ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದ ವಿಸ್ತರಣೆ: ಕಾಮಗಾರಿ ಶುರು

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ ಉತ್ತರ–ದಕ್ಷಿಣ ಕಾರಿಡಾರ್‌ನ ರೀಚ್‌–3ಸಿ ವಿಸ್ತರಣೆಯ (ನಾಗಸಂದ್ರ– ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ) ಕಾಮಗಾರಿ ಕೊನೆಗೂ ಆರಂಭವಾಗಿದೆ.

ಈ ಎತ್ತರಿಸಿದ ಮಾರ್ಗದ ವಿಸ್ತರಣೆ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ಎರಡು ವರ್ಷಗಳ ಹಿಂದೆಯೇ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕಾಮಗಾರಿ ತಡವಾಗಿತ್ತು. ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಗೆ ಈ ಕಾಮಗಾರಿಯ ಗುತ್ತಿಗೆ ವಹಿಸಲಾಗಿದೆ. ಏಪ್ರಿಲ್‌  27ರಂದು ಕಾಮಗಾರಿ ಆರಂಭಿಸಲು ಅನುಮತಿ ನೀಡಲಾಗಿತ್ತು.

‘ರೀಚ್‌ 2 (ಮೈಸೂರು ರಸ್ತೆ– ಕೆಂಗೇರಿ) ಹಾಗೂ ರೀಚ್‌ 4 ಬಿ (ಯಲಚೇನಹಳ್ಳಿ– ಅಂಜನಾಪುರ) ಮಾರ್ಗಗಳ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ವರ್ಷಗಳ ಹಿಂದೆಯೇ ಪೂರ್ಣಗೊಂಡಿತ್ತು. ರೀಚ್‌ 3ಸಿ ಮಾರ್ಗದ ಟೆಂಡರ್‌ ಪ್ರಕ್ರಿಯೆ ಈ ವರ್ಷದ ಆರಂಭದಲ್ಲಿ ಮುಗಿದಿತ್ತು. ಇಲ್ಲಿ ಕಾಮಗಾರಿ ಆರಂಭಿಸುವ ಮುನ್ನ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಜೊತೆ ಕೆಲವೊಂದು ವಿಚಾರಗಳಲ್ಲಿ ಸಮನ್ವಯ ಸಾಧಿಸ
ಬೇಕಿತ್ತು. ಹಾಗಾಗಿ ಪ್ರಕ್ರಿಯೆ ಸ್ವಲ್ಪ ವಿಳಂಬವಾದಂತೆ ಭಾಸವಾಗುತ್ತದೆ. ಈ ಕಾಮಗಾರಿಯನ್ನೂ ಎರಡು ವರ್ಷದೊಳಗೆ ಪೂರ್ಣಗೊಳಿಸುತ್ತೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಮೆಟ್ರೊ ಮಾರ್ಗವು ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ಹಾದುಹೋಗಲಿದೆ. ಈ ಕಾಮಗಾರಿಯಸಲುವಾಗಿ ಮಣ್ಣು ಪರೀಕ್ಷೆ ಹಾಗೂ ಅಡಿಪಾಯ ನಿರ್ಮಾಣದ ಕಾಮಗಾರಿಗಳು ಇತ್ತೀಚೆಗಷ್ಟೇ ಆರಂಭವಾಗಿವೆ. ಕಾಸ್ಟಿಂಗ್‌ ಯಾರ್ಡ್‌ ನಿರ್ಮಾಣದ ಕೆಲಸ ಶುರುವಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ತಡೆಗೋಡೆಗಳನ್ನು ಅಳವಡಿಸಲಾಗುತ್ತಿದೆ.

15 ಕಡೆ ಭೂಮಿಯಲ್ಲಿ ರಂಧ್ರ ಕೊರೆದು ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಗುಣನಿಯಂತ್ರಣ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಒಂದು ಕಾಂಕ್ರೀಟ್‌ ಮಿಶ್ರಣ ಘಟಕ ಸ್ಥಾಪಿಸಲಾಗಿದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮಂಜುನಾಥನಗರ ನಿಲ್ದಾಣದ ಬಳಿ ಅಡಿಪಾಯ ಅಳವಡಿಸುವ ಕಡೆ ಮೂಲಸೌಕರ್ಯ ಕೊಳವೆಗಳು ಹಾದು ಹೋಗಿರುವುದನ್ನು ಪರಿಶೀಲಿಸಲಾಗುತ್ತಿದೆ. ಇಲ್ಲಿ ಚರಂಡಿ ನಿರ್ಮಿಸಲಾಗಿದೆ. ಪರೀಕ್ಷಾರ್ಥ ನಾಲ್ಕು ಪೈಲ್‌ಗಳನ್ನು ನಿರ್ಮಿಸಲಾಗಿದೆ. ನಿರ್ಮಿಸಿರುವ ಪೈಲ್‌ಗಳ ಭಾರ ತಾಳಿಕೊಳ್ಳುವ ಸಾಮರ್ಥ್ಯದ ಪರಿಶೀಲನೆಗೆ ಸಿದ್ಧತೆಗಳು ನಡೆದಿವೆ’ ಎಂದು ಅವರು ತಿಳಿಸಿದರು.

ಈ ಕಾಮಗಾರಿಗಾಗಿ ಒಟ್ಟು 62 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಇದಕ್ಕೆ ತಗಲುವ ₹ 99.11 ಕೋಟಿ ಮೊತ್ತವನ್ನು ನಿಗಮವು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಪಾವತಿಸಿದೆ. ಇದುವರೆಗೆ 48 ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಕೆಐಎಡಿಬಿ, ₹ 79.68 ಕೋಟಿ ಪರಿಹಾರ ಪಾವತಿಸಿದೆ.

ಅಂಕಿಅಂಶ
* ರೀಚ್‌–3ಸಿ ಮಾರ್ಗದ ಉದ್ದ 3.77 ಕಿ.ಮೀ.
* ಕಾಮಗಾರಿಯ ಅಂದಾಜು ವೆಚ್ಚ ₹ 299 ಕೋಟಿ.

ನಿಲ್ದಾಣಗಳು
* ಮಂಜುನಾಥನಗರ
* ಜಿಂದಾಲ್‌
* ಬಿಐಇಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT