ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ: 10 ಕ್ಷೇತ್ರಗಳಿಗೆ ಗಮನ

ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಮೊದಲ ಸಭೆಯಲ್ಲಿ ನಿರ್ಧಾರ
Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕುಂಠಿತಗೊಂಡಿರುವ ಆರ್ಥಿಕತೆಗೆ ಉತ್ತೇಜನ ನೀಡಲು 10 ಕ್ಷೇತ್ರಗಳಿಗೆ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯು ಅಭಿಪ್ರಾಯಪಟ್ಟಿದೆ.

ನೀತಿ ಆಯೋಗದ ಸದಸ್ಯರಾಗಿರುವ ಆರ್ಥಿಕ ತಜ್ಞ ವಿವೇಕ್‌ ದೇಬರಾಯ್‌ ನೇತೃತ್ವದಲ್ಲಿನ ಮಂಡಳಿಯು ಇದೇ ಮೊದಲ ಬಾರಿಗೆ ಬುಧವಾರ ಇಲ್ಲಿ ಸಭೆ ಸೇರಿತ್ತು. ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದು, ಉದ್ಯೋಗ ಸೃಷ್ಟಿ ಸೇರಿದಂತೆ 10 ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

‘ಆರ್ಥಿಕ ಬೆಳವಣಿಗೆ, ಉದ್ಯೋಗ ಅವಕಾಶ, ಅಸಂಘಟಿತ ವಲಯ, ವಿತ್ತೀಯ ನೀತಿ, ಹಣಕಾಸು ನೀತಿ, ಸರ್ಕಾರಿ ವೆಚ್ಚ, ಆರ್ಥಿಕ ಆಡಳಿತ, ಕೃಷಿ, ಉಪಭೋಗ ಮತ್ತು ಸಾಮಾಜಿಕ ವಲಯಗಳನ್ನು ಸಮಿತಿಯು ಪ್ರಮುಖವಾಗಿ ಗುರುತಿಸಿದೆ’ ಎಂದು ವಿವೇಕ್‌ ದೇಬರಾಯ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳಿಗೆ ಜಾರಿ ಮಾಡಲು ಸಾಧ್ಯವಿರುವ ಪರಿಹಾರೋಪಾಯಗಳ ಬಗ್ಗೆ  ಪ್ರಧಾನಿಗೆ ಸಲಹೆ ನೀಡುವುದು ಸಮಿತಿಯ ಮುಖ್ಯ ಕೆಲಸವಾಗಿದೆ. ಹೀಗಾಗಿ ಆರ್ಥಿಕತೆಗೆ ಚೇತರಿಕೆ ನೀಡಲು ಕೈಗೊಳ್ಳಬೇಕಾದ ಕಾರ್ಯಸಾಧ್ಯವಾದ ಕ್ರಮಗಳ ಕುರಿತು ನಿರ್ದಿಷ್ಟ ಶಿಫಾರಸುಗಳನ್ನಷ್ಟೇ ಮಾಡಲಾಗುವುದು’ ಎಂದರು.

‘ಸರ್ಕಾರವು ವಿತ್ತೀಯ ಕೊರತೆ ತಗ್ಗಿಸುವ ನಿಲುವಿಗೆ ಬದ್ಧವಾಗಿರಬೇಕು. ಕೈಗಾರಿಕಾ ರಂಗಕ್ಕೆ ಉತ್ತೇಜನಾ ಕೊಡುಗೆ ನೀಡಲು ವಿತ್ತೀಯ ಕೊರತೆ ತಗ್ಗಿಸುವ ನಿಲುವಿನಿಂದ ಯಾವುದೇ ಕಾರಣಕ್ಕೂ ದೂರ ಸರಿಯಬಾರದು ಎನ್ನುವುದು ಮಂಡಳಿಯ ನಿಲುವಾಗಿದೆ’ ಎಂದು ದೇಬರಾಯ್‌ ಸ್ಪಷ್ಟಪಡಿಸಿದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶಿ ಆರ್ಥಿಕ ವೃದ್ಧಿ ದರವು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇ 5.7) ಕುಸಿದಿದೆ. ಸರ್ಕಾರವು ವಿತ್ತೀಯ ಕೊರತೆ ಗುರಿಯನ್ನು ಶೇ 3.2ಕ್ಕೆ ನಿಗದಿಪಡಿಸಿದೆ.

ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಮಾರ್ಗೋಪಾಯಗಳ ಕುರಿತು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ಸಭೆಗೆ ಮಾಹಿತಿ ನೀಡಿದರು.

ಮಂಡಳಿಯು ನವೆಂಬರ್‌ನಲ್ಲಿ ಮತ್ತೆ ಸಭೆ ಸೇರಿ ಚರ್ಚಿಸಿದ ನಂತರ ಪ್ರಧಾನಿಗೆ ತನ್ನ ಶಿಫಾರಸುಗಳ ವರದಿ ಸಲ್ಲಿಸಲಿದೆ.

*
ದೇಶಿ ಆರ್ಥಿಕತೆಗೆ ಸಂಬಂಧಿಸಿದಂತೆ ಬಹುತೇಕ ಸಂದರ್ಭಗಳಲ್ಲಿ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ ಮುನ್ನೋಟಗಳು ಕ್ರಮವಾಗಿ ಶೇ 80 ಮತ್ತು ಶೇ 65ರಷ್ಟು ನಿಜವಾಗಿಲ್ಲ.
–ವಿವೇಕ್‌ ದೇಬರಾಯ್‌,
ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT