ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕ್ಸೆಲ್‌ ಬಡ್ಸ್‌: ಗೂಗಲ್‌ ಸಹಾಯಕ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗೂಗಲ್‌ ಕಂಪೆನಿಯು ಇತ್ತೀಚೆಗೆ ಪಿಕ್ಸೆಲ್‌ ಇಯರ್‌ ಬಡ್ಸ್‌ (ಇಯರ್‌ ಫೋನ್‌)ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕರ್ಣಸಾಧನದ ವಿಶೇಷತೆಗಳೇನು ಗೊತ್ತೆ?

ಇದು ಸ್ಮಾರ್ಟ್‌ಫೋನ್‌ನ ಸಹಾಯಕನಂತೆ ಕಾರ್ಯನಿರ್ವಹಿಸುತ್ತದೆ. ವೈರ್‌ಲೆಸ್‌ ಆಗಿರುವ ಇದನ್ನು ಬ್ಲೂಟೂತ್‌ ಮೂಲಕ ಮೊಬೈಲ್‌ಗೆ ಸಂಪರ್ಕ ಕಲ್ಪಿಸಬೇಕು. ಧರಿಸುವ ಬಡ್ಸ್‌ಗಳು ಬೀಳದಿರಲೆಂದು ಎರಡನ್ನೂ ವೈರ್‌ನಿಂದ ಜೋಡಿಸಿದ್ದಾರೆ. ಇದನ್ನು ಅಂಗಿಯ ಕಾಲರ್‌ಗೆ ಧರಿಸಿಕೊಳ್ಳಬಹುದು.

ಮೊದಲ ನೋಟಕ್ಕೆ ಈ ಬಡ್ಸ್‌ ದೊಡ್ಡದಾಗಿವೆ, ಕಿವಿಗಳಿಗೆ ಸರಿಯಾಗಿ ಹೊಂದುತ್ತವೆಯೇ ಎಂಬ ಅನುಮಾನ ಕಾಡಬಹುದು. ಹಾಗಂತ ನೀವು ಮೂಗು ಮುರಿಯುವಂತಿಲ್ಲ. ಎಲ್ಲರ ಕಿವಿಗಳಿಗೆ ಹೊಂದುವಂತೆ ಹಾಗೂ ದೀರ್ಘಬಾಳಿಕೆ ಬರುವ ರೀತಿಯಲ್ಲಿ ಈ ಸಾಧನವನ್ನು ರೂಪಿಸಿದ್ದೇವೆ ಎನ್ನುತ್ತಾರೆ ಗೂಗಲ್‌ ತಂತ್ರಜ್ಞರು. ಇವು ಸದ್ಯಕ್ಕೆ ಕಪ್ಪು, ಬಿಳಿ, ನೀಲಿ ಬಣ್ಣಗಳಲ್ಲಿ ಲಭ್ಯವಿವೆ.

ಗೂಗಲ್‌ನ ಸಹಾಯಕ: ಈ ಸಾಧನದ ಮುಖ್ಯಲಕ್ಷಣವೆಂದರೆ, ಇದು ಗೂಗಲ್‌ನ ಸಹಾಯಕನಂತೆ ಕೆಲಸ ಮಾಡುತ್ತದೆ. ಬಲಗಿವಿಗೆ ಧರಿಸಿರುವ ಬಡ್‌ ಮೇಲೆ ಬೆರಳಿಟ್ಟು ಗೂಗಲ್‌ನಲ್ಲಿ ಏನು ಹುಡುಕಬೇಕೆಂದು ನಿರ್ದೇಶನ ನೀಡಿದರೆ, ಅದರ ಫಲಿತಾಂಶ ಮೊಬೈಲ್‌ನಲ್ಲಿ ಫಲಿತಗೊಳ್ಳುತ್ತದೆ. ಇಂಥವರಿಗೆ ಕರೆಮಾಡು, ಇಂದಿನ ಹವಾಮಾನ ಹೇಗಿರುತ್ತೆ, ಇಂತಹ ಸ್ಥಳಕ್ಕೆ ದಾರಿ ತೋರಿಸು, ಹಾಡು ಹಾಕು, ಸಂದೇಶ ಕಳುಹಿಸು ಎಂಬ ನಿರ್ದೇಶನಗಳನ್ನು ಮಾತಿನ ಮೂಲಕ ನೀಡಬೇಕು. ಅದನ್ನು ಗ್ರಹಿಸುವ ಸ್ಮಾರ್ಟ್‌ಫೋನ್‌ ಅದಕ್ಕೆ ತಕ್ಕ ಫಲಿತಾಂಶಗಳನ್ನು ನೀಡುತ್ತದೆ.

ಈ ಸಾಧನ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂದರೆ, ನೀವು ಕೇಳುವ ಹಾಡನ್ನು ನಿಲ್ಲಿಸಬೇಕೆಂದರೆ ಬಡ್‌ ಮೇಲೆ ಮೆತ್ತಗೆ ಅದುಮಿದರೆ ಸಾಕು. ಕ್ಷಣಮಾತ್ರದಲ್ಲೆ ಹಾಡು ನಿಲ್ಲುತ್ತೆ. ಹಾಡನ್ನು ಮುಂದುವರಿಸಲು ಮತ್ತೆ ಅದೇ ಬಡ್‌ ಮೇಲೆ ಬೆರಳೊತ್ತಬೇಕು. ಕೇಳುವ ಧ್ವನಿ ಏರಿಳಿತ ಮಾಡಲು ಅವುಗಳ ಮೇಲೆ ಬೆರಳನ್ನು ಬಲಕ್ಕೂ, ಎಡಕ್ಕೂ ಸವರಬೇಕು.

ಅನುವಾದಕ: ಈ ಪರಿಕರ ಭಾಷಾನುವಾದಕನ ಪಾತ್ರವನ್ನೂ ನಿರ್ವಹಿಸುತ್ತದೆ. ಉದಾಹರಣೆಗೆ–ನಮ್ಮ ಎದುರಿನ ವ್ಯಕ್ತಿಯೊಂದಿಗೆ ಜಪಾನ್‌ ಭಾಷೆಯಲ್ಲಿ ಸಂವಹನ ನಡೆಸಬೇಕು ಎಂದಿಟ್ಟುಕೊಳ್ಳಿ. ಬಾಯಿ ಮಾತಿನ ಮೂಲಕ ‘ಜಪಾನ್‌ನ ಭಾಷೆಯಲ್ಲಿ ಮಾತನಾಡಲು ಸಹಕರಿಸು’ ಎಂಬ ಸಂದೇಶ ನೀಡಿ, ಮಾತನ್ನಾರಂಭಿಸಬೇಕು. ನಮ್ಮ ಮಾತುಗಳು ಸೂಚಿಸಿದ ಭಾಷೆಯಲ್ಲಿ ಮೊಬೈಲ್‌ ಸ್ಪೀಕರ್‌ ಮೂಲಕ ಎದುರಿನ ವ್ಯಕ್ತಿಗೆ ತಲುಪುತ್ತದೆ. ಆತ ನೀಡಿದ ಪ್ರತಿಕ್ರಿಯೆ ನಾವಾಡಿದ ಭಾಷೆಯಲ್ಲಿ ಬಡ್‌ಗಳು ಕಿವಿಯಲ್ಲಿ ಉಲಿಯುತ್ತವೆ. ಹೀಗೆ ಇದರಲ್ಲಿ 40 ಭಾಷೆಗಳಲ್ಲಿ ಸಂವಹನ ನಡೆಸಬಹುದು. ಸದ್ಯ ಈ ಅನುವಾದ ಅಷ್ಟೇನು ನಿಖರವಾಗಿಲ್ಲ.

ಈ ಸಾಧನದಿಂದ ಧ್ವನಿ ಆಲಿಸಲು ಆ್ಯಂಡ್ರಾಯ್ಡ್‌ 5.0 ಲಾಲಿಪಾಪ್‌, ಐಒಎಸ್‌ 10 ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವರ್ಷನ್‌ಗಳಿರುವ ಸ್ಮಾರ್ಟ್‌ಫೋನ್‌ ಇರಬೇಕು. ಪಿಕ್ಸೆಲ್‌ 2 ಅಥವಾ ಪಿಕ್ಸೆಲ್‌ 2 ಎಕ್ಸ್‌ಎಲ್‌ ಫೋನ್‌ಗಳಲ್ಲಿ ಇದನ್ನು ಬಳಸುವ ಮೂಲಕ ಗೂಗಲ್‌ ಅನುವಾದವನ್ನು ತ್ವರಿತವಾಗಿ ಹಾಗೂ ಆದಷ್ಟು ನಿಖರವಾಗಿ ಪಡೆಯಬಹುದಾಗಿದೆ.

ಇದನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಚ್‌ ಮಾಡಿದರೆ, ನಿರಂತರವಾಗಿ 5 ಗಂಟೆಗಳ ಕಾಲ ಬಳಸಬಹುದು. ಹಾಗೆಯೆ ಬಡ್‌ನಲ್ಲಿ ಎಷ್ಟು ಚಾರ್ಚ್‌ ಉಳಿದಿದೆ ಎಂಬುದನ್ನು ಮೊಬೈಲ್‌ನಲ್ಲಿ ತಿಳಿಯಬಹುದಾಗಿದೆ.

ಈ ಸಾಧನವನ್ನು ಆ್ಯಪಲ್‌ ಏರ್‌ಪಾಡ್ಸ್‌ಗೆ ಸ್ಪರ್ಧಿಯಾಗಿ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ. ಬಡ್ಸ್‌ ಮತ್ತು ಅವುಗಳನ್ನು ಸಂಪರ್ಕಿಸುವ ವೈರ್‌ಅನ್ನು ನೀಡಿರುವ ಚಿಕ್ಕ ಡಬ್ಬಿಯಲ್ಲಿ ಹಾನಿಯಾಗದಂತೆ ಜೋಡಿಸುವುದೆ ತಲೆನೋವಿನ ಕೆಲಸವೆಂದು ಟೆಕ್‌ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇರಲಿ, ಈ ಇಯರ್‌ಫೋನ್‌ಗಳು ಈಗ ಆನ್‌ಲೈನ್‌ನಲ್ಲಿ ಬಿಕರಿಗಿವೆ. ಅವುಗಳ ಬೆಲೆ ₹10,335. ಈ ಬೆಲೆ ಭಾರವೆನಿಸಿದರೂ, ಜೇಬು ಗಟ್ಟಿಯಿರುವ ಟೆಕ್‌ಪ್ರಿಯರು ಕೊಳ್ಳುತ್ತಿದ್ದಾರೆ. ನವೆಂಬರ್‌ ಹೊತ್ತಿಗೆ ಈ ಸಾಧನ ಅವರ ಕಿವಿಗಳನ್ನು ಅಲಂಕರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT