ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆ

ಗುರುವಾರ , ಜೂನ್ 27, 2019
26 °C

ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆ

Published:
Updated:
ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆ

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜ. 1ರಿಂದ ಇಂದಿರಾ ಕ್ಯಾಂಟೀನ್‍ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಲ್ಲಿನ ಆಸ್ಪತ್ರೆಗಳ ಆವರಣ, ರೈಲು ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳ ಬಳಿ ಕ್ಯಾಂಟೀನ್‌ ತೆರೆಯಲಾಗುವುದು’ ಎಂದು ತಿಳಿಸಿದರು.

‘171 ಸ್ಥಳಗಳಲ್ಲಿನ 246 ಕೇಂದ್ರಗಳಲ್ಲಿ ಕ್ಯಾಂಟೀನ್‍ಗಳು ಆರಂಭವಾಗಲಿದೆ. ನವೆಂಬರ್ ತಿಂಗಳ ಅಂತ್ಯದೊಳಗೆ ಸೂಕ್ತ ಸ್ಥಳ ಗುರುತಿಸಬೇಕು, ಡಿಸೆಂಬರ್ ಒಳಗೆ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ. ಈ ಯೋಜನೆಗೆ ಪ್ರತಿ ದಿನ ತಲಾ ₹ 29 ಲಕ್ಷದಂತೆ, ಪ್ರತಿ ತಿಂಗಳು ಸುಮಾರು ₹ 8.98 ಕೋಟಿ ಸಹಾಯ ಧನ ಬಿಡುಗಡೆ ಮಾಡಲು ಸಂಪುಟ ಅನುಮೋದನೆ ನೀಡಿದೆ’ ಎಂದು ಅವರು ವಿವರಿಸಿದರು.

ಡಿಎನ್‌ಬಿ ಕೋರ್ಸ್: ಕರ್ತವ್ಯ ನಿರತ ಸರ್ಕಾರಿ ವೈದ್ಯರಿಗೆ ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಕೋಲಾರ, ಕಲಬುರ್ಗಿ, ತುಮಕೂರು, ವಿಜಯಪುರ ಹಾಗೂ ಬೆಂಗಳೂರಿನ ಕೆ.ಸಿ. ಜನರಲ್ ಮತ್ತು ಜಯನಗರ ಸಾರ್ವಜನಿಕ ಆಸ್ಪತೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಇನ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ಕೋರ್ಸ್‌ ಆರಂಭಿಸಲು ಒಪ್ಪಿಗೆ ನೀಡಲಾಗಿದೆ.

‘ತಜ್ಞ ವೈದ್ಯರ ಕೊರತೆ ನೀಗಿಸಲು ಮೂರು ವರ್ಷ ಅವಧಿಯ ಈ ಕೋರ್ಸ್‌ ಆರಂಭಿಸಲಾಗುತ್ತಿದೆ’ ಎಂದು ಜಯಚಂದ್ರ ಹೇಳಿದರು.

ಮುಖ್ಯಮಂತ್ರಿ ಅನಿಲ ಭಾಗ್ಯ: ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗೆ ಮೊದಲ ಹಂತದಲ್ಲಿ ₹ 1,137 ಕೋಟಿ ಬಿಡುಗಡೆ ಮಾಡಲಾಗುವುದು.  2018ರ ಮಾರ್ಚ್ ಅಂತ್ಯದೊಳಗೆ 10 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಯಚಂದ್ರ ತಿಳಿಸಿದರು.

‘ಸೀಮೆ ಎಣ್ಣೆ ತ್ಯಜಿಸುವ ಕುಟುಂಬಗಳಿಗೆ ಉಚಿತ ಎಲ್‌ಇಡಿ ಬಲ್ಬ್‌ ವಿಸ್ತರಿಸುವ ಯೋಜನೆಗೂ ಒಪ್ಪಿಗೆ ನೀಡಲಾಗಿದೆ’ ಎಂದರು.

ಮೂಡಲಗಿ ತಾಲ್ಲೂಕು ರಚನೆ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮೂಡಲಗಿಯನ್ನು ಕೇಂದ್ರವಾಗಿರಿಸಿ ಹೊಸ ತಾಲ್ಲೂಕು ರಚಿಸಲು ಸಂಪುಟ ಸಂಪುಟ ಸಭೆ ನಿರ್ಧರಿಸಿದೆ.

ಪ್ರಮುಖ ನಿರ್ಣಯಗಳು:

* ಕಲಬುರ್ಗಿಯಲ್ಲಿ ₹ 153 ಕೋಟಿ ವೆಚ್ಚದಲ್ಲಿ ಪೊಲೀಸ್‌ ಕಮಿಷನರೇಟ್‌ ಸ್ಥಾ‍ಪನೆಗೆ ಒಪ್ಪಿಗೆ

* ಆರೋಗ್ಯ ಕವಚ ಯೋಜನೆಯ ಹಳೆಯ 95 ಆಧುನಿಕ ಜೀವ ರಕ್ಷಕ ವ್ಯವಸ್ಥೆ (ಅಡ್ವಾನ್ಸ್ ಲೈಫ್ ಸಪೋರ್ಟರ್ಸ್) ಮತ್ತು 276 ಮೂಲ ಜೀವರಕ್ಷಕ ವ್ಯವಸ್ಥೆ (ಬೇಸಿಕ್ ಲೈಫ್ ಸಪೋರ್ಟರ್ಸ್) ಆಂಬ್ಯುಲೆನ್ಸ್‌ಗಳನ್ನು ಬದಲಿಸಿ  ₹ 61.78 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಂಬ್ಯುಲೆನ್ಸ್‌ಗಳ ಖರೀದಿಸಲು ಅನುಮೋದನೆ

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿರುವ 40,765 ವಿದ್ಯಾರ್ಥಿಗಳಿಗೆ ₹ 11.13 ಕೋಟಿ ವೆಚ್ಚದಲ್ಲಿ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ಸ್ (ಎಂಎಸ್‌ಐಎಲ್‌) ಮೂಲಕ ಲೇಖನ ಸಾಮಗ್ರಿ ಖರೀದಿಸಲು ಒಪ್ಪಿಗೆ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತಲಾ ₹ 1,545 ವೆಚ್ಚದಲ್ಲಿ ಶೂ ಮತ್ತು ಸಾಕ್ಸ್‌ ವಿತರಿಸಲು ಮತ್ತು ಎಂಎಸ್‌ಐಎಲ್‌ ಮೂಲಕ ಟೂಲ್ ಕಿಟ್‍ ಉಚಿತವಾಗಿ ವಿತರಿಸಲು ಅನುಮೋದನೆ

*ರಾಜ್ಯದ 46 ಸರ್ಕಾರಿ ಐಟಿಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ₹ 20.27 ಕೋಟಿ ಅಂದಾಜು ವೆಚ್ಚದಲ್ಲಿ 26 ವಿವಿಧ ಮೆಕ್ಯಾನಿಕಲ್ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದೇ ಸಂಸ್ಥೆಗಳಲ್ಲಿ ₹ 16.30 ಕೋಟಿ ಅಂದಾಜು ವೆಚ್ಚದಲ್ಲಿ 127 ವಿವಿಧ ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣ ಖರೀದಿಸಲು ಸಮ್ಮತಿ

*ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲ್ಲೂಕಿನ ಹಿರೆಕೆರೂರು ಪಟ್ಟಣದ ದುರ್ಗಾದೇವಿ ಕೆರೆ ಹಾಗೂ ಬಹುಗ್ರಾಮ ಕೆರೆಗಳಿಗೆ ಕುಮುದ್ವತಿ ನದಿಯಿಂದ ಸುಮಾರು ₹ 24 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನಾ ವರದಿಗೆ ಒಪ್ಪಿಗೆ

*ಹಿರೆಕೆರೂರು ತಾಲ್ಲೂಕಿನ 13 ಕೆರೆ ಹಾಗೂ ಬ್ಯಾಡಗಿ ತಾಲ್ಲೂಕಿನ 2 ಕೆರೆಗಳಿಗೆ ವರದಾ ನದಿಯಿಂದ ನೀರು ಎತ್ತಿ ತುಂಬಿಸುವ ₹ 38 ಕೋಟಿ ಅಂದಾಜು ವೆಚ್ಚದಲ್ಲಿ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯ ಕ್ರಿಯಾ ಯೋಜನೆಗೆ ಅನುಮೋದನೆ

* ವಿಜಯಪುರ ಮಹಾನಗರಪಾಲಿಕೆಯ ಮಾಸ್ಟರ್ ಪ್ಲಾನ್ ಅನ್ವಯ ಅದರ ವ್ಯಾಪ್ತಿಯಲ್ಲಿ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಮಾಲೀಕರಿಗೆ ನೂತನ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲು ಒಪ್ಪಿಗೆ

* ರಾಮನಗರ ಜಿಲ್ಲೆ ಮತ್ತು ತಾಲ್ಲೂಕು, ಬಿಡದಿ ಹೋಬಳಿಯ ಕಾಕರಾಮನ ಹಳ್ಳಿ, ಬೋರೆಹಳ್ಳಿ ಮತ್ತು ಕರೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ ವಸತಿ ಯೋಜನೆಗಾಗಿ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಬದಲಿ ನಿವೇಶನ ನೀಡಲು ಒಪ್ಪಿಗೆ

* ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ದಾವಣಗೆರೆ ಡೆಂಟಲ್ ಚಾರಿಟಬಲ್ ಟ್ರಸ್ಟ್‌ಗೆ ದಾವಣಗೆರೆಯ ಜೆ.ಎಚ್‌. ಪಟೇಲ್ ಬಡಾವಣೆಯಲ್ಲಿ 15 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗ ನೀಡುವ ಗುತ್ತಿಗೆ ದರ ಶೇ 50 ರಷ್ಟು ಕಡಿಮೆ ಮಾಡಲು ಒಪ್ಪಿಗೆ

* ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಡಿವಾಳ ಮಾಚಿದೇವ ಸಂಘಕ್ಕೆ ಖಾಸಗಿ ವಸತಿ ಬಡಾವಣೆಯಲ್ಲಿನ 4,465 ಚದರ ಅಡಿ ವಿಸ್ತೀರ್ಣದ ಜಾಗವನ್ನು ಚದರ ಅಡಿಗೆ ₹ 10 ರ ರಿಯಾಯಿತಿ ದರದಲ್ಲಿ ಗುತ್ತಿಗೆ ನೀಡಲು ಒಪ್ಪಿಗೆ

* ದಾವಣಗೆರೆ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ದಾವಣಗೆರೆ ಆವರೆಗೆರೆ ಗ್ರಾಮದ ಖಾಸಗಿ ಬಡಾವಣೆಯಲ್ಲಿನ 21,418 ಚದರ ಅಡಿ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ಶೇ 10ರ ರಿಯಾಯತಿ ದರದಲ್ಲಿ ನೀಡಲು ಒಪ್ಪಿಗೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry