ಸೋಮವಾರ, ಸೆಪ್ಟೆಂಬರ್ 16, 2019
21 °C

ಕೆರೆ ಒಡೆದು 15 ಎಕರೆ ಭತ್ತ ನಾಶ

Published:
Updated:
ಕೆರೆ ಒಡೆದು 15 ಎಕರೆ ಭತ್ತ ನಾಶ

ಸೇಡಂ: ತಾಲ್ಲೂಕಿನ ಇಂದಿರಾನಗರ ಗ್ರಾಮದ ಭಗವಾನ್ ಕೆರೆ ಸೋಮವಾರ ಸುರಿದ ಭಾರಿ ಮಳೆಯಿಂದ ಒಡೆದು ಸುಮಾರು 15 ಎಕರೆ ಭತ್ತ ನಾಶವಾಗಿದೆ. ‘ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆ ನೀರು ಭರ್ತಿಯಾಗಿ ನೀರಿನ ಒತ್ತಡಕ್ಕೆ ತಡೆಗೋಡೆ ಒಡೆದಿದೆ. ಇದರಿಂದ ಕೆರೆಯ ಪಕ್ಕದಲ್ಲಿದ್ದ ಸುಮಾರು 15ಕ್ಕಿಂತ ಅಧಿಕ ಭತ್ತ ನಾಶವಾಗಿದೆ. ಬೆಳಗಿನ ಜಾವ 4ಕ್ಕೆ ಕೆರೆ ನೀರು ಒಡೆದ ಹೊಲಗಳಿಗೆ ನೀರು ನುಗ್ಗಿದ್ದು, ಭತ್ತ ನಾಶವಾಗಿದೆ. ಹೊಲದ ತುಂಬೆಲ್ಲಾ ನೀರು ನಿಂತಿದ್ದು, ವಾರದವರೆಗೆ ಹೊಲದಲ್ಲಿ ತೆರಳದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತರು ತಿಳಿಸಿದರು.

‘15 ಎಕರೆಯ ಪ್ರದೇಶದಲ್ಲಿ ಸೋನಾ ಮಸೂರಿ ಗುಣಮಟ್ಟದ ಭತ್ತವನ್ನು ನಾಟಿ ಮಾಡಲಾಗಿತ್ತು. ನೀರಾವರಿ ಜೊತೆಗೆ ಉತ್ತಮ ರೀತಿಯ ಉಳುಮೆ ಮಾಡಿದ್ದೇವೆ. ಸಮಯ ಸಂದರ್ಭಕ್ಕೆ ಕಳೆ ತೆಗೆಯುವುದು ಸೇರಿದಂತೆ ಔಷಧ ಸಿಂಪಡಿಸಲಾಗಿದೆ. ಉತ್ತಮ ರೀತಿಯಲ್ಲಿಯೇ ಫಸಲು ಬರುವ ಸ್ಥಿತಿಯಲ್ಲಿದ್ದಾಗಲೇ ಕೆರೆ ಒಡೆದು ಭತ್ತ ನಾಶವಾಗಿದೆ. ಇದರಿಂದ ಏನಿಲ್ಲವೆಂದರೂ ಸುಮಾರು ₹11 ಲಕ್ಷಕ್ಕಿಂತ ಅಧಿಕ ಮೌಲ್ಯದ ಬೆಳೆಯನ್ನು ಕಳೆದುಕೊಂಡಂತಾಗಿದೆ’ ಎಂದು ರೈತರು ಅಳಲು ತೋಡಿಕೊಂಡರು.

ನೀರಿನ ಒತ್ತಡದಿಂದ ಇಂದಿರಾ ನಗರ-ಇರ್ನಾಪಲ್ಲಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒಡೆದು ಹೋಗಿದೆ. ಅಲ್ಲದೆ, ಕೆರೆಯ ಪಕ್ಕದಲ್ಲಿರುವ ಕಿರಿ ರಸ್ತೆಗಳು ಹಾಗೂ ಹಣದಿಗಳು ಒಡೆದು ಹೋಗಿವೆ. ಇದರಿಂದ ಇಂದಿರಾನಗರದಿಂದ ಕೆಲ ಗ್ರಾಮಗಳಿಗೆ ತೆರಳುವ ಜನರು ಪರದಾಡಿದರು. ಇಂದಿರಾ ನಗರದ ಸುತ್ತಮುತ್ತಲಿನ ಸಣ್ಣ ಹಣದಿಗಳು ಜಲಾವೃತ್ತಗೊಂಡಿದ್ದು, ರೈತರು ಹೊಲಗಳಿಗೆ ತೆರಳದಂತಹ ಪರಿಸ್ಥಿತಿ ಉಂಟಾಗಿದೆ.

‘ವಾರದಿಂದ ಸುರಿಯುತ್ತಿರುವ ಮಳೆಯಿಂದ ಬಗವಾನ್ ಕೆರೆ ಭರ್ತಿಯಾಗಿತ್ತು. ಕೇವಲ ಬಗವಾನ್ ಕೆರೆಯ ನೀರಿದ್ದರೆ ಮಾತ್ರ ಕೆರೆ ಒಡೆಯುತ್ತಿರಲಿಲ್ಲ. ಆದರೆ, ಇದರ ಮೇಲ್ಭಾಗದಲ್ಲಿರುವ ಪೂಜಾರಿ ಕುಂಟ ಕೆರೆ ಹಾಗೂ ಸುತ್ತಮುತ್ತಲಿನ ಹಳ್ಳಗಳ ನೀರು ಹರಿದು ಬಂದ ಪರಿಣಾಮ ಹೆಚ್ಚಿದ ನೀರಿನ ಕೆರೆ ಒಡೆದಿದೆ’ ಎಂದು ಹೇಮ್ಲಾನಾಯಕ ತಿಳಿಸಿದರು.

‘ಒಡೆದ ಕೆರೆಯನ್ನು ದುರಸ್ತಿಗೊಳಿಸಬೇಕು. ಸುತ್ತಮುತ್ತಲಿನ ರೈತರಿಗೆ ಸರ್ಕಾರ ಪರಿಹಾರ ಕಲ್ಪಿಸಿಕೊಡಬೇಕು. ಅಲ್ಲದೆ, ಜನರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಜನರು ಆಗ್ರಹಿಸಿದರು. ಕೆರೆ ಒಡೆದ ಸ್ಥಳಕ್ಕೆ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಉಪತಹಶೀಲ್ದಾರ್ ರಾಜಶೇಖರ ಹಾವಣಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ಬಬಲಾದಿ, ಎಇ ವಿಜಯಕುಮಾರ ರಾಠೋಡ, ಲೋಕೋಪಯೋಗಿ ಇಲಾಖೆಯ ಎಇ ಶಿವಕುಮಾರ ಗೋಗಿ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ, ಇಸ್ಮಾಯಿಲ್ ಇದ್ದರು.

ಮಳೆ ವಿವರ: ತಾಲ್ಲೂಕಿನಾದ್ಯಂತ ಸೋಮವಾರ ಗುಡುಗು ಸಮೇತ ಭಾರಿ ಮಳೆ ಸುರಿದಿದ್ದು ವಿವಿಧ ಮಳೆಮಾಪನ ಕೇಂದ್ರಗಳಲ್ಲಿ ಮಳೆ ದಾಖಲಾಗಿದೆ.

ತಾಲ್ಲೂಕಿನ ಆಡಕಿಯಲ್ಲಿ ಅತಿ ಹೆಚ್ಚು 92 ಮಿ.ಮೀ ಮಳೆಯಾಗಿದೆ. ಸೇಡಂ-64 ಮಿ.ಮೀ, ಕೋಡ್ಲಾ-27 ಮಿ.ಮೀ, ಮುಧೋಳ-64 ಮಿ.ಮೀ, ಮಳಖೇಡ 70 ಮಿ.ಮೀ, ಹಾಬಾಳ(ಟಿ)-64 ಮಿ.ಮೀ, ಮೇದಕ್-83.5 ಮಿ.ಮೀ, ರಿಬ್ಬನಪಲ್ಲಿ 65 ಮಿ.ಮೀ, ಕುರಕುಂಟಾ-78 ಮಿ.ಮೀ, ಲಿಂಗಂಪಲ್ಲಿ-71 ಮಿ.ಮೀ ಮಳೆಯಾಗಿದೆ.

 

Post Comments (+)