ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಬಳಕೆ ಹೆಚ್ಚಾದರೆ ಬೆಲೆ ಏರಿಕೆ

Last Updated 11 ಅಕ್ಟೋಬರ್ 2017, 7:33 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಲೆನಾಡು ಭಾಗವನ್ನು ಪ್ರತಿನಿಧಿಸುವವರೇ ಕೇಂದ್ರ ಹಾಗೂ ರಾಜ್ಯದಲ್ಲಿ ಅರಣ್ಯ ಸಚಿವರಾದರೆ ಮಾತ್ರ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲ ಅವರು ಮಾತನಾಡಿದರು.

ಉತ್ತಮ ದರ್ಜೆಯ ಕಾಫಿ ನೀಡುತ್ತಿರುವ ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಯಗಳಲ್ಲಿ ಉತ್ಕೃಷ್ಟ ದರ್ಜೆಯ ಕಾಫಿ ಉತ್ಪಾದನೆಯಾಗಬೇಕು. ದೇಶದ ಆಂತರಿಕವಾಗಿ ಕಾಫಿ ಬಳಕೆ ಹೆಚ್ಚಾದಲ್ಲಿ ಮಾತ್ರ ಕಾಫಿಗೆ ಉತ್ತಮ ಬೆಲೆ ನಿರೀಕ್ಷಿಸಬಹುದು. ನಿರ್ಮಲ ಸೀತಾರಾಮನ್ ಅವರು ಕೇಂದ್ರದ ವಾಣಿಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಕಾಫಿಯ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಮನವಿ ಮಾಡಲಾಗಿತ್ತು ಎಂದರು.

ಪಶ್ಚಿಮಘಟ್ಟದ ಪ್ರದೇಶದ ಸೂಕ್ಷ್ಮ ಪರಿಸರ ತಾಣದ ಬಗ್ಗೆ ಸ್ಥಳೀಯ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ. ಸಮಸ್ಯೆಯನ್ನ ನನ್ನ ಹೆಗಲಿಗೆ ಹಾಕಿಕೊಂಡಿದ್ದೇನೆ. ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಕಲ್ಲು ಹಾಗೂ ಮರಳು ಗಣಿಗಾರಿಕೆ ಮಾಡುವಂತಿಲ್ಲ. ದೊಡ್ಡಮಟ್ಟದ ಜಲವಿದ್ಯುತ್ ಯೋಜನೆ ನಿಷೇಧವಿರುತ್ತದೆ. ಉಳಿದಂತೆ ಕೃಷಿಕರಿಗೆ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.

ಕಾಫಿ ಮಂಡಳಿಯ ಅಧ್ಯಕ್ಷ ಬೋಜೇಗೌಡ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕಾಫಿ ಕೃಷಿ ಹವಾಮಾನ ವೈಪರೀತ್ಯ ಹಾಗೂ ಬೆಲೆ ಏರಿಳಿತದಿಂದ ಸಂಕಷ್ಟದಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ಎದುರಾಗಿದೆ.

ಭಾರತದ ಕಾಫಿ ಉತ್ಪನ್ನ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಬೆಳೆಗಾರರು ಕಾಫಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸಣ್ಣ ಕಾಫಿ ಬೆಳೆಗಾರರ ಎಲ್ಲಾ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸುವತ್ತ ಗಮನಹರಿಸಬೇಕು. ಬೆಳೆಗಾರರ ಸಹಾಯಕ್ಕಾಗಿ ಯಾವ ಸರ್ಕಾರವನ್ನು ಅಂಗಲಾಚುವುದಿಲ್ಲ. ಸರ್ಕಾರ ಮಾಡದ ಕೆಲಸವನ್ನು ಬೆಳೆಗಾರರು ಮಾಡುತ್ತಿದ್ದಾರೆ. ಕಾಫಿ ತೋಟ ಕಾರ್ಮಿಕರಿಗೆ ಬೆಳೆಗಾರರು ವಸತಿ ಸೇರಿದಂತೆ ಎಲ್ಲಾ ಸೌಲಭ್ಯವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜಯರಾಂ ಮಾತನಾಡಿ, ರಾಜ್ಯ ಮೂರು ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಕಾಫಿ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡಬೇಕು. ಕಾಫಿ ಉದ್ಯಮಕ್ಕೆ ಸಂಬಂಧಿಸಿದಂತೆ 15 ಲಕ್ಷ ಜನ ಕಾರ್ಮಿಕರು ತಮ್ಮ ಬದುಕು ಕಂಡುಕೊಂಡಿದ್ದಾರೆ. ಬ್ಯಾಂಕ್‌ನಿಂದ ಹೆಚ್ಚಿನ ಬೆಳೆಗಾರರು ಸಾಲ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಪೂರ್ಣ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಸಾಗುವಳಿ ಮಾಡಿಕೊಂಡಿರುವ ಜಾಗಕ್ಕೆ ಸೂಕ್ತ ದಾಖಲಾತಿ ನೀಡಬೇಕು. ಕಾಫಿ ಮಂಡಳಿಯಿಂದ ಬೆಳೆಯ ಅಭಿವೃದ್ಧಿಗೆ ಸಹಾಯಧನ ಮುಂದುವರಿಸುವ ಬಗ್ಗೆ ಗಮನಹರಿಸಬೇಕು ಎಂದರು.

ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಸ್ಥಾನವನ್ನು ಒದಗಿಸಬೇಕು. ಪರಿಸರಕ್ಕೆ ಪೂರಕವಾಗಿರುವ ಅರೇಬಿಕಾ ಕಾಫಿ ಕೃಷಿಯನ್ನು ಉತ್ತೇಜಿಸಲು ಅರೇಬಿಕಾ ವಿಶೇಷ ವಲಯ ಎಂದು ಪರಿಗಣಿಸಿ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೋಜೇಗೌಡ, ಉಪಾಧ್ಯಕ್ಷೆ ರೀನಾ ಪ್ರಕಾಶ್, ಸದಸ್ಯರಾದ ಎಂ.ಬಿ. ಅಬಿಮನ್ಯು ಕುಮಾರ್, ಬೊಟ್ಟಂಗಡ ರಾಜು, ಮಾಚಮಾಡ ಡಾಲಿ ಚಂಗಪ್ಪ, ಎನ್.ಬಿ. ಉದಯ ಕುಮಾರ್, ಕೆ.ಕೆ. ಮನು ಕುಮಾರ್, ಉದಯ ಕುಮಾರ್ ಹೆಗಡೆ, ಎಂ.ಎಲ್. ಕಲ್ಲೇಶ್, ಜಿ.ಎಲ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ ಹಾಗೂ ಬೆಳೆಗಾರರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT