ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆಗೆ ತತ್ತರಿಸಿದ ಜನ

Last Updated 11 ಅಕ್ಟೋಬರ್ 2017, 10:02 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನಲ್ಲಿ ಸೋಮವಾರ ತಡರಾತ್ರಿಯಿಂದ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ನಗರದ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿವೆ. ಚರಂಡಿ ಉಕ್ಕಿ ಹರಿಯುತ್ತಿವೆ. ಹಳೆ ಬಸ್ ನಿಲ್ದಾಣದ ಹಿಂದುಗಡೆಯ ಹಳ್ಳಕ್ಕೆ ಹೆಚ್ಚಿನ ಪ್ರಮಾಣ ನೀರು ಹರಿದು ಬಂದಿದ್ದರಿಂದ ಬಸವೇಶ್ವರ ನಗರಕ್ಕೆ ತೆರಳುವ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

‘ತಾಲ್ಲೂಕಿನ ಮಡ್ನಾಳದಲ್ಲಿ ಗೋಡೆ ಕುಸಿದು ಅಯ್ಯಪ್ಪ ಮರೆಪ್ಪ (80) ಮೃತಪಟ್ಟಿದ್ದಾರೆ. ಆರು ಮಕ್ಕಳಿಗೆ ಗಾಯವಾಗಿವೆ. ಮನೆ ಹಾನಿಯ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಬಂದಿಲ್ಲ. ಸರ್ವೇಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್‌ ಸೋಮಶೇಖರ ಹಾಗರಗುಂಡಗಿ ತಿಳಿಸಿದರು.

ತಾಲ್ಲೂಕಿನ ಹತ್ತಿಗೂಡೂರ– ಬಸವಂತಪುರ ಹಳ್ಳದ ಮೇಲೆ ಹೆಚ್ಚಿನ ನೀರು ಹರಿದು ಬಂದಿದ್ದರಿಂದ ಹಯ್ಯಾಳ, ಐಕೂರ, ಕೊಂಕಲ್ ಗ್ರಾಮಗಳ ರಸ್ತೆ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು. ಅದರಂತೆ ತಾಲ್ಲೂಕಿನ ಕೊಡಮನಹಳ್ಳಿ, ಹುಲಕಲ್, ಹಾಲಬಾವಿ ರಸ್ತೆಯ ಸಂಚಾರಕ್ಕೆ ವ್ಯತ್ಯಯವಾಗಿತ್ತು. ರಸ್ತೆ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.

ಮಳೆ: ‘ತಾಲ್ಲೂಕಿನ ವಡಿಗೇರಾ ಹೋಬಳಿ ವ್ಯಾಪ್ತಿಯಲ್ಲಿ ಅತ್ಯಧಿಕ 85 ಮಿ.ಮೀ ಮಳೆಯಾಗಿದೆ. ಅದರಂತೆ ಶಹಾಪುರ 66, ಭೀಮರಾಯನಗುಡಿ 67, ಗೋಗಿ 71, ದೋರನಹಳ್ಳಿ 65, ಹಯ್ಯಾಳ 70, ಹತ್ತಿಗೂಡೂರ 25 ಮಿ.ಮೀ ಮಳೆಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದರು.

‘ಧಾರಾಕಾರ ಮಳೆಯಿಂದ ಕಾಯಿ ಕಟ್ಟುವ ಹಂತದಲ್ಲಿರುವ ಹತ್ತಿ, ಮೆಣಸಿನಕಾಯಿ, ತೊಗರಿ ಬೆಳೆ ಸಂಕಷ್ಟಕ್ಕೆ ಸಿಲುಕಿವೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ಕೊಳೆಯುವ ಆತಂಕವಿದೆ.

ಕೆಲ ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಹಿಂಗಾರು ಬಿತ್ತನೆಗೆ ಸಿದ್ಧವಾಗಿದ್ದ ಶೇಂಗಾ, ಜೋಳ, ಕಡಲೆ, ಸೂರ್ಯಪಾನ ಬಿತ್ತನೆಗೆ ಹಿನ್ನಡೆಯಾಗಿದೆ.
ಹೆಚ್ಚು ತೇವಾಂಶವಾಗಿದ್ದರಿಂದ ವಾಣಿಜ್ಯ ಬೆಳೆ ಬ್ಯಾಡಗಿ ಮೆಣಸಿನಕಾಯಿ ಬೆಳೆ ಸಂಕಷ್ಟಕ್ಕೆ ಸಿಲುಕಿದೆ’ ಎಂದು ರೈತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT