ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಗಳ ವೈಭವ ‘ಕಟ್ಟಿ’ಕೊಡುವ ಸೊಬಗು

ಗಡಿನಾಡಲ್ಲಿ ದೀಪಾವಳಿಯಲ್ಲಿ ನಡೆಯುವ ವಿಶಿಷ್ಟ ಆಚರಣೆ
Last Updated 12 ಅಕ್ಟೋಬರ್ 2017, 5:50 IST
ಅಕ್ಷರ ಗಾತ್ರ

ವಿಭಿನ್ನ ಸಂಸ್ಕೃತಿಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕತ್ತಲಾಗುತ್ತಿದ್ದಂತೆಯೇ ಮನೆಗಳ ಬಳಿ ಹಣತೆಗಳನ್ನು ಬೆಳಗಿಸುವುದು, ಪಟಾಕಿಗಳನ್ನು ಸಿಡಿಸುವುದು, ಬಗೆಬಗೆಯ ಆಕಾಶಬುಟ್ಟಿಗಳನ್ನು ಕಟ್ಟಿ ಸಂಭ್ರಮಿಸುವುದು ಮಾತ್ರವಲ್ಲದೆ, ಕೋಟೆಗಳನ್ನು ಕಟ್ಟಿ ರಾಜರ ಸಾಧನೆಯ ವೈಭವ ಸಾರುವ ವಿಶಿಷ್ಟ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತದೆ.

ಜಿಲ್ಲೆಯ ಬೆಳಗಾವಿ, ಖಾನಾಪುರ, ಚಿಕ್ಕೋಡಿ, ಅಥಣಿ, ರಾಯಬಾಗ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಕೋಟೆಗಳು ಕಾಣಸಿಗುತ್ತವೆ. ಪ್ರಜಾಪ್ರಭುತ್ವದ ಇಂದಿನ ದಿನಗಳಲ್ಲೂ ಆಳರಸರ ಆಳ್ವಿಕೆಯ, ದರ್ಬಾರಿನ ದಿನಗಳನ್ನೂ ನೆನಪಿಸಿಕೊಳ್ಳುವುದಕ್ಕೆ ಅವಕಾಶ ಒದಗಿಸುವ ಸಂಸ್ಕೃತಿ ಇದಾಗಿದೆ.

ಗಲ್ಲಿಗಳಲ್ಲಿ ಆಕರ್ಷಕವಾಗಿ ಕೋಟೆಗಳ ಮಾದರಿಯನ್ನು ಕಟ್ಟುವ ಚಿಣ್ಣರು, ಅಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ. ಅವರು ಆಡಳಿತ ನಡೆಸುತ್ತಿರುವಂತೆ ಕೋಟೆ ರೂಪುಗೊಂಡಿರುತ್ತದೆ. ಸೈನಿಕರು ಪಹರೆ ಕಾಯುತ್ತಿರುತ್ತಾರೆ. ಕೋಟೆಗಳನ್ನು ಸುಂದರವಾಗಿಸಲು ಗಿಡಗಳನ್ನು ನೆಡಲಾಗುತ್ತದೆ. ಹೊಲಗದ್ದೆಗಳ ಮಾದರಿಯೂ ಇರುತ್ತದೆ! ಕೋಟೆಯ ಇಡೀ ಪರಿಸರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಇವೆಲ್ಲವೂ ನೋಡುಗರನ್ನು ಆಕರ್ಷಿಸುತ್ತವೆ.

ಚಿಣ್ಣರೇ ನಿರ್ಮಿಸುತ್ತಾರೆ:
ಪ್ರಮುಖವಾಗಿ ಚಿಣ್ಣರು ಇಂಥದ್ದೊಂದು ಆಚರಣೆಯಲ್ಲಿ ಭಾಗಿಯಾಗುವುದು ವಿಶೇಷ. ನೆರೆಯ ಮಹಾರಾಷ್ಟ್ರದ ಸಂಸ್ಕೃತಿ, ಆಚರಣೆಗಳು ಮೇಳೈಸಿರುವ ಈ ಗಡಿಭಾಗದಲ್ಲಿ ಮಕ್ಕಳು ಕಿಲ್ಲೆಗಳ ಮಾದರಿ ನಿರ್ಮಿಸುವ ಮೂಲಕ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸುತ್ತಾ ಬಂದಿರುವುದು ಹತ್ತಾರು ವರ್ಷಗಳಿಂದಲೂ ನಡೆದು ಬಂದಿದೆ.

ದಸರಾ ಮುಗಿಯುತ್ತಿದ್ದಂತೆಯೇ ಕೋಟೆ ಕಟ್ಟಲು ಆರಂಭಿಸುವ ಮಕ್ಕಳು, ಸ್ಥಳೀಯರಿಂದ ಹಣ ಸಂಗ್ರಹಿಸುತ್ತಾರೆ. ದೀಪಾವಳಿ ವೇಳೆಗಾಗಲೇ ಕೋಟೆಗಳಿಗೆ ಸ್ಪಷ್ಟ ರೂಪ ನೀಡುತ್ತಾರೆ. ಈ ಕಾರ್ಯದಲ್ಲಿ ಹಿರಿಯರು ಬೆಂಬಲವಾಗಿ ನಿಲ್ಲುತ್ತಾರೆ. ನವರಾತ್ರಿ ಸಂದರ್ಭದಲ್ಲಿ ದುರ್ಗಾಮಾತಾ ದೌಡ್‌ನ ಸಂಭ್ರಮವಾದರೆ, ದೀಪಾವಳಿಯಲ್ಲಿ ಕೋಟೆಗಳನ್ನು ಸೌಂದರ್ಯ ನೋಡುವ ಅವಕಾಶ. ಎರಡೂ ಸಂಪ್ರದಾಯಗಳು, ದೇಶಭಕ್ತಿಯನ್ನು ಉದ್ದೀಪಿಸುವುದೇ ಆಗಿವೆ.

ರಾಜ–ಮಹಾರಾಜರು ಶತ್ರುಗಳಿಂದ ರಕ್ಷಣೆ ಪಡೆಯಲು ಕೋಟೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಅದೇ ಮಾದರಿಯಲ್ಲಿ ಇಲ್ಲಿಯೂ ಅಲ್ಲಲ್ಲಿ ಕೋಟೆಗಳನ್ನು ಮಕ್ಕಳೆಲ್ಲರೂ ಕೂಡಿ ಕಟ್ಟುತ್ತಾರೆ. ಇದಕ್ಕೆ ಸ್ಥಳೀಯ ಹಿರಿಯರ ಮಾರ್ಗದರ್ಶನ, ಸಹಕಾರ ಇರುತ್ತದೆ. ಮಕ್ಕಳ ಕಲಾಪ್ರತಿಭೆಯನ್ನು ನೋಡುವುದೇ ಚೆಂದ.

ಬೀದಿಯ ಅಲ್ಲಲ್ಲಿ:
ಬೀದಿಯ ಮಕ್ಕಳೆಲ್ಲರೂ ಸೇರಿ ಕಲ್ಲು, ಮಣ್ಣು ಸಂಗ್ರಹಿಸಿ ಕೋಟೆಯ ಪ್ರತಿಕೃತಿಗೆ ರೂಪ ನೀಡುತ್ತಾರೆ. ಕೋಟೆಯ ಪ್ರವೇಶ ದ್ವಾರ, ಈಜುಕೊಳ, ಸುರಂಗ ಮಾರ್ಗ, ಬುರುಜುಗಳೂ ಅಲ್ಲಿ ಕಾಣಸಿಗುತ್ತವೆ. ಈ ಕೋಟೆಯ ಪ್ರತಿಕೃತಿಗಳಿಗೆ ಸುಣ್ಣ ಬಣ್ಣವನ್ನೂ ಮಾಡುತ್ತಾರೆ! ಕೋಟೆಯ ನೆತ್ತಿಯ ಮೇಲೆ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಸುತ್ತಮುತ್ತ ಆಯಕಟ್ಟಿನ ಸ್ಥಳಗಳಲ್ಲಿ ಸೈನಿಕರ ಮೂರ್ತಿಗಳನ್ನು ನಿಲ್ಲಿಸುತ್ತಾರೆ. ಆವರಣದಲ್ಲಿ ಗೋಧಿ, ಕಡಲೆ, ಗೋವಿನ ಜೋಳ, ಹುಲ್ಲು ಬೆಳೆಸಿ ಉದ್ಯಾನದಂತೆ ರೂಪಿಸುವುದನ್ನೂ ಅವರು ಮರೆಯುವುದಿಲ್ಲ!

ಕೆಲವೆಡೆ ಕಾರಂಜಿಗಳನ್ನು ಮಾಡಿ ಅಂದವನ್ನು ಹೆಚ್ಚಿಸುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಕೋಟೆ ಬಳಿ ರಂಗೋಲಿ ಬಿಡಿಸಿ ಮೆರುಗನ್ನು ಹೆಚ್ಚಿಸುತ್ತಾರೆ. ವಿದ್ಯುತ್ ದೀಪಾಲಂಕಾರ ಮುದ ನೀಡುತ್ತದೆ. ಐತಿಹಾಸಿಕ ಘಟನೆಗಳ ಸನ್ನಿವೇಶಗಳ ರೂಪಕಗಳನ್ನೂ ಪ್ರದರ್ಶಿಸಿ, ಗತವೈಭವವನ್ನು ಕಟ್ಟಿಕೊಡುವ ಪ್ರಯತ್ನ ಈ ಕೋಟೆಗಳ ಮೂಲಕ ನಡೆಯುತ್ತದೆ.

ದೇಶಾಭಿಮಾನ ಮೂಡಿಸುವ ಉದ್ದೇಶ:
ಮಕ್ಕಳಲ್ಲಿ ದೇಶಾಭಿಮಾನ, ಇತಿಹಾಸದ ಅರಿವು ಮೂಡಿಸುವ ಉದ್ದೇಶದಿಂದ ಹಿಂದಿನಿಂದಲೂ ಈ ಆಚರಣೆ ಮಾಡಿಕೊಂಡು ಬರಲಾಗಿದೆ. ಮಕ್ಕಳಲ್ಲಿರುವ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಅವಕಾಶವಾಗಿಯೂ ಇದನ್ನು ಬಳಸಿಕೊಳ್ಳುತ್ತಿರುವುದು ಗಮನಾರ್ಹ. ಐತಿಹಾಸಿಕ ಕೋಟೆಗಳು ರಾಜರ ಶಕ್ತಿಕೇಂದ್ರಗಳೂ ಆಗಿದ್ದವು. ಶಿವಾಜಿ ಮಹಾರಾಜರ ಯುದ್ಧನೀತಿಯ ಪ್ರತೀಕವಾಗಿರುವ ಕೋಟೆಗಳ ಮಾದರಿಗಳ ಮೂಲಕ ಮಕ್ಕಳಲ್ಲಿ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಆಶಯವನ್ನೂ ಹೊಂದಲಾಗಿದೆ ಎನ್ನುತ್ತಾರೆ ಹಿರಿಯರು.

ಈ ವರ್ಷವೂ ಮಕ್ಕಳು ಕಿಲ್ಲೆಗಳನ್ನು ಕಟ್ಟುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೋಟೆ ಕಟ್ಟುವವರಿಗೆ ಅನುಕೂಲ ಆಗಲೆಂದೋ ಏನೋ ಮಾರುಕಟ್ಟೆಗಳಲ್ಲಿ ಕಿಲ್ಲೆಗಳ ಮಾದರಿಗಳನ್ನೇ ಮಾರಾಟ ಮಾಡುವುದೂ ಕಂಡುಬರುತ್ತಿದೆ. ಶಿವಾಜಿ ಮಹಾರಾಜರ ವಿಭಿನ್ನ ಪ್ರತಿಮೆಗಳು, ಪುತ್ಥಳಿಗಳು (ಸಣ್ಣ ಪ್ರಮಾಣದ) ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಕೋಟೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನೂ ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT