ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

Last Updated 11 ಅಕ್ಟೋಬರ್ 2017, 20:30 IST
ಅಕ್ಷರ ಗಾತ್ರ

ಭೋಪಾಲ್‌: ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರಾಬಲ್ಯ ಮುಂದುವರಿದಿದೆ.

ಪ್ರಕಾಶ್‌ ತಾರನ್‌ ‍ಪುಷ್ಕರ್‌ ಭವನದಲ್ಲಿ ಬುಧವಾರ ಮುಕ್ತಾಯ ವಾದ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡದವರು ಸಮಗ್ರ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ಇದರೊಂದಿಗೆ ಸತತ ಮೂರನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡ ಸಾಧನೆಗೂ ಭಾಜನರಾಗಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ 9 ಚಿನ್ನ, 11ಬೆಳ್ಳಿ ಮತ್ತು 10 ಕಂಚಿನ ಪದಕ ಗಳನ್ನು ಗೆದ್ದ ಕರ್ನಾಟಕ ತಂಡದವರು 238 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನ ಗಳಿಸಿದರು. ರೈಲ್ವೆಸ್‌, ರನ್ನರ್ಸ್‌ ಅಪ್‌ ಸ್ಥಾನ ತನ್ನದಾಗಿಸಿಕೊಂಡಿತು. ಈ ತಂಡ ದವರು 7 ಚಿನ್ನ, 8 ಬೆಳ್ಳಿ ಮತ್ತು 5 ಕಂಚು ಜಯಿಸಿ 168 ಪಾಯಿಂಟ್ಸ್‌ ಹೆಕ್ಕಿದರು.

5 ಚಿನ್ನ ಹಾಗೂ ತಲಾ 6 ಬೆಳ್ಳಿ ಮತ್ತು ಕಂಚು ಜಯಿಸಿದ ತಮಿಳುನಾಡು ತಂಡ ದವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಶ್ರೀಹರಿಗೆ ಚಿನ್ನ: ಬುಧವಾರ ನಡೆದ ‍ಪುರುಷರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್‌, ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಅವರು 57.20 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಸರ್ವಿಸಸ್‌ ತಂಡವನ್ನು ಪ್ರತಿನಿಧಿಸಿದ್ದ ಅರವಿಂದ್ ಮಣಿ (58.34ಸೆ.) ಈ ವಿಭಾಗದ ಕಂಚು ಗೆದ್ದುಕೊಂಡರು. 200 ಮೀಟರ್ಸ್‌ ಬಟರ್‌ ಫ್ಲೈ ವಿಭಾಗದಲ್ಲಿ ಕರ್ನಾಟಕದ ಅವಿನಾಶ್‌ ಮಣಿ (2:03.27ಸೆ.) ಕಂಚಿಗೆ ಕೊರಳೊಡ್ಡಿದರು.

ಮಾಳವಿಕಾಗೆ ಬೆಳ್ಳಿ: ಮಹಿಳೆಯರ 400 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ರಾಜ್ಯದ ವಿ.ಮಾಳವಿಕಾ (4:28.51ಸೆ.) ಮತ್ತು ಖುಷಿ ದಿನೇಶ್‌ (4:36.59ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಸಾಮರ್ಥ್ಯ ತೋರಿದರು.

100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ನಲ್ಲಿ ಸುವನಾ ಭಾಸ್ಕರ್‌ (1:08.31ಸೆ.) ಕಂಚು ಗೆದ್ದರು. 200 ಮೀಟರ್ಸ್‌ ಬಟರ್‌ಫ್ಲೈನಲ್ಲಿ ದಾಮಿನಿ ಗೌಡ (2:24.08ಸೆ.) ಬೆಳ್ಳಿ ಜಯಿಸಿದರೆ, 4X50 ಮೀಟರ್ಸ್‌ ಮಿಶ್ರ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ (1:52.62ಸೆ.) ಬೆಳ್ಳಿ ತನ್ನದಾಗಿಸಿಕೊಂಡಿತು.

ಶ್ರೀಹರಿ ‘ಶ್ರೇಷ್ಠ ಈಜುಪಟು’: ಕರ್ನಾಟಕದ ಶ್ರೀ ಹರಿ ‘ಶ್ರೇಷ್ಠ ಈಜುಪಟು’ ಗೌರವ ಗಳಿಸಿದರು. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದ ಅವರು ಎರಡು ಕೂಟ ದಾಖಲೆಗಳನ್ನೂ ನಿರ್ಮಿಸಿದ್ದರು.

ಹರಿಯಾಣದ ಶಿವಾನಿ ಕತಾರಿಯಾ ಮಹಿಳಾ ವಿಭಾಗದ ‘ಶ್ರೇಷ್ಠ ಈಜುಪಟು’ ಗೌರವಕ್ಕೆ ಭಾಜನರಾದರು. ಶಿವಾನಿ 100, 200 ಮತ್ತು 400 ಮೀಟರ್ಸ್‌ ಫ್ರೀಸ್ಟೈಲ್‌ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT