ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿ.ವಿ: ₹ 30 ಕೋಟಿ ನಷ್ಟ ವಸೂಲಾತಿಯಲ್ಲಿ ವಿಳಂಬ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮ ಉಲ್ಲಂಘನೆ, ಆಡಳಿತ ವೈಫಲ್ಯದಿಂದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಕಳೆದ 20 ವರ್ಷಗಳಲ್ಲಿ ಅಂದಾಜು ₹ 30 ಕೋಟಿಯಷ್ಟು ನಷ್ಟ ಅನುಭವಿಸಿದೆ. ನಷ್ಟಕ್ಕೆ ಕಾರಣರಾದವರಿಂದ ಹಣ ವಸೂಲು ಮಾಡುವಲ್ಲಿ ಮಾತ್ರ ನಿರ್ಲಕ್ಷ್ಯ ತೋರಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ­ಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ಉಲ್ಲಂಘನೆ, ಆಡಳಿತ, ಪರೀಕ್ಷಾ ಪ್ರಕ್ರಿಯೆ ಮತ್ತು ಹಣಕಾಸಿನ ನಿರ್ವಹಣೆಯಲ್ಲಿನ ಲೋಪಗಳಿಂದಾಗಿ ಈ ನಷ್ಟ ಉಂಟಾಗಿದೆ.

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ 1995ರಿಂದ 2015ರವರೆಗೆ ಆಗಿರುವ ನಷ್ಟದ ಪ್ರಮಾಣವನ್ನು ತಿಳಿಸಿ, ಈ ಮೊತ್ತ ವಸೂಲಿ ಮಾಡಿ ಮರಳಿ ವಿಶ್ವವಿದ್ಯಾಲಯದ ಖಾತೆಗೆ ಜಮೆ ಮಾಡುವಂತೆ ಸೂಚನೆ ನೀಡಿತ್ತು.

ಇಲಾಖೆಯ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಧಾನಸಭೆ ಕಾಗದ ಪತ್ರಗಳ ಸಮಿತಿ, ವಿಶ್ವವಿದ್ಯಾಲಯದ ವಿರುದ್ಧ ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ)ದೂರು ನೀಡುವ ಸಂಬಂಧವೂ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಕೆಎಸ್‌ಒಯುಗೆ  ಕಾಗದ ಪತ್ರ ಸಮಿತಿಯ ಅಧ್ಯಕ್ಷ ಸಾ.ರಾ. ಮಹೇಶ್‌ ಅವರು ಎರಡು ವರ್ಷಗಳಲ್ಲಿ ನಾಲ್ಕು ನೋಟಿಸ್‌ಗಳನ್ನು ಜಾರಿ ಮಾಡಿದ್ದಾರೆ. ಮೂರು ತಿಂಗಳು ಹೆಚ್ಚುವರಿ ಸಮಯ ನೀಡುವಂತೆ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಸಮಯವನ್ನೂ ಕೇಳಲಾಗಿದೆ. ಆದರೆ, ನವೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶನ ವೇಳೆಗೆ ವರದಿ ಮಂಡಿಸಬೇಕಿರುವುರಿಂದ ಅವಧಿ ವಿಸ್ತರಣೆ ಸಾಧ್ಯವಿಲ್ಲ  ಎಂದು ಸಮಿತಿ ಸ್ಪಷ್ಟಪಡಿಸಿದೆ.

₹ 4.5 ಕೋಟಿ ವಸೂಲಿ: ‘ಕಾಗದ ಪತ್ರ ಸಮಿತಿಯ ನಿರ್ದೇಶನಗಳನ್ನು ವಿಶ್ವವಿದ್ಯಾಲಯ ಪಾಲಿಸುತ್ತಿದೆ. ಕಳೆದ ವರ್ಷ ₹ 4.5 ಕೋಟಿ  ವಸೂಲಿ ಮಾಡಲಾಗಿದೆ. ಬಾಕಿ ಮೊತ್ತವನ್ನು ಶೀಘ್ರದಲ್ಲಿಯೇ ವಸೂಲಿ ಮಾಡಲಾಗುವುದು’ ಎಂದು ಕೆಎಸ್‌ಒಯು ರಿಜಿಸ್ಟ್ರಾರ್ ಕೆ.ಎನ್. ಚಂದ್ರಶೇಖರ ಹೇಳಿದರು.

ಸಮಿತಿಯು ಎತ್ತಿರುವ ಕೆಲ ಆಕ್ಷೇಪಣೆಗಳು ಸಕಾರಣ ಅಲ್ಲ. ಹೀಗಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದೂ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT