ಅಮೆಜಾನ್‍ ಕಂಪೆನಿಗೆ ಮೋಸ ಮಾಡಿ ಹಣ ಲಪಟಾಯಿಸಿದ ಯುವಕನ ಬಂಧನ

ಶನಿವಾರ, ಮೇ 25, 2019
28 °C

ಅಮೆಜಾನ್‍ ಕಂಪೆನಿಗೆ ಮೋಸ ಮಾಡಿ ಹಣ ಲಪಟಾಯಿಸಿದ ಯುವಕನ ಬಂಧನ

Published:
Updated:
ಅಮೆಜಾನ್‍ ಕಂಪೆನಿಗೆ ಮೋಸ ಮಾಡಿ ಹಣ ಲಪಟಾಯಿಸಿದ ಯುವಕನ ಬಂಧನ

ನವದೆಹಲಿ: ಆನ್‍ಲೈನ್ ಸ್ಟೋರ್ ಅಮೆಜಾನ್‍ನಿಂದ ದುಬಾರಿ ಫೋನ್‍ಗಳಿಗಾಗಿ ಆರ್ಡರ್ ಮಾಡಿ ಖರೀದಿಸಿ ನಂತರ ತನಗೆ ಫೋನ್ ಸಿಕ್ಕಿಲ್ಲ ಎಂದು ಹೇಳಿ ವಂಚನೆ ನಡೆಸಿ ಹಣ ಲಪಟಾಯಿಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

21ರ ಹರೆಯದ ಶಿವಂ ಚೋಪ್ರಾ ಎಂಬಾತ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಅಮೆಜಾನ್ ಸ್ಟೋರ್‍‍ನಿಂದ 166 ದುಬಾರಿ ಫೋನ್‍ಗಳಿಗೆ ಆರ್ಡರ್ ಮಾಡಿದ್ದಾನೆ. ಆಮೇಲೆ ತನಗೆ ಫೋನ್ ಸಿಕ್ಕಿಲ್ಲ, ಖಾಲಿ ಪೆಟ್ಟಿಗೆ ಮಾತ್ರ ಸಿಕ್ಕಿದೆ ನನಗೆ ಹಣ ವಾಪಸ್ ಮಾಡಬೇಕೆಂದು ಕೋರಿದ್ದಾನೆ. ಹೀಗೆ ಪದೇ ಪದೇ ದೂರು ನೀಡಿ, ಹಣ ವಾಪಸ್ ಪಡೆಯುತ್ತಿದ್ದ ಈತ ವಂಚನೆ ಮೂಲಕ ₹50 ಲಕ್ಷಕ್ಕಿಂತಲೂ ಹೆಚ್ಚು ಹಣ ಲಪಟಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಶಿವಂ ಚೋಪ್ರಾ ಉತ್ತರ ದೆಹಲಿಯ ರೋಹಿಣಿಯಲ್ಲಿರುವ ಶಿಕ್ಷಣ ಸಂಸ್ಥೆಯೊಂದರಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಮಾಡಿದ್ದು ಉದ್ಯೋಗ ಗಿಟ್ಟಿಸಲು ಹಲವಾರು ಪ್ರಯತ್ನ ಮಾಡಿದ್ದನು. ಆದರೆ ಯಾವುದೇ ಕೆಲಸ ಸಿಗಲಿಲ್ಲ. ಹಾಗಾಗಿ ಮಾರ್ಚ್ ತಿಂಗಳಲ್ಲಿ ಈತ ಅಮೆಜಾನ್‍ನಲ್ಲಿ ಎರಡು ಫೋನ್ ಆರ್ಡರ್ ಮಾಡಿ ಆಮೇಲೆ ಫೋನ್ ಸಿಕ್ಕಿಲ್ಲ ಎಂದು ಹಣ ಹಿಂತಿರುಗಿಸುವಂತೆ ಕಂಪನಿಗೆ ಹೇಳಿದ್ದ. ಹೀಗೆ ಹಣ ವಾಪಸ್ ಬಂದಿತ್ತು.

ಆನಂತರದ ತಿಂಗಳಲ್ಲಿ ಈತ ಆ್ಯಪಲ್, ಸ್ಯಾಮ್ ಸಂಗ್ ಮತ್ತು ಒನ್ ಪ್ಲಸ್ ಮೊಬೈಲ್‍ಗಳಿಗೆ ಆರ್ಡರ್ ಮಾಡಿ ಇದೇ ರೀತಿ ಮೋಸ ಮಾಡಿದ್ದಾನೆ. ಇಲ್ಲಿ ಖರೀದಿಸಿದ ಮೊಬೈಲ್ ಫೋನ್‍ಗಳನ್ನು ಈತ ಒಎಲ್ಎಕ್ಸ್ ನಲ್ಲಿ ಮಾರುತ್ತಿದ್ದ ಇಲ್ಲವೇ ದೆಹಲಿಯಲ್ಲಿ ವಿದೇಶಿ ವಸ್ತುಗಳನ್ನು ಮಾರುವ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ.

ಶಿವಂ ಮನೆ ಬಳಿಯಲ್ಲಿ ಚಿಕ್ಕ ಟೆಲಿಕಾಂ ಸ್ಟೋರ್ ಇಟ್ಟುಕೊಂಡಿರುವ ಸಚಿನ್ ಜೈನ್ (38) ಈತನಿಗೆ 141 ಪ್ರಿ ಆಕ್ಟಿವೇಟೆಡ್ ಸಿಮ್ ಕಾರ್ಡ್ ಗಳನ್ನು ನೀಡಿದ್ದಾನೆ. ಈ ಸಿಮ್ ಕಾರ್ಡ್ ಗಳನ್ನು ಬಳಸಿ ಶಿವಂ ಹಲವಾರು ಬಾರಿ ಆನ್‍ಲೈನ್‍ನಲ್ಲಿ ಆರ್ಡರ್ ಮಾಡುತ್ತಿದ್ದ. ಸಚಿನ್ ಈ ರೀತಿ ಸಿಮ್ ಕಾರ್ಡ್‍ಗಳನ್ನು ನೀಡಿ, ಪ್ರತಿಯೊಂದು ನಂಬರ್ ಬಳಕೆಗೂ ₹150 ಚಾರ್ಜ್ ಮಾಡುತ್ತಿದ್ದ.

ಶಿವಂ ಈ ನಂಬರ್‍‍ಗಳಿಂದ ಫೋನ್ ಆರ್ಡರ್ ಮಾಡುತ್ತಿದ್ದರೂ ಫೋನ್  ತಲುಪಬೇಕಾದ ವಿಳಾಸ ತಪ್ಪಾಗಿ ನೀಡುತ್ತಿದ್ದ. ಅಮೆಜಾನ್‍ನ ಉತ್ಪನ್ನಗಳನ್ನು ಡೆಲಿವರಿ  ಮಾಡಲು ಬಂದ ವ್ಯಕ್ತಿ ವಿಳಾಸ ಸಿಗದೇ ಪರದಾಡುವಾಗ ಶಿವಂ ಅವರಿಗೆ ಫೋನ್ ಮಾಡಿ ಬೇರೊಂದು ಸ್ಥಳದಿಂದ ಆ ವಸ್ತುವನ್ನು ಪಡೆದುಕೊಳ್ಳುತ್ತಿದ್ದ. ಆಮೇಲೆ ತನಗೆ ಖಾಲಿ ಪೆಟ್ಟಿಗೆ ಮಾತ್ರ ಸಿಕ್ಕಿದೆ ಎಂದು ಅಮೆಜಾನ್‍ಗೆ ದೂರು ನೀಡಿ ತನಗೆ ದುಡ್ಡು ವಾಪಸ್ ಕೊಡುವಂತೆ ಹೇಳುತ್ತಿದ್ದ.

ಹೀಗೆ 166 ಬಾರಿ ಫೋನ್ ಆರ್ಡರ್ ಮಾಡಿ ದುಡ್ಡು ವಾಪಸ್ ಪಡೆದು ಅಮೆಜಾನ್‍ಗೆ ಮೋಸ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಿಲಿಂದ್ ಮಹಾದಿಯೊ ದಂಬೇರ್ ಹೇಳಿದ್ದಾರೆ.

19 ಮೊಬೈಲ್ ಫೋನ್, 12 ಲಕ್ಷ ನಗದು ಮತ್ತು 40 ಬ್ಯಾಂಕ್ ಪಾಸ್‍ಬುಕ್, ಚೆಕ್‍ಗಳನ್ನು ಈತನ ಬಳಿಯಿಂದ ವಶ ಪಡಿಸಿಕೊಳ್ಳಲಾಗಿದೆ. ಒಂದಷ್ಟು ಹಣವನ್ನು ಈತ ಬ್ಯಾಂಕ್ ಖಾತೆಯಲ್ಲಿರಿಸಿದ್ದು, 10 ಲಕ್ಷ ವನ್ನು ಇನ್ನೊಬ್ಬರಿಗೆ ಕೊಟ್ಟು ಸುರಕ್ಷಿತವಾಗಿ ಇರಿಸುವಂತೆ ಹೇಳಿದ್ದ ಎಂದಿದ್ದಾರೆ ಪೊಲೀಸರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry