ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ತೆರವು ಕಾರ್ಯಾಚರಣೆ

Last Updated 11 ಅಕ್ಟೋಬರ್ 2017, 7:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕದ್ರಾ ನೈತಿಸಾವರ ಬಳಿ ರಸ್ತೆ ಬದಿಯ ಕಂದಕಕ್ಕೆ ಇಳಿದಿದ್ದ ಅಣು ಇಂಧನ ತ್ಯಾಜ್ಯ ತುಂಬಿದ ಭಾರಿ ವಾಹನವನ್ನು ಮಂಗಳವಾರ ಸಂಜೆವರೆಗೆ ಭಾಗಶಃ ಮೇಲೆತ್ತಲಾಗಿದ್ದು, ಟ್ರೇಲರನ್ನು ರಸ್ತೆಗೆ ಸರಿಸುವ ಕಾರ್ಯ ಮುಂದುವರಿದಿದೆ.

ಸೋಮವಾರ ಈ ವಾಹನವು ಕೈಗಾ ಅಣು ವಿದ್ಯುತ್‌ ಸ್ಥಾವರದಿಂದ ಕಾರವಾರದ ಕಡೆಗೆ ಬರುತ್ತಿದ್ದಾಗ ಮಾರ್ಗಮಧ್ಯೆದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಇಳಿದಿತ್ತು. ಪರಿಣಾಮ ಕಾರವಾರ–ಮಲ್ಲಾಪುರ–ಇಳಕಲ್‌ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಜೆಸಿಬಿ ಸಹಾಯದಿಂದ ಮಣ್ಣಿನ ದಿಬ್ಬವನ್ನು ಅಗೆದು ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ.

ಮೇಲೆತ್ತಲು ಹರಸಾಹಸ: ‘ಜೇಡಿ ಮಣ್ಣಿನಲ್ಲಿ ವಾಹನದ ಚಕ್ರಗಳು ಸಿಲುಕಿರುವುದರಿಂದ ಮೇಲೆತ್ತುವ ಕಾರ್ಯ ವಿಳಂಬವಾಗಿದೆ. ಎಂಜಿನ್‌ ಭಾಗವನ್ನು ಟ್ರೇಲರ್‌ನಿಂದ ಬೇರ್ಪಡಿಸಿ ಮೇಲೆತ್ತಲಾಗಿದೆ.ಆದರೆ ಟ್ರೇಲರ್‌ ಮೇಲೆತ್ತುವ ಕಾರ್ಯ ಮುಂದುವರಿದಿದೆ. ಈ ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ’ ಎಂದು ಮಲ್ಲಾಪುರ ಠಾಣೆಯ ಪಿಎಸ್‌ಐ ಸಿ.ಆರ್‌.ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ ಸೌಕರ್ಯ: ‘ನೈತಿಸಾವರ ಮಾರ್ಗದಲ್ಲಿ ದೊಡ್ಡ ವಾಹನಗಳ ಸಂಚಾರ ಸಾಧ್ಯವಾಗದ ಕಾರಣ ಎನ್‌ಪಿಸಿಐಎಲ್‌ನಿಂದ ಸಾರ್ವಜನಿಕರಿಗೆ ವಾಹನ ಸೌಲಭ್ಯವನ್ನು ಕಲ್ಪಿಸಿದ್ದೇವೆ’ ಎಂದು ಕೈಗಾ ಅಣು ವಿದ್ಯುತ್‌ ಸ್ಥಾವರದ ಸಾರ್ವಜನಿಕ ಸಂಪರ್ಕಾಧಿಕಾರಿ ಸುಭಾಷ್‌ ಕಾನಡೆ ತಿಳಿಸಿದರು.

ಮರುಪೂರಣಕ್ಕಾಗಿ ಸಾಗಣೆ
ಅಣು ವಿದ್ಯುತ್ ಸ್ಥಾವರದಲ್ಲಿ ಯುರೇನಿಯಂ ಹಾಗೂ ಕೆಲ ವಸ್ತುಗಳನ್ನು ಇಂಧನ ರೂಪದಲ್ಲಿ ಬಳಸಲಾಗುತ್ತದೆ. ಒಂದೊಂದು ಕಟ್ಟಿನಲ್ಲಿ 16 ಸರಳುಗಳಿರುತ್ತವೆ. ವಿದ್ಯುತ್‌ ಉತ್ಪಾದನೆಯ ಬಳಿಕ ಕಟ್ಟುಗಳಿಗೆ ಮತ್ತೆ ಯುರೇನಿಯಂ ಮರುಪೂರಣ ಮಾಡಿ ಬಳಕೆಗೆ ಅವಕಾಶ ಇರುತ್ತದೆ. ಹೀಗಾಗಿ ಆ ಕಟ್ಟುಗಳನ್ನು ಲೋಹದ ಪೆಟ್ಟಿಗೆಯಲ್ಲಿ ತುಂಬಿ ಬೃಹತ್ ಗಾತ್ರದ ಲಾರಿಯೊಂದರಲ್ಲಿ ತಮಿಳುನಾಡಿಗೆ ಕೊಂಡೊಯ್ಯಲಾಗುತ್ತಿತ್ತು.

ನಮಕ್ಕಲ್‌ ಟ್ರಾನ್ಸ್‌ಪೋರ್ಟ್ ಸಂಸ್ಥೆಯು ಇದರ ಸಾಗಣೆ ಜವಾಬ್ದಾರಿಯನ್ನು ಹೊತ್ತಿದ್ದು, ತಿಂಗಳಿಗೆ ಸುಮಾರು 2 ವಾಹನಗಳು ಕಾರವಾರ ಮಾರ್ಗವಾಗಿ ಬಿಗಿ ಭದ್ರತೆಯಲ್ಲಿ ಹೊರ ರಾಜ್ಯಕ್ಕೆ ಕಳುಹಿಸಲಾಗುತ್ತದೆ ಎಂದು ಕೈಗಾ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT