ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಲಚ್ಚು ಯಾವ್ದು ಅಂತ್ಲೇ ಗೊತ್ತಿರಲಿಲ್ಲ’

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಾನು ಮೊದಲು ಕಾರ್ ಓಡಿಸಿದ್ದು ಅದ್ದೂರಿ ಸಿನಿಮಾ ಸಮಯದಲ್ಲಿ. ಆ ಸಿನಿಮಾ ಮುಹೂರ್ತ ಆಗಿ ನಿಂತುಹೋಗಿತ್ತು. (ಆ ಸಿನಿಮಾ ಒಟ್ಟು ನಾಲ್ಕು ಸಲ ನಿಂತು ಮತ್ತೆ ಶುರುವಾಗಿ ಪೂರ್ಣಗೊಂಡಿದ್ದು!).

ನಾನೇನೂ ಡ್ರೈವಿಂಗ್ ಸ್ಕೂಲಿಗೆ ಹೋಗಿ ಕಲಿತವನಲ್ಲ. ನನಗೆ ಅಂಥ ಕಾರ್ ಕ್ರೇಜ್ ಇರಲಿಲ್ಲ. ಈಗಲೂ ಕಾರ್ ಬಗ್ಗೆ ಅಂಥ ಕ್ರೇಜ್ ಏನೂ ಇಲ್ಲ. ಬೈಕ್ ಫ್ಯಾನ್ ನಾನು. ಅಲ್ಲಿಯವರೆಗೂ ಬೈಕ್ ಓಡಿಸ್ಕೊಂಡು ಇದ್ದೆ.

ಅವತ್ತೊಂದಿನ ಯಾಕೋ ಮನೆ ಎದುರು ನಿಂತಿದ್ದ ಕಾರು ಓಡಿಸಬೇಕು ಅನಿಸಿತು. ಅದು ಸ್ಯಾಂಟ್ರೊ ಕಾರು. ಸಿನಿಮಾ ನಿಂತುಹೋದ ಬೇಜಾರೋ, ಕಾರ್ ಡ್ರೈವಿಂಗ್ ಬಗ್ಗೆ ಇದ್ದ ಕುತೂಹಲವೋ ಗೊತ್ತಿಲ್ಲ. ಯಾರಿಗೂ ಹೇಳದೇ ಕೇಳದೇ ಸುಮ್ಮನೇ ಕೀ ತೆಗೆದುಕೊಂಡು ಹೋಗಿ ಕಾರ್ ಎತ್ತಾಕೊಂಡು ಹೋಗಿಬಿಟ್ಟಿದ್ದೆ. ಆಗ ನನಗೆ ಕಾರಿನ ಬ್ರೇಕ್ ಯಾವ್ದು, ಕ್ಲಚ್ ಯಾವ್ದು ಅಂತಲೂ ಗೊತ್ತಿರಲಿಲ್ಲ. ಅದೆಲ್ಲ ಗೊತ್ತಾಗಿದ್ದು ಎರಡು ದಿನ ಆದ ಮೇಲೆ. ರಸ್ತೆ ಖಾಲಿ ಖಾಲಿ ಇತ್ತು. ಸುಮ್ಮನೇ ಓಡಿಸಿಕೊಂಡು ಹೋಗಿಬಿಟ್ಟಿದ್ದೆ.

ಮನೆ ಮುಂದಿನ ರಸ್ತೆಯಲ್ಲಿ ಸುತ್ತಿಸಿ ತಂದು ಮತ್ತೆ ಮನೆಯೆದುರಿಗೇ ನಿಲ್ಲಿಸಿದ್ದೆ. ಆದರೆ ಮೊದಲಿನ ಹಾಗೆ ನಿಲ್ಲಿಸಲು ಗೊತ್ತಾಗದೇ ಉಲ್ಟಾ ನಿಲ್ಲಿಸಿಬಿಟ್ಟಿದ್ದೆ. ಮರುದಿನ ಅದನ್ನು ನೋಡಿ ಮನೆಯವರೆಲ್ಲರೂ ಇದೇನು ಕಾರ್ ಹಿಂಗೆ ಅಡ್ಡಡ್ಡ ನಿಂತಿದೆಯಲ್ಲಾ ಎಂದು ತುಂಬಾ ತಲೆಕೆಡಿಸಿಕೊಂಡಿದ್ದರು. ನಾನು ಮಾತ್ರ ಯಾರ ಬಳಿ ಏನೂ ಬಾಯಿಬಿಡಲೇ ಇಲ್ಲ. ಆ ಕಾರನ್ನು ನಾನೇ ಓಡಿಸಿಕೊಂಡು ಹೋಗಿ ನಿಲ್ಲಿಸಿದ್ದು ಎಂಬುದು ಕೊನೆಗೂ ಯಾರಿಗೂ ಗೊತ್ತಾಗಲೇ ಇಲ್ಲ.

ಅದೊಂಥರ ವಿಚಿತ್ರ ಅನುಭವ. ಅದನ್ನು ವಿವರಿಸಲಿಕ್ಕೇ ಆಗಲ್ಲ. ಏನೂ ಅಪಘಾತ ಮಾಡದೇ ಸುರಕ್ಷಿತವಾಗಿ ತಿರುಗಿ ಬಂದು ನಿಲ್ಲಿಸಿದ್ದೇ ಈಗ ಪವಾಡವಾಗಿ ಕಾಣುತ್ತದೆ.

ಹೀಗೆ ನಾನು ಒಮ್ಮಿಂದೊಮ್ಮೆಲೇ ಕಾರ್ ಎತ್ಕೊಂಡೋಗೋದಿಕ್ಕೆ ನನ್ನಲ್ಲಿ ಧೈರ್ಯ ಹುಟ್ಟಿದ್ದು ನಮ್ಮ ಕಿಶೋರ್ ಅಂಕಲ್‍ರಿಂದ. ಅವರು ನಿರ್ದೇಶಕರು. ತುತ್ತಮುತ್ತ ಸಿನಿಮಾ ನಿರ್ದೇಶಕ. ಅವರು ನಮ್ಮ ಗಾಡ್ ಫಾದರ್. ಅವರು ರ್‍ಯಾಲಿಯ ಬ್ಯಾಕ್‍ಅಪ್‌ ಕಾರ್ ಡ್ರೈವ್ ಮಾಡ್ತಿದ್ರು. ಅಂದ್ರೆ ರೇಸ್‍ನ ಕಾರ್ ಕೆಟ್ಟೋದ್ರೆ ಅಂತ ಆ ಕಾರಿನ ಹಿಂದೆ ಅದರಷ್ಟೇ ವೇಗವಾಗಿ ಓಡುವ ಕಾರುಗಳು. ಅವರನ್ನು ನಾವು ಕಾರ್ ಮಾಮ ಅಂತ ಕರೀತಿದ್ವಿ. ಅರ್ಜುನ್ (ಅರ್ಜುನ್ ಸರ್ಜಾ) ಅಂಕಲ್‍ಗೆ ಡಿಶ್ಯೂಂ ಮಾಮ ಅಂತ ಕರೀತಿದ್ವಿ. ಅವರು ಸಿನಿಮಾದಲ್ಲಿ ಫೈಟ್ ಮಾಡ್ತಿದ್ರಲ್ಲಾ ಅದ್ಕೇ ಅವರಿಗೆ ಡಿಶ್ಯೂಂ ಮಾಮ ಅಂತ ಹೆಸರು. ಈ ಹೆಸರುಗಳನ್ನು ಇಟ್ಟಿದ್ದು ನಮ್ಮಣ್ಣ (ಚಿರಂಜೀವಿ ಸರ್ಜಾ).

ಕಿಶೋರ್ ಅಂಕಲ್ ತುಂಬಾ ಫಾಸ್ಟಾಗಿ ಕಾರ್ ಓಡಿಸ್ತಿದ್ರು. ಮತ್ತು ತುಂಬ ಒಳ್ಳೆಯ ಡ್ರೈವರ್ ಆಗಿದ್ರು. ಅವರ ಡ್ರೈವಿಂಗ್ ನೋಡಿಯೇ ನನಗೆ ಕಾರ್ ಡ್ರೈವಿಂಗ್ ಕಲೀಬೇಕು ಅಂತ ಉತ್ಸಾಹ ಬಂದಿದ್ದು. ನಾನು ಯಾರಿಗೂ ಹೇಳದೆ ಕೇಳದೇ ಕಾರ್ ಎತ್ತಾಕೊಂಡು ಹೋಗಲಿಕ್ಕೂ ಅವರೇ ಸ್ಫೂರ್ತಿಯಾಗಿದ್ರು ಅನಿಸುತ್ತೆ. ನಂತರ ನಾನು ಸರಿಯಾಗಿ ಡ್ರೈವಿಂಗ್ ಕಲಿತಿದ್ದೂ ಅವರು ಓಡಿಸುತ್ತಿದ್ದುದನ್ನು ನೋಡುತ್ತಲೇ.

ಈಗ ನಮ್ಮ ಮನೆಯಲ್ಲಿ ಕಾರುಗಳಿವೆ. ಆದ್ರೆ ನಂಗೆ ಕಾರ್ ಶೋಕಿ ಅಷ್ಟೊಂದಿಲ್ಲ. ಆಗಲೇ ಹೇಳಿದ ಹಾಗೆ ನಂಗೆ ಇಂದಿಗೂ ಬೈಕೇ ಇಷ್ಟ. ಅದರಲ್ಲಿಯೂ ಬೇರೆ ದೇಶಗಳ ಬೈಕ್‍ಗಳು ಅಷ್ಟೊಂದು ಇಷ್ಟ ಇಲ್ಲ. ನಮ್ಮ ಭಾರತದ ಆರ್‍ಎಕ್ಸ್, ಬುಲೆಟ್, ರಾಯಲ್ ಎನ್‍ಫೀಲ್ಡ್ ತುಂಬ ಇಷ್ಟ. ನಾನು ಕಾಲೇಜಿಗೆ ಹೋಗುವಾಗಲೂ ನಂಗೆ ರಾಯಲ್ ಎನ್‍ಫೀಲ್ಡ್ ಇಷ್ಟವಾಗಿತ್ತು. ಆ ಗಾಡಿ ಓಡಿಸುವ ಫೀಲೇ ಬೇರೆ. ಈಗಲೂ ಬೈಕ್‍ನಲ್ಲಿ ತುಂಬಾ ಓಡಾಡುತ್ತಿರುತ್ತೇನೆ. ಹೆಲ್ಮೆಟ್ ಹಾಕಿಕೊಂಡು ಹೊರಟುಬಿಡುತ್ತೇನೆ. ಆಗ ನನ್ನನ್ನು ಯಾರೂ ಗುರುತು ಹಿಡಿಯುವುದಿಲ್ಲ. ಹಾಗೆ ಅನಾಮಿಕನಾಗಿ ಅಡ್ಡಾಡುವುದು ನನಗೆ ತುಂಬ ಖುಷಿ ಕೊಡುತ್ತದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT