ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಕಾಲ್ತುಳಿತಕ್ಕೆ ಮಳೆಯೇ ಕಾರಣ

ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ದುರಂತ
Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈನ ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದ ಪಾದಚಾರಿಗಳ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಭಾರಿ ಮಳೆಯೇ ಕಾರಣ ಎಂದು ರೈಲ್ವೆ ಇಲಾಖೆಯ ತನಿಖಾ ವರದಿ ತಿಳಿಸಿದೆ.

ಪಶ್ಚಿಮ ರೈಲ್ವೆಯ ಮುಖ್ಯ ಭದ್ರತಾ ಅಧಿಕಾರಿ ನೇತೃತ್ವದ ತನಿಖಾ ತಂಡ ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅನಿಲ್‌ ಕುಮಾರ್‌ ಅವರಿಗೆ ಬುಧವಾರ ತನಿಖಾ ವರದಿಯನ್ನು ಸಲ್ಲಿಸಿದೆ.

ಸೆಪ್ಟೆಂಬರ್‌ 29ರಂದು ಸಂಭವಿಸಿದ ಈ ಅವಘಡದಲ್ಲಿ 23 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ 30 ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ವರದಿಯನ್ನು ಸಲ್ಲಿಸಲಾಗಿದೆ. ತನಿಖಾ ತಂಡವು ಘಟನೆಯ ದೃಶ್ಯಾವಳಿಗಳನ್ನು  ಪರಿಶೀಲಿಸಿದೆ.

ಕಾಲ್ತುಳಿತಕ್ಕೆ ಭಾರಿ ಮಳೆಯೇ ಕಾರಣ. ಮೇಲ್ಸೇತುವೆಯ ಮೆಟ್ಟಿಲುಗಳ ಮೇಲೆ ಹೆಚ್ಚಿನ ಜನ ಜಮಾಯಿಸಿದ್ದರು. ಮಳೆ ಬಂದ ಕಾರಣ ಟಿಕೆಟ್‌ ಕೌಂಟರ್‌ನಲ್ಲಿದ್ದ ಜನ ಏಕಾಏಕಿ ಮೇಲ್ಸೇತುವೆಯತ್ತ ಧಾವಿಸಿ ಆಶ್ರಯ ಪಡೆಯಲು ಮುಂದಾದರು. ಇದರಿಂದ ನೂಕು ನುಗ್ಗಲು ಉಂಟಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿರಂತರವಾಗಿ ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಭಾರವಾದ ಲಗೇಜ್‌ ಬ್ಯಾಗ್‌ಗಳನ್ನು ಕೊಂಡೊಯ್ಯುತ್ತಿದ್ದರು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿರಬಹುದು ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.

ಸೇತುವೆ ಮೇಲೆ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದ್ದರಿಂದ ಗೊಂದಲ ಉಂಟಾಯಿತು ಎನ್ನುವುದನ್ನು ಯಾರೂ ಒಪ್ಪಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

ಪಾದಚಾರಿ ಸೇತುವೆ ವಿಳಂಬ ತನಿಖೆಗೆ
ನವದೆಹಲಿ:
ಮುಂಬೈನ ಎಲ್ಫಿನ್‌ಸ್ಟನ್‌ ರೋಡ್‌ ರೈಲು ನಿಲ್ದಾಣದಲ್ಲಿ ಪಾದಚಾರಿ ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲು 18 ತಿಂಗಳು ವಿಳಂಬ ಆಗಿರುವುದರ ಬಗ್ಗೆ ತನಿಖೆ ನಡೆಸುವುದಕ್ಕಾಗಿ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ಸಮಿತಿ ರಚಿಸಿದ್ದಾರೆ.

ಕೇಂದ್ರ ಜಾಗೃತ ಆಯೋಗದ ಮಾಜಿ ಆಯುಕ್ತ  ಪ್ರತ್ಯೂಷ್‌ ಸಿನ್ಹಾ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ವಿನಾಯಕ್‌ ಚಟರ್ಜಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಸಮಿತಿಯು ಮೂರು ತಿಂಗಳ ಒಳಗಾಗಿ ರೈಲ್ವೆಗೆ ವರದಿ ನೀಡಲಿದೆ. ಟೆಂಡರ್‌ ಕರೆಯಲು ವಿಳಂಬ ಆಗಿದ್ದೇಕೆ ಮತ್ತು ಭವಿಷ್ಯದಲ್ಲಿ ಇಂತಹ ವಿಳಂಬವನ್ನು ಹೇಗೆ ತಪ್ಪಿಸಬಹುದು ಎಂಬುದರ ಬಗ್ಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.

ಕಳೆದ ತಿಂಗಳು ಎಲ್ಫಿನ್‌ಸ್ಟನ್‌ ರೈಲು ನಿಲ್ದಾಣದ ಹಳೆಯ ಪಾದಚಾರಿ ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 23 ಜನರು ಮೃತಪಟ್ಟಿದ್ದರು.

ತನಿಖಾ ತಂಡದ ಶಿಫಾರಸುಗಳು
*ಜನದಟ್ಟಣೆ ಸಮಯದಲ್ಲಿ  ಭಾರವಾದ ಲಗೇಜ್‌ಗಳನ್ನು ಕೊಂಡೊಯ್ಯಲು ಅವಕಾಶ ನೀಡಬಾರದು.
*ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ ಅನ್ನು ಸ್ಥಳಾಂತರಿಸಬೇಕು.
*ಮತ್ತೊಂದು ಮೇಲ್ಸೇತುವೆ ನಿರ್ಮಿಸಬೇಕು.
*ಭದ್ರತಾ ಸಿಬ್ಬಂದಿಗೆ ವೈರಲೆಸ್‌ ಸೆಟ್‌ಗಳನ್ನು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT