ಲಿ ಪ್ರವಾಹ ನೀರು ಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿಂದ ದಂಡೋತಿ ಮಾರ್ಗವಾಗಿ ಕಲಬುರ್ಗಿಗೆ ಪ್ರಯಾಣಿಸುತ್ತಿದ್ದ ಬಸ್ ಮಳಖೇಡ ಮಾರ್ಗದಿಂದ ಸಂಚರಿಸಿದವು.

ಸೇತುವೆ ಎರಡೂ ಬದಿಯಲ್ಲಿ ಚಿತ್ತಾಪುರ ಮತ್ತು ಕಾಳಗಿ ಪೊಲೀಸರು ಸ್ಥಳದಲ್ಲಿದ್ದು ಜನರು ಸೇತುವೆ ಕೊನೆ ಭಾಗದಲ್ಲಿ ಹೋಗದಂತೆ ಸೂಚಿಸುತ್ತಿದ್ದರು. ಪ್ರವಾಹ ನೀರು ಸೇತುವೆ ಮೇಲೆ ಬರುವುದು ಗೋಚರಿಸುತ್ತಿದ್ದರೂ ಲಾರಿ, ಕಾರು, ಜೀಪು, ದ್ವಿಚಕ್ರ ವಾಹನ ಸಂಚಾರ ಯಥಾರೀತಿ ಮುಂದುವರಿದಿತ್ತು.

ಚಿತ್ತಾಪುರ-46 ಮಿ.ಮೀ, ನಾಲವಾರ-24.2 ಮಿ.ಮೀ, ದೇವನತೆಗನೂರ-17.5 ಮಿ.ಮೀ, ಗುಂಡಗುರ್ತಿ-16.6 ಮಿ.ಮೀ, ಕಾಳಗಿ-64.8 ಮಿ.ಮೀ, ಅಳ್ಳೊಳ್ಳಿ-36.6 ಮಿ.ಮೀ, ಹೇರೂರ್(ಕೆ)-33.2 ಮಿ.ಮೀ ಮಳೆ ದಾಖಲಾಗಿದೆ. ತಾಲ್ಲೂಕಿನ ಎಲ್ಲೆಡೆ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT