ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಚಿವ ಖಾದರ್‌ ಅಡ್ಡಿ

Last Updated 11 ಅಕ್ಟೋಬರ್ 2017, 9:00 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಪುರಸಭೆ ವತಿಯಿಂದ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಶಾಸಕರಾಗಿರುವ ಆಹಾರ ಸಚಿವ ಯು.ಟಿ.ಖಾದರ್ ಕುಮ್ಮಕ್ಕಿನಿಂದ ಸ್ಥಳೀಯ ಕೆಂಪು ಕಲ್ಲಿನ ಕ್ವಾರಿ ಮಾಲೀಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರ ನೇತೃತ್ವದಲ್ಲಿ ಸಜಿಪನಡು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವ ಮೂಲಕ ಘಟಕ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಸದಸ್ಯರು, ಮಂಗಳವಾರ ಇಲ್ಲಿನ ಪುರಸಭೆಯಲ್ಲಿ ಆರೋಪಿಸಿದರು.

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಸ್‌ಡಿಪಿಐ ಸದಸ್ಯ ಮಹಮ್ಮದ್ ಇಕ್ಬಾಲ್ ಮತ್ತು ಮುನೀಶ್ ಆಲಿ ಮಾತನಾಡಿ, ಈ ಬಗ್ಗೆ ಪುರಸಭೆ ಮಧ್ಯೆ ಪ್ರವೇಶಿಸಬೇಕು. ಈಗಾಗಲೇ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ₹2 ಲಕ್ಷ ಲಂಚ ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರತಿಭಟನಾಕಾರರು ಅನಗತ್ಯ ಆರೋಪ ಮಾಡುತ್ತಿದ್ದಾರೆ.

ಒಂದೆಡೆ ಇಲ್ಲಿನ ಶಾಸಕರಾಗಿರುವ ಸಚಿವ ಬಿ.ರಮಾನಾಥ ರೈ, ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ಹೇಳುತ್ತಿದ್ದರೆ, ಇನ್ನೊಂದೆಡೆ ಅದೇ ಪಕ್ಷದ ಆಹಾರ ಸಚಿವ ಯು.ಟಿ.ಖಾದರ್, ಅಲ್ಲಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕಾಗಿ ಇಬ್ಬರು ಸಚಿವರು ಸಹಿತ ಪುರಸಭಾಧ್ಯಕ್ಷರು, ಪ್ರತ್ಯೇಕ ಸಭೆ ಕರೆದು ಅಲ್ಲಿನ ಗ್ರಾಮ ಪಂಚಾಯಿತಿ ಮತ್ತು ನಾಗರಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.

ನೀರಿಗೆ ದಂಡ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಮದ ನಾಗರಿಕರಿಗೆ ಶುದ್ಧ ಜಲ ಪೂರೈಸದಿರುವ ಪರಿಣಾಮ ಪರಿಸರ ಇಲಾಖೆ ದಂಡ ವಿಧಿಸಿರುವ ಬಗ್ಗೆಯೂ ಸಭೆಯಲ್ಲಿ ಭಾರೀ ಚಚರ್ಗೆ ಗ್ರಾಸವಾಯಿತು. ಇದಕ್ಕೆ ಆಡಳಿತ ಪಕ್ಷ (ಕಾಂಗ್ರೆಸ್) ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಮತ್ತಿತರರು ಸಹಮತ ವ್ಯಕ್ತಪಡಿಸಿದರು. ಸದಸ್ಯರಾದ ಪ್ರವೀಣ್ ಬಿ., ಗಂಗಾಧರ್ ಪೂಜಾರಿ, ಜಗದೀಶ ಕುಂದರ್, ಬಿ.ಮೋಹನ್, ಸುಗುಣಾ ಕಿಣಿ, ವಸಂತಿ ಚಂದಪ್ಪ, ಯಾಸ್ಮಿನ್, ಚಂಚಲಾಕ್ಷಿ, ಪ್ರಭಾ ಆರ್.ಸಾಲ್ಯಾನ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ: ನಾಲ್ಕು ವರ್ಷಗಳ ಬಳಿಕ ಕಾಂಗ್ರೆಸ್ ಆಡಳಿತ ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ ಕೊನೆಗೂ ಒಂದು ವರ್ಷದ ಅವಧಿಗೆ ನಿರೀಕ್ಷೆಯಂತೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ವಾಸು ಪೂಜಾರಿ ಅವರನ್ನು ಮಂಗಳವಾರ ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.

ಉಳಿದಂತೆ ಸಮಿತಿಗೆ ಇತರ ಸದಸ್ಯರಾಗಿ ಜಗದೀಶ್ ಕುಂದರ್, ಚಂಚಲಾಕ್ಷಿ, ಪ್ರಭಾ ಆರ್. ಸಾಲಿಯಾನ್(ಕಾಂಗ್ರೆಸ್) ಮೋಹನ್ ಬಿ. (ಜೆಡಿಎಸ್), ಮುನೀಶ್ ಆಲಿ (ಎಸ್ಡಿಪಿಐ) ಅವಿರೋಧವಾಗಿ ಆಯ್ಕೆಗೊಂಡರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಮೊಹಮ್ಮದ್ ನಂದಾವರ, ಮಲ್ಲಿಕಾ ಶೆಟ್ಟಿ, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT