ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇದಿಕೆಗಳಲ್ಲಿ ಎಚ್ಚರದಿಂದ ಮಾತನಾಡಿ’

ಮಲ್ಲಿಕಾ ಘಂಟಿ ವಿರುದ್ಧ ಹೈಕೋರ್ಟ್‌ ಗರಂ
Last Updated 12 ಅಕ್ಟೋಬರ್ 2017, 5:55 IST
ಅಕ್ಷರ ಗಾತ್ರ

ಬೆಂಗಳೂರು: ರಾಮಾಯಣ ಹಾಗೂ ಮಹಾಭಾರತ ಅತ್ಯಾಚಾರದ ಕೂಪಗಳು. ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂದು ಎರಡು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರನ್ನು ಹೈಕೋರ್ಟ್ ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.

‘ಮಲ್ಲಿಕಾ ಘಂಟಿ ಬಳಸಿದ ಪದಗಳನ್ನು ನೋಡಿದರೆ ಆಶ್ವರ್ಯವಾಗುತ್ತದೆ. ಹೀಗೆಂದರೆ ಏನರ್ಥ. ರಾಮಾಯಣ ಮತ್ತು ಮಹಾಭಾರತ ಓದಿದವರೆಲ್ಲಾ ದೌರ್ಜನ್ಯ ಎಸಗುತ್ತಾರೆಯೇ. ಅವರೇನು ದೋಷಿಗಳೇ. ಇಂತಹ ಮಾತುಗಳನ್ನು ಆಡುವುದು ತರವಲ್ಲ. ಪ್ರತಿಯೊಬ್ಬರೂ ಬೇರೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು’ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಲ್ಲಿಕಾ ಘಂಟಿ ಉನ್ನತ ಹುದ್ದೆಯಲ್ಲಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಕಡಿಮೆ ಮಾತನಾಡಬೇಕು. ಒಂದೊಮ್ಮೆ ಮಾತನಾಡಿದರೂ ಜವಾಬ್ದಾರಿಯಿಂದ ನುಡಿಯಬೇಕಾಗುತ್ತದೆ. ಬೇರೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಬಾರದು. ಅದರಲ್ಲೂ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಎಚ್ಚರದಿಂದ ಇರಬೇಕು. ಸಮಾಜದ ಸಾಮರಸ್ಯಕ್ಕೆ ಪೆಟ್ಟು ಬೀಳುವಂತಹ ಹೇಳಿಕೆ ನೀಡಬಾರದು’ ಎಂದು ಹೇಳಿದರು.

ಪ್ರಕರಣವೇನು?

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ 2014ರ ಜುಲೈ 28ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಆಗಿದ್ದ ಡಾ.ಮಲ್ಲಿಕಾ ಘಂಟಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ರಾಮಾಯಣ ಹಾಗೂ ಮಹಾಭಾರತ ಅತ್ಯಾಚಾರದ ಕೂಪಗಳು. ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾಪ್ರವೃತ್ತಿ ಹೆಚ್ಚಿರುತ್ತದೆ’ ಎಂದಿದ್ದರು. ಈ ಹೇಳಿಕೆ ಖಂಡಿಸಿ ಶಂಕರ್ ಬಿ. ಗೌಡ ಎಂಬುವರು ‘ಸುವರ್ಣ ನ್ಯೂಸ್‌’ ಖಾಸಗಿ ವಾಹಿನಿಗೆ ಪ್ರತಿ ಹೇಳಿಕೆ ನೀಡಿದ್ದರು.

‘ವಾಹಿನಿಯಲ್ಲಿ ಮಾತನಾಡುವಾಗ ಶಂಕರ್‌ಗೌಡ ನನ್ನ ವಿರುದ್ಧ ಅತ್ಯಂತ ಅಸಹ್ಯಕರ, ಅಸಭ್ಯ ಪದ ಬಳಸಿ ನನ್ನ ಘನತೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಮಲ್ಲಿಕಾ ಘಂಟಿ ಭದ್ರಾವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ತನಿಖೆ ನಡೆಸಿದ್ದ ಪೊಲೀಸರು, ಶಂಕರ್ ಗೌಡ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಭದ್ರಾವತಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ದೋಷಾರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಶಂಕರ್ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್, ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡಿದರು. ಪ್ರತಿವಾದಿಗಳಾದ ಮಲ್ಲಿಕಾ ಘಂಟಿ ಮತ್ತು ಭದ್ರಾವತಿ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದರು. ಅರ್ಜಿದಾರರ ವಕೀಲ ಭರತ್ ಎಸ್. ರಾವ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT