ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದನ್‌ಗೆ ₹ 667 ಕೋಟಿ ಲಾಭ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಷೇರು ಮರು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಮತ್ತು ಸಹ ಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ ಮತ್ತು ಅವರ ಕುಟುಂಬವು ₹ 667 ಕೋಟಿಗಳ ಲಾಭ ಪಡೆಯಲಿದೆ.

ನಂದನ್‌ ಅವರೊಬ್ಬರೇ ತಮ್ಮ 21 ಲಕ್ಷ ಷೇರುಗಳಿಗೆ ಪ್ರತಿಯಾಗಿ ₹ 241 ಕೋಟಿಗಳನ್ನು ಮನೆಗೆ ಕೊಂಡೊಯ್ಯಲಿದ್ದಾರೆ. ಅವರ ಕುಟುಂಬವು ತನ್ನ ಪಾಲಿನ 58 ಲಕ್ಷ ಷೇರುಗಳನ್ನು ಸಂಸ್ಥೆಗೆ ಸಲ್ಲಿಸಲು ಮುಂದಾಗಿದೆ. ಸಂಸ್ಥೆಯಲ್ಲಿ ಈ ಕುಟುಂಬದ ಷೇರುಗಳ ಒಟ್ಟಾರೆ ಮೊತ್ತವು ಸದ್ಯಕ್ಕೆ ₹ 4,932 ಕೋಟಿಗಳಷ್ಟಿದೆ.

ಸಹ ಸ್ಥಾಪಕ ಎನ್‌. ಆರ್‌. ನಾರಾಯಣ ಮೂರ್ತಿ ಅವರ ಕುಟುಂಬವು 54.18 ಲಕ್ಷ ಷೇರುಗಳನ್ನು ಸಂಸ್ಥೆಗೆ ಸಲ್ಲಿಸಲು ನಿರ್ಧರಿಸಿದೆ. ಇದರಿಂದ ಮೂರ್ತಿ ಕುಟುಂಬದ ಸಂಪತ್ತು ₹ 623 ಕೋಟಿಗಳಷ್ಟು ಹೆಚ್ಚಲಿದೆ. ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಈ ಕುಟುಂಬದ ಷೇರುಗಳ ಮೌಲ್ಯವು ₹ 7,391 ಕೋಟಿಗಳಷ್ಟಿದೆ. ಮೂರ್ತಿ ಅವರು ತಮ್ಮ ಪಾಲಿನ ಶೇ 7.19 ಲಕ್ಷ ಷೇರುಗಳನ್ನು ಒಪ್ಪಿಸಿ ₹ 82.65 ಕೋಟಿಗಳನ್ನು ಪಡೆದುಕೊಳ್ಳಲಿದ್ದಾರೆ.

ಮೂರ್ತಿ ಅವರ ಮಗಳು ಅಕ್ಷತಾ 20 ಲಕ್ಷ ಷೇರುಗಳನ್ನು ಸಂಸ್ಥೆಗೆ ಮರಳಿಸಲಿದ್ದಾರೆ. ಇದು ಪ್ರವರ್ತಕರ ಕುಟುಂಬಗಳ ಪೈಕಿ, ನಂದನ್‌ ನಿಲೇಕಣಿ ನಂತರದ ಎರಡನೆ ಅತಿ ಹೆಚ್ಚಿನ ಷೇರುಗಳಾಗಿವೆ. 2011 ರಿಂದ 2014ರವರೆಗೆ ಸಂಸ್ಥೆಯ ಸಿಇಒ ಆಗಿದ್ದ ಎಸ್‌. ಡಿ. ಶಿಬುಲಾಲ್‌ ಅವರು ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿಲ್ಲ.

ಪ್ರವರ್ತಕರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಷೇರುಗಳನ್ನು ತಮ್ಮ ಬಳಿ ಹೊಂದಿರುವುದರಿಂದ ಬಂಡವಾಳ ಗಳಿಕೆ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಆದರೆ, ಷೇರು ಮರು ಖರೀದಿ ಪ್ರಕ್ರಿಯೆಯಲ್ಲಿ ಅವರು ಹಣ ಪಡೆಯುವಾಗ ಶೇ 0.2ರಷ್ಟು ಷೇರು ವಹಿವಾಟು ತೆರಿಗೆ (ಎಸ್‌ಟಿಟಿ)  ಮೂಲದಲ್ಲಿಯೇ ಕಡಿತವಾಗಲಿದೆ.

ಸದ್ಯಕ್ಕೆ ಸಂಸ್ಥೆಯಲ್ಲಿ ಪ್ರವರ್ತಕರ ಒಟ್ಟಾರೆ ಪಾಲು ಬಂಡವಾಳವು ಶೇ 12.75ರಷ್ಟಿದೆ.  ಇದರ ಒಟ್ಟಾರೆ ಮೊತ್ತವು ₹ 27,394.94 ಕೋಟಿಗಳಷ್ಟಿದೆ.

ಪ್ರವರ್ತಕರು ಷೇರು ಮರು ಖರೀದಿಯಲ್ಲಿ ಭಾಗಿಯಾಗಲಿರುವುದರಿಂದ ಅವರ ಪಾಲು ಬಂಡವಾಳದ ಪ್ರಮಾಣವು ಶೇ 8.23ಕ್ಕೆ ಇಳಿಯಲಿದೆ. ₹ 13 ಸಾವಿರ ಕೋಟಿಗಳಷ್ಟು ಮೊತ್ತದ ಷೇರು ಮರು ಖರೀದಿಗೆ ಸಂಸ್ಥೆ  ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT