ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯುತ್ತಿದೆ ಶಸ್ತ್ರಚಿಕಿತ್ಸೆಗೆ ಕಾದವರ ಪಟ್ಟಿ!

ವಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ ಚಾವಣಿ ಕುಸಿದು ಒಂದು ತಿಂಗಳು
Last Updated 12 ಅಕ್ಟೋಬರ್ 2017, 6:10 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ (ವಿಮ್ಸ್) ಆಸ್ಪತ್ರೆಯಲ್ಲಿರುವ ಸ್ತ್ರೀ ಮತ್ತು ಪ್ರಸೂತಿ ವಿಭಾಗದ ಶಸ್ತ್ರಚಿಕಿತ್ಸೆ ಕೊಠಡಿಯ ಚಾವಣಿ ಕುಸಿದು ಒಂದು ತಿಂಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಕಾಯುತ್ತಿರುವವರ ಪಟ್ಟಿ ಬೆಳೆಯುತ್ತಿದೆ.

ಆಸ್ಪತ್ರೆಯ ನೆಲಮಹಡಿಯಲ್ಲಿರುವ ಕೊಠಡಿಯಲ್ಲಿ ದಿನದ 24 ತಾಸು ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಸೆಪ್ಟೆಂಬರ್‌ 11ರ ರಾತ್ರಿ ಚಾವಣಿ ಕುಸಿದ ಬಳಿಕ ಅಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತಗೊಂಡಿದೆ.

ತುರ್ತು ಇರುವ ರೋಗಿಗಳಿಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಉಳಿದವರೆಲ್ಲರನ್ನೂ ವೈದ್ಯರು ಕಾಯ್ದಿರಿಸಿದ ಪಟ್ಟಿಗೆ ಸೇರಿಸುತ್ತಿದ್ದಾರೆ. ಹೀಗಾಗಿ ಅವರೆಲ್ಲರೂ ಶಸ್ತ್ರಚಿಕಿತ್ಸೆಗಳ ಕೊಠಡಿ ಸಂಪೂರ್ಣ ಸಜ್ಜಾಗುವವರೆಗೂ ಕಾಯಲೇಬೇಕಾಗಿದೆ. ಅಕ್ಟೋಬರ್ ಅಂತ್ಯದವರೆಗೂ ಈ ಕೊಠಡಿಗಳು ಸಜ್ಜಾಗುವುದು ಅನುಮಾನ ಎಂಬುದು ಕೆಲವು ವೈದ್ಯರ ಅಭಿಪ್ರಾಯ.

ಮೂರು ಮಹಡಿ: ‘ಮೂರು ಮಹಡಿಯ ಶಸ್ತ್ರಚಿಕಿತ್ಸೆ ಸಂಕೀರ್ಣದ ನೆಲಮಹಡಿಯ ಕೊಠಡಿಯ ದುರಸ್ತಿ ಕಾರ್ಯ ಮುಂದುವರಿದಿದೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಅದರೊಂದಿಗೆ, ಕಣ್ಣಿನ ಶಸ್ತ್ರಚಿಕಿತ್ಸೆ ಕೊಠಡಿಯ ನವೀಕರಣವೂ ಪೂರ್ಣಗೊಂಡಿದ್ದು, ಅದನ್ನು ಬ್ಯಾಕ್ಟೀರಿಯ ಮುಕ್ತಗೊಳಿಸುವ ಕೆಲಸ ಆರಂಭವಾಗಿದೆ’ ಎಂದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮರಿರಾಜು ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

‘ಬ್ಯಾಕ್ಟೀರಿಯಾ ಮುಕ್ತವಾಗಿರುವ ಕುರಿತ ವರದಿಯನ್ನು ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗ ನೀಡಬೇಕು. ಅದಕ್ಕೆ ಕನಿಷ್ಠ ಎರಡು ವಾರವಾದರೂ ಬೇಕಾಗುತ್ತದೆ. ಬ್ಯಾಕ್ಟೀರಿಯಾ ಮುಕ್ತವಾಗಿದೆ ಎಂಬ ವರದಿ ಬಂದರೆ ಮಾತ್ರ ಅಲ್ಲಿ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಗುವುದು. ಇಲ್ಲವಾದರೆ ಮತ್ತೊಮ್ಮೆ ಬ್ಯಾಕ್ಟೀರಿಯಾ ಮುಕ್ತಗೊಳಿಸುವ ಕಾರ್ಯ ನಡೆಸಬೇಕಾಗುತ್ತದೆ’ ಎಂದು ಹೇಳಿದರು.

‘ವಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಎಷ್ಟು ಮಂದಿ ಕಾಯುತ್ತಿದ್ದಾರೆ ಎಂಬ ಪಟ್ಟಿ ನನ್ನ ಬಳಿ ಲಭ್ಯವಿಲ್ಲ. ಅದೆಲ್ಲವೂ ಆಯಾ ವಿಭಾಗಗಳ ಮುಖ್ಯಸ್ಥರಿಗೆ ಗೊತ್ತಿರುತ್ತದೆ’ ಎಂದು ಪ್ರತಿಕ್ರಿಯಿಸಿದರು.

ನಾಲ್ಕು ಕೊಠಡಿ: ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ಶಸ್ತ್ರಚಿಕಿತ್ಸಾ ಕೊಠಡಿಗಳಿದ್ದು, ಅಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆಗಳೂ ನಡೆಯುವುದರಿಂದ ಹೆಚ್ಚಿನ ಒತ್ತಡ ಉಂಟಾಗಿದೆ ಎಂಬುದು ಸಿಬ್ಬಂದಿಯೊಬ್ಬರ ಅಭಿಪ್ರಾಯ. ಈ ಆಸ್ಪತ್ರೆಯಲ್ಲಿ ನಿತ್ಯ 30ರಿಂದ 35 ಹೆರಿಗೆಗಳಾಗುತ್ತವೆ. ಅದಕ್ಕೂ ಅವಕಾಶ ನೀಡಿ, ವಿಮ್ಸ್‌ನ ರೋಗಿಗಳ ಶಸ್ತ್ರಚಿಕಿತ್ಸೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT