ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಶ್ವಾಸನೆ ಈಡೇರಿಸದ ಬಿಜೆಪಿ: ಆರೋಪ

Last Updated 11 ಅಕ್ಟೋಬರ್ 2017, 9:47 IST
ಅಕ್ಷರ ಗಾತ್ರ

ಬೈಂದೂರು: ಚುನಾವಣಾಪೂರ್ವದಲ್ಲಿ ಅರವತ್ತು ವರ್ಷದಲ್ಲಾಗದಿರುವುದನ್ನು ಆರು ತಿಂಗಳಲ್ಲಿ ಸಾಧಿಸುವ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಭಾರತೀಯ ಜನತಾ ಪಕ್ಷ ಈಡೇರಿಕೆ ವಿಚಾರದಲ್ಲಿ ವಿಫಲವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ಆರೋಪಿಸಿದರು.

ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳ ಸದಸ್ಯರ ರಾಜಕೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಹಾಗೂ ಮೋದಿಯವರ ಚುನಾವಣಾ ಭಾಷಣ ಗಳಲ್ಲಿ ಅಭಿವೃದ್ಧಿಯ ಬಹುಬಣ್ಣದ ಚಿತ್ರಗಳನ್ನು ಬಿಡಿಸಲಾಗಿತ್ತು. ದೇಶದ ಎಲ್ಲ ಸಮಸ್ಯೆಗಳನ್ನು ದೂರಮಾಡುವ ಆಶ್ವಾಸನೆ ನೀಡಲಾಗಿತ್ತು. ಬೆಲೆ ಏರಿಕೆಗೆ ತಡೆ, ಭ್ರಷ್ಟಾಚಾರ ನಿರ್ಮೂಲನೆ, ನಿರುದ್ಯೋಗ ನಿವಾರಣೆ, ಎಲ್ಲರ ವಿಕಾಸದ ಮಂತ್ರ ಜಪಿಸಲಾಗಿತ್ತು. ಆದರೆ ಅವೆಲ್ಲ ಚುನಾವಣಾ ಪ್ರಚಾರದ ಪೊಳ್ಳು ಭರವಸೆಗಳೆನ್ನುವುದು ಈಗ ಸಾಬೀತಾ ಗಿದೆ ಎಂದು ಅವರು ಟೀಕಿಸಿದರು.

ಉದ್ಯೋಗ ಕ್ಷೇತ್ರವನ್ನು ಪರಿಗಣಿಸಿದರೆ ಎಂಟು ಕೃಷಿಯೇತರ ಉತ್ಪಾದನಾ ವಲಯಗಳಲ್ಲಿ ಮೋದಿ ಸರ್ಕಾರದ ಮೂರು ವರ್ಷಗಳಲ್ಲಿ ಆಗಿರುವುದು ಕನಿಷ್ಠ ಏರಿಕೆ ಎಂದ ಅವರು ಗ್ರಾಮೀಣ ಉದ್ಯೋಗಾಕಾಂಕ್ಷಿಗಳ ಪಾಡು ಶೋಚನೀಯ ಎಂದರು. ಕನಿಷ್ಠ ಕೂಲಿ ದರದ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಡಿ ಈಚಿನ ವರ್ಷಗಳಲ್ಲಿ ಆಗಿರುವ ಬೇಡಿಕೆಯ ಹೆಚ್ಚಳದ ಅಂಕೆಸಂಖ್ಯೆಯ ಮೂಲಕ ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಶಿರೂರಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ನಿಗೂಢ ಸಾವಿನ ತನಿಖೆಗೆ ಹಾಗೂ ಅವಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ನಡೆದ ಯಶಸ್ವಿ ಹೋರಾಟದ ಗೌರವ ಪಕ್ಷಕ್ಕೆ ಸಲ್ಲುತ್ತದೆ. ಹೋರಾಟದಲ್ಲಿ ಪಾಲ್ಗೊಂಡ ಬೈಂದೂರಿನ ಕಾರ್ಮಿಕ ಸಂಘಗಳ ಸದಸ್ಯರನ್ನು ಅಭಿನಂದಿಸಿದರು.

ಪಕ್ಷದ ಮುಖಂಡರಾದ ಕೆ. ಶಂಕರ, ಎಚ್. ನರಸಿಂಹ, ಸುರೇಶ ಕಲ್ಲಾಗರ, ರಾಜೀವ ಪಡುಕೋಣೆ, ನಾಗರತ್ನಾ ನಾಡ, ಸಂತೋಷ ಹೆಮ್ಮಾಡಿ, ಮಹಾಬಲ ವಡೇರ ಹೋಬಳಿ, ಯು. ದಾಸ ಭಂಡಾರಿ, ದಿನೇಶ ಮೊಗವೀರ, ಜಯಶ್ರೀ ಇದ್ದರು. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮುಖಂಡ ವೆಂಕಟೇಶ ಕೋಣಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಗಣೇಶ ತೊಂಡೆಮಕ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT