ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದದ ನೇಯ್ಗೆಗೆ ನೃತ್ಯದ ಸೊಬಗು

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಲ್ಲಿ ನೆರೆದಿದ್ದ ನೂರಾರು ಬೆರಗುಗಣ್ಣುಗಳು ವೇದಿಕೆಯತ್ತ ದೃಷ್ಟಿ ನೆಟ್ಟಿದ್ದವು. ದೂರದಲ್ಲೆಲ್ಲೋ ಕೇಳುತ್ತಿದ್ದ ಹದವಾದ ಶಬ್ದದೊಂದಿಗೆ ಮನಸ್ಸು ತಾಳ ಹಾಕುತ್ತಿತ್ತು. ನಿಧಾನವಾಗಿ ವೇದಿಕೆಯನ್ನಾವರಿಸುತ್ತಿದ್ದ ಬೆಳಕು ಅರಿಶಿನ ಬಣ್ಣದ ದಿರಿಸು ತೊಟ್ಟ ಕಲಾವಿದರ ಮೇಲೆ ಬಿತ್ತು. ದೂರದಲ್ಲಿಯ ಶಬ್ದಕ್ಕೂ ಕಲಾವಿದರ ಹೆಜ್ಜೆಗೂ ಸಾಂಗತ್ಯ ಶುರುವಾಯಿತು.

ಅಲ್ಲಿಂದ ಪ್ರಾರಂಭವಾದದ್ದು ಭಾರತೀಯ ಶ್ರೀಮಂತಿಕೆ ಬಿಂಬಿಸುವ ಸೀರೆಯ ವರ್ಣನೆ. ದಾರ, ಅದನ್ನು ನೇಯುವ ಕಲಾವಿದರು, ಬಗೆಬಗೆಯ ವಿನ್ಯಾಸಕ್ಕೆ ತೆರೆದುಕೊಳ್ಳುವ ಅದರ ಚೆಲುವು, ಸೀರೆಗಳಲ್ಲಿ ನಲಿವ ನವಿಲು, ಗಂಡಭೇರುಂಡ, ಹಂಸಗಳ ಸೊಬಗನ್ನು ನೃತ್ಯದಲ್ಲಿ ವಿವರಿಸಲಾಯಿತು.

ನೃತ್ಯದ ಪ್ರಾರಂಭದಲ್ಲಿ ಕೈಮಗ್ಗಗಳಲ್ಲಿ ಕೇಳಿ ಬರುವ ಸಂಗೀತವನ್ನೇ ಬಳಸಿಕೊಳ್ಳಲಾಗಿದೆ. ಯಾರೋ ಏಕಾಂತದಲ್ಲಿ ಕುಳಿತು ಗೆಜ್ಜೆಯ ಸಪ್ಪಳದೊಂದಿಗೆ ತಾಳ ಜೋಡಿಸುತ್ತಿದ್ದಾರೆ ಎನ್ನಿಸುವಂತಿತ್ತು ಆ ನಾದ. ಈ ಭಾಗದಲ್ಲಿ ನೃತ್ಯ ಕಲಾವಿದರು ಗೆಜ್ಜೆ ಕಟ್ಟದೆ ಕೈಮಗ್ಗದಲ್ಲಿನ ಶಬ್ದ ಸೌಂದರ್ಯಕ್ಕೆ ಪ್ರಾಧಾನ್ಯ ನೀಡಿದ್ದು ವಿಶೇಷವಾಗಿತ್ತು.

ಮುಂದಿನ ಭಾಗದ ನೃತ್ಯಕ್ಕೆ ಸಂಗೀತದ ಚೆಲುವಿತ್ತು. ಸಿ.ವಿ.ಚಂದ್ರಶೇಖರ್‌ ಹಾಗೂ ಆದಿತ್ಯ ಪ್ರಕಾಶ್‌ ಅವರ ಸಂಗೀತ ಸಂಯೋಜನೆಯಲ್ಲಿ ಬಗೆಬಗೆ ವಾದ್ಯಗಳು ಹೊಮ್ಮಿಸುತ್ತಿದ್ದ ನಾದಸುಧೆಗೆ ಮೈಮನಗಳಲ್ಲಿ ರೋಮಾಂಚನ ಉಂಟಾಗುತ್ತಿತ್ತು. ಅದರೊಂದಿಗೆ ಮಾಳವಿಕಾ ಅವರ ಪ್ರಬಲ ನೃತ್ಯ ಸಂಯೋಜನೆ ಕಲಾಸಕ್ತರ ಮನಸ್ಸನ್ನು ಅತ್ತಿತ್ತ ಹರಿಯಗೊಡದೆ ಹಿಡಿದಿಟ್ಟಿತ್ತು. ಕೈಮಗ್ಗ ಕಲಾವಿದನ ಕ್ರಿಯಾಶೀಲತೆಗನುಗುಣವಾಗಿ ಚಲಿಸುವ ದಾರಗಳು, ನಡೆ ಬದಲಾಯಿಸುತ್ತಾ ಅವು ವಿನ್ಯಾಸವಾಗುವ ಪರಿ, ಅವುಗಳಲ್ಲೇ ಶ್ರೀಮಂತಿಕೆ ಗಳಿಸಿಕೊಳ್ಳುವ ಅಂಚು, ಪಲ್ಲು... ಇವುಗಳನ್ನೂ ನೃತ್ಯಕಲಾವಿದರು ಪ್ರಸ್ತುತಪಡಿಸಿದ ರೀತಿ ಹೊಸ ಪ್ರಪಂಚಕ್ಕೆ ಅಡಿ ಇಟ್ಟ ಅನುಭವವನ್ನು ನೀಡುತ್ತಿತ್ತು.

ಇಬ್ಬರು ನೃತ್ಯ ಕಲಾವಿದರು ವೇದಿಕೆಯ ಅಂಚಿನಲ್ಲಿ ವೃತ್ತಾಕಾರವಾಗಿ ತಿರುಗುತ್ತ ಅಂಚಿನ ವರ್ಣನೆಗೆ ಸಾಕ್ಷಿಯಾದರು. ಅದೇ ಆವರಣದಲ್ಲಿ ಇನ್ನುಳಿದ ಕಲಾವದರು ನೃತ್ಯ ಪ್ರದರ್ಶಿಸುತ್ತಾ ಸೀರೆಯ ಅಂದದ ನೋಟದ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದರು. ಒಂದೊಂದು ಸನ್ನಿವೇಶ ವಿವರಿಸಿ ಬೆಳಕು ವೇದಿಕೆಯಿಂದ ಸರಿದಾಗಲೂ ಸಭಾಂಗಣದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದು ಮೊಳಗುತ್ತಿತ್ತು.

ನೃತ್ಯ ಜೊತೆಗೆ ಹಿನ್ನೆಲೆಯಲ್ಲಿ ಆಗಾಗ ಸೀರೆಯ ಚೆಲುವು, ಅದು ರೂಪುಗೊಳ್ಳುವ ವೈಖರಿಗಳನ್ನು ವಿವರಿಸುತ್ತಿದ್ದು ನೃತ್ಯದ ಪ್ರತಿ ಹಂತವನ್ನು ಅರ್ಥೈಸಿಕೊಳ್ಳಲು ಸುಲಭವಾಗುತ್ತಿತ್ತು. ಆರೂ ಕಲಾವಿದರು ಸಾಟಿಯಿಲ್ಲದಂತೆ ನರ್ತಿಸಿದರು. ನೃತ್ಯದಲ್ಲಿನ ಸಹಕಾರ, ಹೆಜ್ಜೆಗಳ ಸ್ಪಷ್ಟತೆ ಅವರ ನಿರಂತರ, ಪರಿಶ್ರಮದ ಅಭ್ಯಾಸವನ್ನು ಸಾಕ್ಷೀಕರಿಸಿತು. ಅಂದಹಾಗೆ ‘ತರಿ ದ ಲೂಮ್‌’ ನೃತ್ಯಕ್ಕೆ ಮಾಳವಿಕಾ ಆಯ್ದುಕೊಂಡ ಯುವ ಕಲಾವಿದರು, ಜ್ಯೋತ್ಸ್ನಾ ಜಗನ್ನಾಥನ್‌, ಅರುಣಾ ಬಲಗುರುನಾಥನ್‌, ಶ್ರುತಿಪ್ರಿಯ ಮಾರ್ಗಬಂಧು ರವಿಚಂದ್ರನ್‌, ನವ್ಯಶ್ರೀ ಕೆ.ಎನ್‌, ಶ್ರೀಮಾ ಉಪಾಧ್ಯಾಯ.

ವಿಭಿನ್ನ, ವೈಭವಪೂರ್ಣ, ಸುಂದರ ನೃತ್ಯಕ್ಕೆ ನಿರಂತರವಾಗಿ ಸಾಥ್‌ ನೀಡಿದ್ದು ಸಂಗೀತ. ಜೊತೆಗೆ ನಿಖರ ಬೆಳಕಿನ ವಿನ್ಯಾಸ. ಕಲಾವಿದರ ನೃತ್ಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದುಡದು, ನೃತ್ಯದ ಚೆಲುವಿಗೆ ಪ್ರಾಧಾನ್ಯ ನೀಡುತ್ತಿದ್ದುದು ಅತ್ಯುತ್ತಮ ಬೆಳಕಿನ ವಿನ್ಯಾಸ. ಅದರಲ್ಲೂ ಸೀರೆಯಲ್ಲಿ ನಲಿವ ಹಂಸದ ನೃತ್ಯ ರೂಪಕಕ್ಕೆ ಬೆಳಕು ನೀಡಿದ ಸಾಥ್‌ ಅವರ್ಣನೀಯ. ಹಂಸದ ವಿವರ ಮುಗಿಯುತ್ತ ಬಂದಂತೆ ನಿಧಾನವಾಗಿ ಆಕ್ರಮಿಸುವ ಹನಿ ಹನಿ ಬೆಳಕು ಕ್ರಮೇಣ ವೇದಿಕೆಯನ್ನೇ ಕೊಳವನ್ನಾಗಿಸುತ್ತದೆ. ಕಲಾವಿದರೊಂದಿಗೆ, ನೆರೆದಿದ್ದ ಪ್ರೇಕ್ಷಕ ವರ್ಗವೂ ಕೊಳದಲ್ಲಿ ಈಜುತ್ತಾ ಹಂಸವೇ ಆದ ಭಾವದೊಂದಿಗೆ ಪುಳಕಗೊಂಡರು. ಕ್ಷಣಕಾಲ ಇಡೀ ಪ್ರಾಂಗಣದಲ್ಲಿ ನೀರವ ಮೌನ.

ಹೀಗೆ ನೃತ್ಯದ ಇಂಚಿಂಚನ್ನೂ ಸವಿಯುತ್ತಿದ್ದ ಕಲಾಸಕ್ತರಿಗೆ 70 ನಿಮಿಷ ಕಳೆದಿದ್ದು ತಿಳಿಯುವುದೇ ಇಲ್ಲ. ವಿಭಿನ್ನ ಪರಿಕಲ್ಪನೆಯ ನೃತ್ಯ ರೂಪಕ ಇನ್ನಷ್ಟು ಮತ್ತಷ್ಟು ನೋಡಬೇಕು ಎನಿಸುತ್ತಿರುವಾಗಲೇ ಮುಗಿದುಹೋಗುತ್ತದೆ. ನೃತ್ಯದಲ್ಲಿ ಪರಿಕರಗಳನ್ನು ವಿಶೇಷವಾಗಿ ಬಳಸುವುದಿಲ್ಲ.  ಕೈಮಗ್ಗದಲ್ಲಿ ದಾರಗಳನ್ನು ನೇಯಲು ಬಳಸುವ ಚಕ್ರದಂಥ ಉಪಕರಣವನ್ನು ಮಾತ್ರ ಕಲಾವಿದರು ಒಂದೆರಡು ಬಾರಿ ವೇದಿಕೆಗೆ ತರುತ್ತಾರೆ. ಅದನ್ನು ಬಿಟ್ಟರೆ ನೃತ್ಯ ಸಂಯೋಜನೆ, ಸಂಗೀತ ಬೆಳಕಿನ ವಿನ್ಯಾಸ ನೃತ್ಯಕ್ಕೆ ವಿಶೇಷ ಸೊಬಗು ತಂದು ಆಕರ್ಷಣೀಯವೆನಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT