ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ನಿರಂತರ ಮಳೆ: ಹೆಚ್ಚಿದ ಬವಣೆ

Last Updated 11 ಅಕ್ಟೋಬರ್ 2017, 9:16 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಒಂದು ವಾರದಿಂದ ಬಿರುಸಾಗಿ ಮಳೆ ಸುರಿಯುತ್ತಿರುವುದಿಂದ ಜನಸಾಮಾನ್ಯರ ತಾಪತ್ರಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಗ್ರಾಮೀಣ ಭಾಗದಲ್ಲಿ ವಾಹನಗಳು ಸಂಚರಿಸುವುದು ದುಸ್ತರವಾಗಿದೆ.

ಅಲ್ಲದೆ, ಅತಿವೃಷ್ಟಿಯಿಂದ ಬೆಳೆಹಾನಿ ಪ್ರಮಾಣವು ಅಧಿಕಗೊಂಡು ರೈತಾಪಿ ವರ್ಗದಲ್ಲಿ ಚಿಂತೆ ಆವರಿಸಿದೆ. ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಕೊಯ್ಲಿಗೆ ಬಂದಿದ್ದರೂ ಜಮೀನಿನಲ್ಲಿ ನಿರಂತರ ತೇವಾಂಶ ಇರುವುದರಿಂದ ಸಾಕಷ್ಟು ಅನಾನುಕೂಲವಾಗಿದೆ.

ರಾಯಚೂರು ನಗರದಲ್ಲಿ ಗುಡ್ಡದ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಕಚ್ಚಾರಸ್ತೆಗಳೆಲ್ಲ ಕೆಸರುಗದ್ದೆಗಳಾಗಿ ಮಾರ್ಪಟ್ಟಿದ್ದು, ಜನರ ಓಡಾಟಕ್ಕೆ ತೀವ್ರ ಅಡಚಣೆಯಾಗಿದೆ. ದೇವಿನಗರ, ಜಲಾಲನಗರ, ಜವಾಹರ ನಗರ, ಎಲ್‌ಬಿಎಸ್‌ ನಗರಗಳ ಜನವಸತಿಗಳಲ್ಲಿ ನೀರು ತುಂಬಿಕೊಂಡಿದೆ. ಬರೀ ಕಲ್ಲುಗಳಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳು ಕುಸಿದಿವೆ.

ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆ ಸುರಿದಿದೆ. ಮಾನ್ವಿ ತಾಲ್ಲೂಕಿನ ಮಲ್ಲಟ್‌ ಹೋಬಳಿಯಲ್ಲಿ 109 ಮಿಲಿ ಮೀಟರ್‌ ದಾಖಲೆ ಪ್ರಮಾಣದ ಮಳೆಯಾಗಿದೆ.

ದೇವದುರ್ಗ ವರದಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 20 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಲ, ಗದ್ದೆಗಳು ಕೊಚ್ಚಿ ಹೋಗಿವೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ನಾಲ್ಕು ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮಗಳ ರಸ್ತೆಗಳು ಸಂಪರ್ಕ ಕಡಿದುಕೊಂಡರೆ ಬಹುತೇಕ ಗ್ರಾಮಗಳಲ್ಲಿನ ಬೆಳೆಗಳು ಜಲಾವೃತಗೊಂಡಿವೆ.

ಅರಕೇರಾ ಹೋಬಳಿಯಲ್ಲಿ 45.8ಮೀ.ಮೀ, ದೇವದುರ್ಗ ಹೋಬಳಿ 66.01ಮೀ.ಮೀ, ಗಬ್ಬೂರು ಹೋಬಳಿ 22.03 ಮೀ.ಮೀ ಮತ್ತು ಗಲಗ ಹೋಬಳಿಯಲ್ಲಿ 82.02 ಮೀ.ಮೀ ಮಳೆಯಾಗಿದ್ದು, ಗಲಗನಲ್ಲಿ ಅತಿಹೆಚ್ಚು ಮಳೆ ಆಗಿರುವುದರಿಂದ ಆ ಭಾಗದಲ್ಲಿ ಹೆಚ್ಚು ಬೆಳೆ ನಷ್ಟವಾಗಿರುವುದು ಕಂಡು ಬಂದಿದೆ.

ಈಗಾಗಲೇ ಹತ್ತಿ ಬೆಳೆ ಕೈಗೆ ಬಂದಿದ್ದು ಧಾರಾಕಾರದ ಮಳೆಯಿಂದಾಗಿ ಹತ್ತಿ ನೆಲ ಕಚ್ಚಿದೆ. ಇತ್ತ ಸಜ್ಜೆ ಕಟ್ಟಾವಿಗೆ ಬಂದಿದೆ. ಶೇಂಗಾ ಬೆಳೆ ಕಿತ್ತಬೇಕಾಗಿದ್ದರೂ ಭಾರೀ ಮಳೆಗೆ ನೆಲದಲ್ಲಿಯೇ ಸಸಿ ಒಡೆದಿದೆ.

ಆಕ್ರೋಶ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಬೆಳೆಗಳು ಹಾನಿಯಾಗಿ ರೈತರಿಗೆ ಕೋಟಿಗಟ್ಟಲೇ ನಷ್ಟವಾಗಿದ್ದರೂ ತಹಶೀಲ್ದಾರ್‌ಗೆ ಬೆಳೆ ನಷ್ಟದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಚೇರಿಯಲ್ಲಿ ಕುಳಿತು ಹೇಳುವುದಕ್ಕಿಂತ ವಸ್ತುಸ್ಥಿತಿಯನ್ನು ಅರಿತು ತಹಶೀಲ್ದಾರ್‌ರು ಮಾತನಾಡಬೇಕು ಎಂದು ಕರ್ನಾಟಕ ರೈತ ಸಂಘ (ಕೆಆರ್‌ಎಸ್‌)ದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT