ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆಯ ರುಚಿ ಅನ್ನದಲ್ಲಿಲ್ಲ, ಹಸಿವಿನಲ್ಲಿದೆ!

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಮ್ಮದು ವೇಗದ ಯುಗ; ಆವೇಗದ ಯುಗ; ಆವೇಶದ ಯುಗ. ಯೋಚಿಸು‌ವುದಕ್ಕಾಗಲೀ ಆಲೋಚಿಸುವುದಕ್ಕಾಗಲೀ ಅವಲೋಕಿಸುವುದಕ್ಕಾಗಲೀ ನಮಗೆ ಸಮಯವೇ ಇಲ್ಲ. ಎಲ್ಲೆಲ್ಲೂ ಎಲ್ಲದರಲ್ಲೂ ಗಡಿಬಿಡಿ. ಮನಸ್ಸಿನಲ್ಲಿ ನೆನೆದ ಕೂಡಲೇ ಎಲ್ಲವೂ ನಡೆದುಬಿಡಬೇಕು. ಹೀಗಾಗಿಯೇ ಅನಾಹುತಗಳ ಪರಂಪರೆಯೇ ನಮ್ಮ ಹೆಗಲನ್ನು ಏರಿಕೊಂಡಿರುತ್ತದೆ. 

ಕಾಯುವುದು ನಮಗೆ ಮರೆತುಹೋಗುತ್ತಿರುವುದರಿಂದ ನಾವು ಮಾನಸಿಕವಾಗಿ ‘ಕಾಯುತ್ತಿದ್ದೇವೆ’. ನಿರೀಕ್ಷಣೆ (ಕಾಯುವುದು) ಎನ್ನುವುದು ಮರೆತುಹೋಗಿದೆ; ಹೀಗಾಗಿ ಮನಸ್ಸು ಸದಾ ಚಡಪಡಿಕೆಯಲ್ಲಿರುತ್ತದೆ, ಕ್ಷೋಭೆಯಲ್ಲಿರುತ್ತದೆ (ಕಾಯುತ್ತಿದ್ದೇವೆ). ಪ್ರಕೃತಿಯಲ್ಲಿ ನಡೆಯುವ ಒಂದು ವಿದ್ಯಮಾನವನ್ನು ಗಮನಿಸೋಣ. ಹೂವು, ಹಣ್ಣು, ಚಿಗುರು – ಇವೆಲ್ಲವೂ ಪ್ರಕೃತಿಯಲ್ಲಿ ಒಂದು ಗೊತ್ತಾದ ಕ್ರಮದಲ್ಲಿ ತೋರಿಕೊಳ್ಳುವ ವಿದ್ಯಮಾನಗಳು. ನಮ್ಮ ಪರಿಸರಕ್ಕೆ ಸಹಜವಾಗಿರುವ ಮಾವು, ಹಲಸು ಮುಂತಾದ ಹಣ್ಣುಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಸಿಗುವಂಥವು. ಹೀಗೆಯೇ ಹೊಂಗೆಯ ಚಿಗುರು, ಹುಣಸೆಯ ಕುಡಿಗಳು ನಿರ್ದಿಷ್ಟ ಕಾಲದ ವಿದ್ಯಮಾನಗಳೇ ಹೌದು. ವರ್ಷದ ಸ್ವಲ್ಪವೇ ಸಮಯ ಸಿಗುವ ಮಾವಿನ ಹಣ್ಣಿನ ರುಚಿಯನ್ನು ಸವಿಯಲು ವರ್ಷದುದ್ದಕ್ಕೂ ಕಾಯುತ್ತಿದ್ದೆವು; ತಿಂದ ಹಣ್ಣನ್ನು ವರ್ಷ ಪೂರ್ತಿ ಮೆಲುಕು ಹಾಕುತ್ತ ಚಪ್ಪರಿಸುತ್ತಿದ್ದೆವು. ಹೀಗೆ ಕಾಯುವುದರಲ್ಲಿಯೂ, ಕಾಯುವಾಗ ನೆನಪಿನ ಸಂಭ್ರಮದಲ್ಲಿ ವಿಹರಿಸುವುದರಲ್ಲಿಯೂ ಒಂದು ಬಗೆಯ ಸಂತೋಷ ಇರುತ್ತಿತ್ತು. ಕಾದು ಕಾದು ಬಳಿಕ ಮಾವು ಕೈಗೆ ಬಂದಾಗ ಅದನ್ನು ಸವಿಯುವಾಗ ಅದೆಂಥ ಸಂತಸ! ತನ್ಮಯತೆ!! ಧನ್ಯತೆ!!! ಆದರೆ ಈಗ ಏನಾಗುತ್ತಿದೆ?

ಯಾವುದಕ್ಕೂ ನಾವು ಈಗ ಕಾಯಬೇಕಾಗಿಲ್ಲ! ವರ್ಷದ ಉದ್ದಕ್ಕೂ ಮಾವು ಸಿಗುತ್ತದೆ. ಚಳಿಗಾಲದಲ್ಲಿ ಸಿಗುತ್ತಿದ್ದ ಅವರೆಕಾಯಿ ಈಗ ಬೇಸಿಗೆ, ಮಳೆಗಾಲದಲ್ಲೂ ಸಿಗುತ್ತಿದೆ. ಕಾಲದ ನಿರ್ಬಂಧವಿಲ್ಲದೆ ಎಲ್ಲವೂ ಎಲ್ಲ ಕಾಲಕ್ಕೂ ಈಗ ಸಿಗುವಂತೆ ಆಗುತ್ತಿದೆ. ಇದರ ಫಲವಾಗಿ ನಮ್ಮಲ್ಲಿ ಕಾತರ ಎನ್ನುವುದೇ ಮರೆಯಾಗುತ್ತಿದೆ. ಎಲ್ಲವೂ ಎಲ್ಲ ಕಾಲಕ್ಕೂ ದೊರೆಯುತ್ತಿದ್ದರೆ ಅದರ ಮೌಲ್ಯವೂ ಗೊತ್ತಾಗದು, ಸವಿಯೂ ಗೊತ್ತಾಗದು. ಅಡುಗೆ ಎಷ್ಟು ರುಚಿಯಾಗಿದ್ದರೂ ನಮಗೆ ಹಸಿವು ಇಲ್ಲದಿದ್ದರೆ ಅದನ್ನು ಸವಿಯಲಾರೆವು; ಹಸಿವಿಗಿಂತ ರುಚಿ ಬೇರೊಂದಿಲ್ಲ. ಆದರೆ ಈಗ ಹಸಿವು ಎನ್ನುವುದೇ ನಮ್ಮಲ್ಲಿ ಸತ್ತುಹೋಗಿದೆ. ಹಸಿವಾಗದಿರುವುದು ಅನಾರೋಗ್ಯದ ಲಕ್ಷಣ ಎನ್ನುತ್ತದೆ ವೈದ್ಯಶಾಸ್ತ್ರ. ಸಂಸ್ಕೃತ ಸುಭಾಷಿತವೊಂದು ನಮ್ಮ ಈ ದುರವಸ್ಥೆಯನ್ನು ತುಂಬ ಸೊಗಸಾಗಿ ವರ್ಣಿಸಿದೆ, ಹೀಗೆ:

ಅತಿಪರಿಚಯಾದವಜ್ಞಾ ಸಂತತಗಮನಾದನದರೋ ಭವತಿ |

ಮಲಯೇ ಭಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನಂ ಕುರುತೇ ||

‘ಪರಿಚಯವು ಅತಿಯಾದರೆ ಉಪೇಕ್ಷೆ ಉಂಟಾಗುತ್ತದೆ. ಒಂದೆಡೆಗೆ ಯಾವಾಗಲೂ ಹೋಗುತ್ತಿದ್ದರೆ ಆದರವಿರುವುದಿಲ್ಲ. ಮಲಯಗಿರಿಯಲ್ಲಿ ವಾಸಿಸುವ ಬೇಡಿತಿಯು ಶ್ರೀಗಂಧದ ಮರವನ್ನೇ ಸೌದೆಯಾಗಿ ಬಳಸುತ್ತಾಳೆ.’

ನಮಗೂ ನಮ್ಮ ಮಕ್ಕಳಿಗೂ ಅನ್ನದ ಬೆಲೆ ಗೊತ್ತಿಲ್ಲ ಎನ್ನುವುದು ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ತಿಳಿಯುತ್ತದೆ. ಏಕೆಂದರೆ, ಎಷ್ಟೋ ಸಲ ಹಸಿವಿಲ್ಲದಿದ್ದರೂ ದಾಕ್ಷಿಣ್ಯದ ಕಾರಣದಿಂದ ಊಟಕ್ಕೆ ಕುಳಿತುಕೊಂಡಿರುತ್ತೇವೆ. ಹಸಿವಿನ ಬೆಲೆ ಗೊತ್ತಿಲ್ಲದಿದ್ದಾಗ ಎಲೆಯ ಮೇಲಿರುವ ಊಟ ನಮಗೆ ಕಾಣಿಸುವುದೇ ಇಲ್ಲ; ಇನ್ನು ಅದನ್ನು ಸವಿಯುವ ಮಾತು ಎಲ್ಲಿ?

ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ|

ಇತಿ ಸಂಚಿಂತ್ಯ ಮನಸಾ ಪ್ರಾಜ್ಞಃ ಕುರ್ವೀತ ವಾ ನವಾ ||

‘ಇದನ್ನು ಮಾಡಿದರೆ ನನಗೇನಾಗುತ್ತದೆ’, ‘ಮಾಡದಿದ್ದರೆ ಏನಾಗುತ್ತದೆ’ – ಎಂದು ಮನಸ್ಸಿನಲ್ಲಿ ಯೋಚಿಸಿ ಜಾಣನು ಕೆಲಸವನ್ನು ಮಾಡಬೇಕು ಅಥವಾ ಮಾಡದೆ ಇರಬೇಕು.’

ಇದು ಇನ್ನೊಂದು ಸುಭಾಷಿತದ ಮಾತುಗಳು. ಆದುದರಿಂದ ನಮ್ಮ ಮಗು ಏನಾದರೂ ಕೇಳಿದಾಗ ಆ ಕೂಡಲೇ ಅದಕ್ಕೆ ಅದನ್ನು ಕೊಡುವುದಕ್ಕಿಂತಲೂ ಮೊದಲು ನಾವು ಸ್ವಲ್ಪ ಕಾಯಬೇಕು; ಅದನ್ನು ಕಾಯುವಂತೆ ಮಾಡಬೇಕು. ಈ ಕಾಯುವಿಕೆಯಲ್ಲಿಯೇ ವ್ಯಕ್ತಿತ್ವದ ಮಾಗುವಿಕೆಯ ಗುಟ್ಟು ಅಡಗಿರುತ್ತದೆ ಎಂಬುದನ್ನು ನಾವು ಅರಿಯಬೇಕು. ಅದು ಕೇಳಿದ ವಸ್ತುವನ್ನು ಆಸ್ವಾದಿಸುವ, ಗೌರವಿಸುವ ಗುಣವನ್ನೂ ಮಗುವಿಗೆ ನಾವು ಕಲಿಸಬೇಕಿದೆ. ‘ನಾನು ಕೇಳಿದ್ದು ಸುಲಭವಾಗಿ ಸಿಗುವಂಥದ್ದು’ ಎಂಬ ಮನೋಧರ್ಮಕ್ಕೆ ಮಗು ಪಕ್ಕಾದರೆ ಅದಕ್ಕೆ ವಸ್ತುಮೌಲ್ಯವೂ ಅರಿವಿಗೆ ಬಾರದು; ರುಚಿಪ್ರಜ್ಞೆಯ ಸಂಸ್ಕಾರವೂ ದಕ್ಕದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT