ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಿ ಪ್ರವಾಸ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಷ್ಣಯ್ಯನವರ ಗದ್ದೆ ಕೋಗು ಅಂದು ಕುತೂಹಲದ ತಾಣ ವಾಗಿತ್ತು. ಕಾರು, ಬೈಕುಗಳಲ್ಲಿ ಹೋಗುವವರು ಚಣ ಹೊತ್ತು ನಿಂತು ನೋಡುತ್ತಿದ್ದರು. ಶಾಲಾ ಮಕ್ಕಳೂ ಕಣ್ಣಾಯಿಸು ತ್ತಿದ್ದರು. ಬಸ್ಸಿನ ಪ್ರಯಾಣಿಕರೂ ಇಣುಕಿ ನೋಡುತ್ತಿದ್ದರು. ಅಕ್ಕ-ಪಕ್ಕದ ರೈತರೂ ಜಮಾಯಿಸಿದ್ದರು. ಇವರೆಲ್ಲರ ಬೆರಗಿನ ನೋಟಕ್ಕೆ ಕಾರಣ ಪ್ಯಾಂಟು, ಟೀ ಶರ್ಟು, ಬರ್ಮುಡಾ ತೊಟ್ಟ ನಗರದ ಹತ್ತಾರು ಜನ ಗದ್ದೆ ನೆಟ್ಟಿ ಮಾಡುತ್ತಿದ್ದುದು.

ಉದ್ದುದ್ದ ಕ್ಯಾಮೆರಾ ಹಿಡಿದು ಬದುಗಳ ಮೇಲೆ ನಿಂತು ಹಲವು ಕೋನಗಳಲ್ಲಿ ಫೋಟೊ ತೆಗೆಯುತ್ತಿದ್ದುದೂ ಜನರ ಕುತೂಹಲ ಹೆಚ್ಚಿಸಿತ್ತು. ಸ್ಥಳೀಯವಾಗಿ ಕೂಲಿಯವರು ಸಿಗುತ್ತಿಲ್ಲವಾದ್ದರಿಂದ ಕೃಷ್ಣಯ್ಯ ಬೆಂಗಳೂರಿನಿಂದ ನೆಟ್ಟಿ ಮಾಡುವವರನ್ನು ಕರೆಸಿಬಿಟ್ಟರಾ ಎಂದು ಒಂದಿಬ್ಬರು ಕೇಳಿದ್ದೂ ನಮ್ಮ ಕಿವಿಗೆ ಬಿತ್ತು. ಅಸಲು ವಿಷಯ ಏನೆಂದರೆ ಗದ್ದೆ ನಾಟಿ ಮಾಡುವ ಅನುಭವಕ್ಕಾಗಿ ಪ್ರವಾಸ ಬಂದ ನಮ್ಮನ್ನು ನೋಡಲು ಅವರೆಲ್ಲಾ ಬಂದಿದ್ದರು.

ದೇವಾಲಯ, ಜಲಪಾತ, ಕೋಟೆ-ಕೊತ್ತಲ, ರೆಸಾರ್ಟು, ಸಮುದ್ರ ತೀರಗಳಂತಹ ಜನನಿಬಿಡ ಪ್ರವಾಸಿ ತಾಣಗಳಿಗಿಂತ ಭಿನ್ನವಾಗಿ ಪ್ರವಾಸ ಹೋಗಬೇಕೆಂದು ನಮ್ಮ ಕಚೇರಿ ಸಿಬ್ಬಂದಿಯ ಬಹುದಿನದ ಬೇಡಿಕೆ. ಅದಕ್ಕೆ ಪೂರಕವಾಗಿ ನಮ್ಮ ಸಂಸ್ಥೆಯ ಶ್ರೀಕಾಂತ ಶೆಣೈ ಅವರು ಸೂಚಿಸಿದ್ದು ಕೃಷಿ ಪ್ರವಾಸ. ಅವರೂ ತೀರ್ಥಹಳ್ಳಿಯವರೇ ಆದ್ದರಿಂದ ಅಲ್ಲಿಗೇ ಹೋಗುವ ತೀರ್ಮಾನ. ಕೃಷಿ ಪ್ರವಾಸವೆಂದರೆ ಹೊಲ, ಗದ್ದೆ, ತೋಟ ನೋಡಿಕೊಂಡು ಬರುವುದಕ್ಕಿಂತಲೂ ಮಣ್ಣು ಮುಟ್ಟಿ ಕೆಲಸ ಮಾಡಬೇಕೆಂದು ಎಲ್ಲರ ಬಯಕೆ. ಶೆಣೈ ಅವರ ಸಂಬಂಧಿಗಳಾದ ತೀರ್ಥಹಳ್ಳಿಯ ಹರಳಿಮಠದ ಕೃಷ್ಣಕುಮಾರ್ ಅವರ ಗದ್ದೆ ನಾಟಿಯೂ ಅದೇ ಸಮಯಕ್ಕೆ ಆರಂಭವಾಗಿದ್ದರಿಂದ ಗದ್ದೆ ಪೈರು ಹಾಕುವ ಪ್ರವಾಸಕ್ಕೆ ಹೊರಟು ಬಂದಿದ್ದೆವು.

ಅವರ ಮನೆ ತಲುಪಿದಾಗ ರಾತ್ರಿ ಎಂಟು ಗಂಟೆ. ಕೃಷ್ಣಯ್ಯನವರದು ಮಲೆನಾಡಿನ ಸಾಂಪ್ರದಾಯಿಕ ತೊಟ್ಟಿ ಮನೆ. ವಿಶಾಲವಾದ ಅಂಗಳ. ಗೋಡೆ, ನಾಗಂದಿಗೆ, ತೊಲೆ ಕಂಬ, ನೂರಾರು ಕ್ವಿಂಟಾಲ್ ಭತ್ತ ತುಂಬುವ ಪಣತ ಎಲ್ಲವೂ ಬೃಹತ್ತು. ಕೊಟ್ಟಿಗೆಯಲ್ಲಿ ಕಿಣಿ-ಕಿಣಿ ಸದ್ದು ಮಾಡುತ್ತಿದ್ದ ಹತ್ತಾರು ಹಸು, ಎಮ್ಮೆಗಳು. ಘನ ಅಡಿ ಲೆಕ್ಕದ ಮನೆಗಳಲ್ಲಿ ವಾಸಿಸುವ ನಮ್ಮ ನಗರ ಪ್ರವಾಸಿಗಳು ಆ ವಿಶಾಲತೆಗೆ ಅಚ್ಚರಿಪಡುತ್ತಾ ಬಾಳೆ ಎಲೆಯ ಮೇಲೆ ಹಬೆಯಾಡುವ ಅನ್ನ, ಹುರಳಿಕಟ್ಟಿನ ಸಾರು ಚಪ್ಪರಿಸಿ ತಲೆ ನೆಲಕ್ಕಿಟ್ಟಿದ್ದೇ ನಿದ್ದೆ ಆವರಿಸಿತು.

ಬೆಳಿಗ್ಗೆ ಏಳೂವರೆಗೆಲ್ಲಾ ತಯಾರಾದೆವು. ಹಲಸಿನ ಕೊಟ್ಟೆ ಕಡುಬು, ಚಟ್ನಿ, ಬೂದುಗುಂಬಳದ ಹಲ್ವ ಹಾಗೂ ಮಲೆನಾಡಿನ ಕಾಫಿಯ ಸೊಗಸಾದ ನಾಷ್ಟಾ ಮುಗಿಸಿ, ಮಲೆನಾಡಿನ ಕಂಬಳಿ ಕೊಪ್ಪೆ ಹಾಗೂ ಅಡಿಕೆ ಹಾಳೆಯ ಟೊಪ್ಪಿಯೊಂದಿಗೆ ಸಣ್ಣ ಫೋಟೊ ಸೆಶನ್ನನ್ನೂ ಮುಗಿಸಿ ಗದ್ದೆಯತ್ತ ಹೋದರೆ, ಅಲ್ಲಾಗಲೇ ಸ್ಥಳೀಯ ಹೆಣ್ಣಾಳುಗಳು, ಗಂಡಾಳುಗಳು ಹಾಜರಿದ್ದರು. ಅವರ ಜೊತೆಗೇ ಕೆಸರಿಗಿಳಿಯಿತು ನಮ್ಮ ದಂಡು. ಬರೀ ನೋಡಲು ಬಂದಿದ್ದಾರೆ ಅಂದುಕೊಂಡಿದ್ದ ಅವರಿಗೆ ಏಕ್‍ದಂ ನೆಟ್ಟಿಗೆ ಇಳಿದ ನಮ್ಮನ್ನು ಕಂಡು ಕಣ್ಣರಳಿತು.

ನಮ್ಮ ತಂಡದಲ್ಲಿ ಅದುವರೆಗೂ ಗದ್ದೆಯನ್ನೇ ನೋಡದವರಿದ್ದರು, ಸಣ್ಣವರಿದ್ದಾಗ ಗದ್ದೆ ಕೆಲಸ ಮಾಡಿ ಅನುಭವ ಇದ್ದವರಿದ್ದರು, ಈಗಲೂ ಕೃಷಿ ಮಾಡುವವರಿದ್ದರು. ಕೆಲವರಿಗೆ ಇದು ಹೊಚ್ಚ ಹೊಸ ಅನುಭವ, ಇನ್ನು ಕೆಲವರಿಗೆ ಬಾಲ್ಯದ ನೆನಪು. ಎಲ್ಲರಿಗೂ ಆ ವಾತಾವರಣ, ಉದ್ದಕ್ಕೆ ತೆರೆತೆರೆಯಾಗಿ ಹರಡಿದ ಗದ್ದೆ ಕೋಗು, ಹಸಿರು ಕಕ್ಕುವ ಸೊಪ್ಪಿನ ಬೆಟ್ಟ, ನಿರಂತರ ಹರಿಯುವ ಹಳ್ಳದ ನೀರು ಹೊಸ ಉಮೇದು ತಂದಿತ್ತು.

ನೆಟ್ಟಿ ಹಾಕುವುದಕ್ಕಷ್ಟೇ ಸೀಮಿತವಾಗಲಿಲ್ಲ ನಮ್ಮವರು. ಗದ್ದೆ ಮಟ್ಟ ಹೊಡೆಯುವುದು, ಗೊಬ್ಬರ ಎರಚುವುದು, ಟಿಲ್ಲರ್ ಹೊಡೆಯುವುದು, ಪೈರಿನ ಕಂತೆ ಹಂಚುವುದು, ಸನಿಕೆ ಹಿಡಿದು ಅಂಚು ಕೆತ್ತುವುದು ಮುಂತಾದ ಎಲ್ಲ ಕೆಲಸಗಳಿಗೂ ಕೈಹಾಕಿದರು. ಅದು ಬೇಸರವಾದಾಗ ಮತ್ತೆ ನೆಟ್ಟಿಗೆ ಬಂದರು. ಈ ನಡುವೆ ಒಂದು ಬೆಲ್ಲದ ಕಾಫಿಯ ಬಿಡುವು. ಕರುಣಾಕರ್ ಮೊಬೈಲ್ ರಿಂಗಾಯಿತು. ಆ ಕಡೆಯಿಂದ ಮಡದಿ ‘ಏನು ಮಾಡ್ತಾ ಇದ್ದೀರಿ’ ಎಂದಿದ್ದಕ್ಕೆ ಇಂವ ಈತರಕೀತರ ಪೈರು ಹಾಕ್ತಾ ಇದೀನಿ, ಟಿಲ್ಲರ್ ಹೊಡಿತಾ ಇದೀನಿ ಎಂದು ಉಮೇದಿನಿಂದ ಉತ್ತರಿಸಿದ. ಮಡದಿ ಖುಷಿ ಪಡುತ್ತಾಳೆಂದು ನಿರೀಕ್ಷಿಸಿದ್ದವನಿಗೆ ಬೈಗುಳಗಳ ಸುರಿಮಳೆಯಾಯಿತು. ‘ಗದ್ದೆ ಪೈರಾಕೋಕೆ ಇಲ್ಲಿಂದ ಅಲ್ಲಿಗೋಗಿದ್ದೀಯಾ, ಊರಿಗೋದ್ರೆ ಒಂದ್ ಕಡ್ಡಿ ಇತ್ಲಾಕಡೆಯಿಂದ ಅತ್ಲಾಕಡೆ ಇಡದಿಲ್ಲ’ ಇತ್ಯಾದಿ ಇತ್ಯಾದಿ. ಇದರಿಂದ ಹುಷಾರಾದ ಕೆಂಪೇಗೌಡರು ಅವರ ಮಡದಿ ಫೋನ್ ಮಾಡಿದಾಗ ತೀರ್ಥಹಳ್ಳಿಯ ಹಲವು ಪ್ರವಾಸಿ ತಾಣಗಳ ಹೆಸರು ಹೇಳಿ ಅವನ್ನೆಲ್ಲಾ ನೋಡುತ್ತಿರುವುದಾಗಿ ಬಚಾವಾದರು. ಎಲ್ಲರಿಗೂ ನಗುವೋ ನಗು.

ಮಧ್ಯಾಹ್ನ ಊಟದ ಬಿಡುವಿನಲ್ಲಿ ನಾವೆಲ್ಲಾ ಸೇರಿ ಮೊದಲೇ ತೀರ್ಮಾನಿಸಿದಂತೆ ಕೃಷ್ಣಯ್ಯ ಮತ್ತವರ ಕುಟುಂಬಕ್ಕೆ ಗದ್ದೆ ಪಕ್ಕದಲ್ಲೇ ಪುಟ್ಟ ಸನ್ಮಾನ ಮಾಡಿದೆವು. ಮಲೆನಾಡಿನಿಂದ ಭತ್ತ ಕಣ್ಮರೆಯಾಗುತ್ತಿದೆ, ಬಹುತೇಕ ಗದ್ದೆ ಕೋಗುಗಳು ಅಡಿಕೆ ತೋಟಗಳಾಗಿ, ಶುಂಠಿ ತಾಕುಗಳಾಗಿ ರೂಪಾಂತರವಾಗುತ್ತಿವೆ. ಅಂತಹುದರಲ್ಲಿ ಭತ್ತವನ್ನು ಕೈಬಿಡದೆ ಸಣ್ಣವಾಳ್ಯ, ಜೋಳಗ ಇತ್ಯಾದಿ ದೇಸಿ ತಳಿಗಳನ್ನೂ ಬೆಳೆಯುತ್ತಿರುವ ಕೃಷ್ಣಯ್ಯನವರ ಬದ್ಧತೆ ಅನುಕರಣೀಯ.

ಊಟದ ನಂತರವೂ ನೆಟ್ಟಿ ಕೆಲಸ ಮುಂದುವರಿಯಿತು. ಕೇವಲ ಖುಷಿಗಾಗಿ ಬಂದಿದ್ದಾರೆ, ವಾಟ್ಸಪ್ಪು, ಫೇಸ್‌ಬುಕ್ಕಿಗೆ ಹಾಕಲು ಒಂದಷ್ಟು ಫೋಟೊ ತೆಗೆಸಿಕೊಂಡು ಹೋಗುತ್ತಾರೆ, ನಡುಬಗ್ಗಿಸಿ ನೆಟ್ಟಿ ಮಾಡುವುದು ಇವರಿಂದ ಆಗಲಿಕ್ಕಿಲ್ಲ ಎಂದುಕೊಂಡಿದ್ದ ಅಲ್ಲಿನ ಕೆಲವರಿಗೆ ನಮ್ಮ ತಂಡದವರು ವೃತ್ತಿಪರರಂತೆ ಕೆಲಸ ಮಾಡಿದ್ದು ನೋಡಿ ಬೆರಗಾಯಿತು. ‘ಅಡ್ಡಿಲ್ಲ’ ಎಂಬ ಶಾಭಾಸ್‍ಗಿರಿಯೂ ಸಿಕ್ಕಿತು. ಅಂದು ಸುಮಾರು ಐದು ಎಕರೆ ಗದ್ದೆ ನಾಟಿ ಮಾಡಿದ್ದೆವು. ಅದರಲ್ಲಿ ನಮ್ಮ ಪಾಲು ಪುಟ್ಟದಾದರೂ ಅವರು ಮಾಡುವ ಕೆಲಸಕ್ಕೆ ಭಂಗ ತರಲಿಲ್ಲವಲ್ಲ ಎಂಬುದೇ ನೆಮ್ಮದಿ.

ನಮ್ಮ ‘ಬೆಂಗಳೂರು ಕೂಲಿಯಾಳುಗಳ’ ಕೆಲಸದಿಂದ ಸಂತೃಪ್ತರಾದ ‘ಸಾಹುಕಾರರು’ (ಕೃಷ್ಣಯ್ಯ) ಅಂದು ರಾತ್ರಿ ನಾಟಿಕೋಳಿ ಔತಣ ಮಾಡಿದ್ದರು. ಊಟ ಮಾಡುವಾಗ ನಮ್ಮ ತಂಡದ ಕಿರಿಯರಾದ ಪ್ರೇಮಾ, ಮಮತಾ, ಸಂಜೀವ್ ‘ಗದ್ದೆ ಕೆಲ್ಸ ಎಷ್ಟ್ ಕಷ್ಟ ಅಲ್ವಾ, ಇನ್ಮೇಲೆ ಅನ್ನ ವೇಸ್ಟ್ ಮಾಡ್ಬಾರ್ದು’ ಎನ್ನುತ್ತಿದ್ದರು. ನಮ್ಮ ಎಳೆ ತಲೆಮಾರುಗಳಿಗೆ ಕೃಷಿ, ಕೃಷಿಕರ ಬದುಕಿನ ಸಮೀಪ ದರ್ಶನವನ್ನು ಹೀಗೆ ಮಾಡಿಸಬೇಕು.

ಬೆಳಿಗ್ಗೆ ಕೃಷ್ಣಯ್ಯ ಬೆಳೆದ ಸಣ್ಣವಾಳ್ಯ ಅಕ್ಕಿಯನ್ನು ಖರೀದಿಸಿ ಮತ್ತೆ ಕಟಾವಿಗೆ ಬರುವುದಾಗಿ ಹೇಳಿ ಹೊರಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT