ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿನೋಟಿಫಿಕೇಷನ್ ಮಾಡಿದ್ದರೆ ದಾಖಲೆ ಕೊಡಿ: ಸಿದ್ದರಾಮಯ್ಯ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಮಹಲ್ ವಿಲಾಸ್ ಬಡಾವಣೆ ಸೇರಿದಂತೆ ಯಾವುದೇ ಯೋಜನೆಯಲ್ಲಿ ನಾನು ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ಬಿಜೆಪಿ ಬಿಡುಗಡೆ ಮಾಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

‘ಭೂಪಸಂದ್ರ ಗ್ರಾಮದಲ್ಲಿ 6 ಎಕರೆ 26 ಗುಂಟೆ ಡಿನೋಟಿಫಿಕೇಷನ್ ಮಾಡಿದ್ದೇನೆ ಎಂದು ಬಿ.ಜೆ. ಪುಟ್ಟಸ್ವಾಮಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ಯಾವ ವ್ಯಕ್ತಿಯೂ ಇಂತಹ ಸುಳ್ಳು ಆರೋಪಗಳನ್ನು ಮಾಡುವುದಿಲ್ಲ’ ಎಂದು ಅವರು ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಸೋಲಿನ ಭಯದಿಂದ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ. ನಮ್ಮ ಸರ್ಕಾರದ ವರ್ಚಸ್ಸು ಸಹಿಸಲು ಸಾಧ್ಯವಾಗದೆ ರಾಜಕೀಯ ಉದ್ದೇಶಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಅಧಿಕಾರಕಾರಕ್ಕೆ ಬಂದ ನಂತರ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಮತ್ತು ಅಂತಿಮ ಅಧಿಸೂಚನೆ ಆದ ಬಳಿಕ ಒಂದೇ ಒಂದು ಎಕರೆಯನ್ನೂ ಡಿನೋಟಿಫೈ ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡುವುದಕ್ಕಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿರುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಆರ್‌ಎಂವಿ ಬಡಾವಣೆಗೆ ಸಂಬಂಧಿಸಿದಂತೆ ಜಮೀನು ಹಕ್ಕು ಹಸ್ತಾಂತರಿಸುವ ಪ್ರಸ್ತಾವವೇ ಈ ಸಮಿತಿ ಮುಂದೆ ಬಂದಿಲ್ಲ. ಹೀಗಿರುವಾಗ ಡಿನೋಟಿಫೈ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಭೂಪಸಂದ್ರ ಗ್ರಾಮದಲ್ಲಿ 1987ರಲ್ಲಿ ಜಮೀನು ಸ್ವಾಧೀನ ಮಾಡಿ, ಬಡಾವಣೆ ನಿರ್ಮಿಸಿ 32 ನಿವೇಶನದಾರರಿಗೆ ಹಂಚಿಕೆ ಮಾಡಲಾಗಿತ್ತು. ಬಳಿಕ 1992ರಲ್ಲಿ ಅಂದಿನ ಸರ್ಕಾರ ಈ ಜಾಗವನ್ನು ಡಿನೋಟಿಫಿಕೇಷನ್ ಮಾಡಿತ್ತು. ಇದನ್ನು ಪ್ರಶ್ನಿಸಿ ನಿವೇಶನದಾರರು ಹೈಕೋರ್ಟ್‌ ಮೊರೆ ಹೋದಾಗ ನ್ಯಾಯಾಲಯ ಅರ್ಜಿದಾರರ ಪರವಾಗಿ ತೀರ್ಮಾನ ಪ್ರಕಟಿಸಿ ಡಿನೋಟಿಫಿಕೇಷನ್ ರದ್ದುಪಡಿಸಿತು. ಜಮೀನಿನ ಮಾಲೀಕರಾದ ಸೈಯದ್ ಬಾಶಿದ್ ಸುಪ್ರೀಂ ಕೋರ್ಟ್‌ವರೆಗೆ ಹೋದರೂ ಡಿನೋಟಿಫಿಕೇಷನ್ ಮಾಡಿದ್ದು ತಪ್ಪು ಎಂಬ ತೀರ್ಮಾನವೇ ಬಂತು. ಮತ್ತೊಬ್ಬ ಜಮೀನು ಮಾಲೀಕರಾದ ಕೆ.ವಿ. ಜಯಲಕ್ಷ್ಮಮ್ಮ ಎಂಬುವರು ಅಂತಿಮ ಅಧಿಸೂಚನೆಯನ್ನೇ ಪ್ರಶ್ನಿಸಿ 2016ರ ಫೆಬ್ರುವರಿಯಲ್ಲಿ ಹೈಕೋರ್ಟ್‌ ಮೊರೆ ಹೋದಾಗ, ಯೋಜನೆಯ ಲೋಪಗಳನ್ನು ತಿಳಿಸಿ ಅರ್ಜಿದಾರರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ’ ಎಂದು ಸಿದ್ದರಾಮಯ್ಯ ವಿವರಿಸಿದರು.

ಬಡಾವಣೆ ವಿಸ್ತರಣೆಗಾಗಿ 1978ರಲ್ಲಿ 131 ಎಕರೆ 33 ಗುಂಟೆ ಗುರುತಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 108 ಎಕರೆ 17 ಗುಂಟೆಗೆ 1982ರಲ್ಲಿ ಅಂತಿಮ ಅಧಿಸೂಚನೆ ಮಾಡಲಾಯಿತು. ಇದರಲ್ಲಿ ಬಿಡಿಎ ವಶಪಡಿಸಿಕೊಂಡಿದ್ದು 69 ಎಕರೆ 22 ಗುಂಟೆ ಮಾತ್ರ. ಆದರೆ, ಬಡಾವಣೆ ನಿರ್ಮಾಣವಾಗಿದ್ದು 13 ಎಕರೆ 34 ಗುಂಟೆ ಪ್ರದೇಶದಲ್ಲಿ. ಹೀಗಾಗಿ ಯೋಜನೆಯೇ ಕ್ರಮಬದ್ಧವಾಗಿಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಈ ಸಂಬಂಧ ಬಿಡಿಎ ಮೇಲ್ಮನವಿ ಹೋಗುವುದು ಸೂಕ್ತವಲ್ಲ ಎಂದು ಕಾನೂನು ಇಲಾಖೆಯೂ ಸಲಹೆ ನೀಡಿದ್ದರಿಂದ ವಿಷಯನ್ನು ಅಲ್ಲಿಗೇ ಕೈಬಿಡಲಾಗಿತ್ತು ಎಂದರು.

ಶಾಸಕ ವಸಂತ ಬಂಗೇರಾ ಈ ಬಡಾವಣೆಯಲ್ಲಿನ 4 ಕಂದಾಯ ನಿವೇಶನಗಳಿಗೆ ಸಂಬಂಧಿಸಿದಂತೆ ನನಗೆ ಮನವಿಯೊಂದನ್ನು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಎಂದು ಟಿಪ್ಪಣಿ ಬರೆದಿದ್ದೆ. ಹಾಗೆಂದ ಮಾತ್ರಕ್ಕೆ ಅದು ಡಿನೋಟಿಫೈ ಮಾಡಿ ಎಂದು ಸೂಚನೆ ನೀಡಿದಂತೆ ಎಂದು ಭಾವಿಸಿದರೆ ಹೇಗೆ ಎಂದರು.

ಕೀರ್ತಿರಾಜ್ ಶೆಟ್ಟಿ ಯಾರು?
‘ಕೀರ್ತಿರಾಜ್ ಶೆಟ್ಟಿ ಹೆಸರಿಗೆ ಜಿಪಿಎ ಮಾಡಿದ್ದೇನೆ ಎಂದೂ ಪುಟ್ಟಸ್ವಾಮಿ ಆರೋಪ ಮಾಡಿದ್ದಾರೆ. ಆದರೆ, ಈ ಕೀರ್ತಿರಾಜ್ ಎಂಬ ವ್ಯಕ್ತಿ ಯಾರೆಂದೇ ನನಗೆ ಗೊತ್ತಿಲ್ಲ. ಯಾರದ್ದೋ ಹೆಸರನ್ನು ನನ್ನ ಜೊತೆ ಸೇರಿಸಿದರೆ ಅದಕ್ಕೆ ನಾನೇನು ಮಾಡಲಿ’ ಎಂದು ಪ್ರಶ್ನಿಸಿದರು.

ಡಿನೋಟಿಫಿಕೇಷನ್ ಅಲ್ಲ, ಹೈಕೋರ್ಟ್ ಆದೇಶ: ಭೂ ಮಾಲೀಕರ ಸ್ಪಷ್ಟನೆ
ಬೆಂಗಳೂರು: ‘ಬೆಂಗಳೂರು ಉತ್ತರ ತಾಲ್ಲೂಕು ಭೂಪಸಂದ್ರದಲ್ಲಿ 6 ಎಕರೆ 26 ಗುಂಟೆ ಜಮೀನನ್ನು ಈಗಿನ ಸರ್ಕಾರ ಡಿನೋಟಿಫೈ ಮಾಡಿಲ್ಲ, ಹೈಕೋರ್ಟ್ ಆದೇಶದಂತೆ ನಮಗೆ ಬಿಟ್ಟುಕೊಟ್ಟಿದೆ ಅಷ್ಟೆ’ ಎಂದು ಭೂಮಾಲೀಕರಾದ ಕೆ.ವಿ. ಜಯಲಕ್ಷ್ಮಮ್ಮ ಪುತ್ರ ಕೆ.ವಿ. ಕೃಷ್ಣಪ್ರಸಾದ್ ಸ್ಪಷ್ಟಪಡಿಸಿದರು.

‘ರಾಜಮಹಲ್ ವಿಲಾಸ್ ಬಡಾವಣೆ 2ನೇ ಹಂತಕ್ಕೆ ಭೂಸ್ವಾಧೀನಗೊಂಡಿದ್ದ 108 ಎಕರೆ ಜಮೀನಿನಲ್ಲಿ 13 ಎಕರೆ ಮಾತ್ರ ಬಳಕೆಯಾಗಿತ್ತು. ಉದ್ದೇಶಿತ ಯೋಜನೆಗೆ ಜಮೀನು ಸಂಪೂರ್ಣ ಬಳಕೆಯಾಗದ ಕಾರಣ ವಾಪಸ್ ಕೊಡಿಸುವಂತೆ 2015ರಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. 2016ರ ಫೆಬ್ರುವರಿ 5ರಂದು ಭೂಸ್ವಾಧೀನ ಪ್ರಕ್ರಿಯೆ ಆದೇಶ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

‘ನಾವು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳಲ್ಲ. ವಿಧಾನ ಪರಿಷತ್ ಬಿಜೆಪಿ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ನಮ್ಮ ಜಮೀನಿನ ವಿಷಯ ಮುಂದಿಟ್ಟು ರಾಜಕೀಯ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ನಮ್ಮ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಬರುವಂತೆ ಹೇಳಿಕೆ ನೀಡಿರುವುದು ನೋವು ತಂದಿದೆ. ಅವರು ಕೂಡಲೇ ಮಾಧ್ಯಮಗೋಷ್ಠಿ ಕರೆದು ಸತ್ಯ ಸಂಗತಿ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು’ ಎಂದು ಎಚ್ಚರಿಸಿದರು.

ವಕೀಲ ಬಿ.ಕೆ. ಶಿವಪ್ರಸಾದ್ ಮಾತನಾಡಿ, ಸ್ವಾಧೀನಪಡಿಸಿಕೊಂಡ ಜಮೀನು ಉದ್ದೇಶಿತ ಯೋಜನೆಗೆ ಬಳಕೆಯಾಗದಿದ್ದರೆ ಮಾಲೀಕರಿಗೆ ವಾಪಸ್ ಬಿಟ್ಟುಕೊಡಬೇಕು ಎಂಬ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಯ್ದೆ ಪ್ರಕಾರ ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗಿತ್ತು. 2011 ಮತ್ತು 2012ರಲ್ಲಿ ಇದೇ ರೀತಿಯ 5 ‍ಪ್ರಕರಣಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ರದ್ದಪಡಿಸಿದ್ದ ಹೈಕೋರ್ಟ್ ಆದೇಶಗಳನ್ನು ಆಧರಿಸಿಯೇ ದಾವೆ ಹೂಡಲಾಗಿತ್ತು’ ಎಂದು ಹೇಳಿದರು.

‘ಕೀರ್ತಿರಾಜಶೆಟ್ಟಿ ಎಂಬುವರಿಗೆ ಭೂಮಾಲೀಕರು ಜಿಪಿಎ ಮಾಡಿಕೊಟ್ಟಿದ್ದಾರೆ. ಅವರಾಗಲೀ, ಮಾಲೀಕರಾದ ಜಯಲಕ್ಷ್ಮಮ್ಮ ಅವರಾಗಲೀ ಡಿನೋಟಿಫೈ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿಲ್ಲ. ಸರ್ಕಾರ ಡಿನೋಟಿಫೈ ಮಾಡಿಯೂ ಇಲ್ಲ. 1992ರಲ್ಲಿ ಸರ್ಕಾರ ಜಮೀನು ಡಿನೋಟಿಫೈ ಮಾಡಿದ್ದಾಗಲೂ ಜಯಲಕ್ಷ್ಮಮ್ಮ ಅರ್ಜಿ ಹಾಕಿರಲಿಲ್ಲ. ಆ ಪ್ರಕರಣಕ್ಕೂ ನಮ್ಮ ಕಕ್ಷೀದಾರರಿಗೂ ಸಂಬಂಧ ಇಲ್ಲ’ ಎಂದೂ ಅವರು ಸ್ಪಷ್ಪಪಡಿಸಿದರು.

ಮುಖ್ಯಮಂತ್ರಿ ಪರಿಚಯವೇ ಇಲ್ಲ
‘ನಾನು ಮುಖ್ಯಮಂತ್ರಿ ಅವರ ಆಪ್ತನೂ ಅಲ್ಲ, ಅವರ ಪರಿಚಯವೂ ನನಗಿಲ್ಲ’ ಎಂದು ಕೀರ್ತಿರಾಜಶೆಟ್ಟಿ ಸ್ಪಷ್ಪಡಿಸಿದರು.

‘ಜಮೀನು ಡಿನೋಟಿಫೈ ಕೋರಿ ಅವರ ಮುಂದೆ ಯಾವುದೇ ಅರ್ಜಿ ಸಲ್ಲಿಸಿಲ್ಲ. ಅವರ ಮನೆ ಅಥವಾ ಕಚೇರಿಗೆ ಒಮ್ಮೆಯೂ ಹೋಗಿಲ್ಲ. ಶಾಸಕ ವಸಂತ ಬಂಗೇರ ಅವರ ಪರಿಚಯವೂ ಇಲ್ಲ. ಬಿ.ಜೆ. ಪುಟ್ಟಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT