ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರನ ಸನ್ನಿಧಿಯಲ್ಲಿ ಮಳೆಯ ಅಬ್ಬರ

ಕೆರೆಯಂತಾದ ದೇವಸ್ಥಾನದ ಮುಂಭಾಗ, ಮಣ್ಣು ಕುಸಿದು ರಸ್ತೆ ತಡೆ
Last Updated 12 ಅಕ್ಟೋಬರ್ 2017, 7:07 IST
ಅಕ್ಷರ ಗಾತ್ರ

ಮಲೆಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟದಲ್ಲಿ ವರುಣ ತನ್ನ ಉಗ್ರ ಸ್ವರೂಪ ತೋರಿಸಿದೆ. ರಾತ್ರಿ 1.30ಕ್ಕೆ ಆರಂಭವಾದ ಮಳೆ ಬೆಳಗಿನ ಜಾವ 5 ಗಂಟೆವರೆಗೂ ಸುರಿಯಿತು.

ಮಹದೇಶ್ವರ ಸ್ವಾಮಿಗೆ ಮಜ್ಜನ ಮಾಡಲು ನೀರನ್ನು ಕೊಂಡೊಯ್ಯುವ ಮಜ್ಜನದ ಬಾವಿಯು ಸಂಪೂರ್ಣ ತುಂಬಿಕೊಂಡಿದೆ. ತಮಗೆ ಗೊತ್ತಿರುವಂತೆ ಈ ಬಾವಿ ಜಲಾವೃತವಾಗಿದ್ದು ಇದೇ ಮೊದಲು ಎಂದು ಹಿರಿಯ ನಾಗರಿಕರು ತಿಳಿಸಿದರು.

ಪಕ್ಕದ ಚಿಕ್ಕಕೆರೆ ಸಹ ಭರ್ತಿಯಾಗಿದ್ದು, ನೀರು ಹೊರಹೋಗಲು ಜಾಗವಿಲ್ಲದೆ ಮಹದೇಶ್ವರ ಸ್ವಾಮಿ ದೇವಸ್ಥಾನದ ರಾಜಗೋಪುರದ ಮುಂಭಾಗದಲ್ಲಿಯೇ ಹರಿಯುತ್ತಿದೆ.

ದೊಡ್ಡಕೆರೆ ಕೋಡಿ ಬಿದ್ದಾಗ ಚಿಕ್ಕಕೆರೆಗೆ ನೀರು ಹರಿದು ಬಂದು, ಅಲ್ಲಿಂದ ಹೊರ ಹೋಗಲು ಒಳಮಾರ್ಗವಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ದಿ ಪ್ರಾಧಿಕಾರದ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಯವಿಭವಸ್ವಾಮಿ ಎಂಬುವವರು ಚಿಕ್ಕಕೆರೆಯಲ್ಲಿದ್ದ ಎರಡು ಐತಿಹಾಸಿಕ ಬಾವಿಗಳನ್ನು ಕೆಡವಿ ಕಲ್ಯಾಣಿ ನಿರ್ಮಿಸಲು ಮುಂದಾಗಿದ್ದರು. ಈ ಕಾಮಗಾರಿಯನ್ನು ಮನಬಂದಂತೆ ನಿರ್ವಹಿಸಿರುವುದು ಈಗ ಉಂಟಾಗಿರುವ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಚಾರ ಅಸ್ತವ್ಯಸ್ತ: ಧಾರಾಕಾರ ಮಳೆಗೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ತೆರಳುವ ಮಾರ್ಗದಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಯಿತು.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಂಡೆಕಲ್ಲು ಹಾಗೂ ಮಣ್ಣು ಕುಸಿದು ರಸ್ತೆ ಬಂದ್‌ ಆಯಿತು. ಇದರಿಂದ ಬೆಳಿಗ್ಗೆ 8ಗಂಟೆಯವರೆಗೂ ವಾಹನಗಳ ಸಂಚಾರ ಸ್ಥಗಿತಗೊಡಿತ್ತು. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲಿಯೇ ಕಾಯುವಂತಾಯಿತು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಪುದುಚೇರಿ ಸ್ವಾಮಿ ವಿವೇಕಾನಂದ ಬಾಲಕಿಯರ ಶಾಲೆಯಿಂದ ಪ್ರವಾಸಕ್ಕಾಗಿ ಬೆಟ್ಟಕ್ಕೆ ಬಂದಿದ್ದ ವಿದ್ಯಾರ್ಥಿನಿಯರು ಪರದಾಡುವಂತಾಯಿತು.

ಮಲೆ ಮಹದೇಶ್ವರ ಬೆಟ್ಟ ಪೋಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಷಣ್ಮುಗವರ್ಮ ಹಾಗೂ ಪಾಲಾರ್ ಅರಣ್ಯ ವಲಯ ಅಧಿಕಾರಿ ಸದಾಶಿವಂ ನೇತೃತ್ವದಲ್ಲಿ ಜೆಸಿಬಿ ಸಹಾಯದಿಂದ ಕಲ್ಲು, ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ದೇವಸ್ಥಾನದ ಸುತ್ತಮುತ್ತ ನೀರಿನ ಪ್ರದೇಶಕ್ಕೆ ಭಕ್ತರು ತೆರಳದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ನಡೆಸಿದರು.

***

ಜಿಲ್ಲೆಯಾದ್ಯಂತ ವರುಣನ ಆರ್ಭಟ

ಚಾಮರಾಜನಗರ: ಜಿಲ್ಲೆಯಾದ್ಯಂತ ಹಿಂಗಾರಿನ ಅಬ್ಬರ ಜೋರಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ರಾತ್ರಿ 10.30ರ ಸುಮಾರಿಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಶುರುವಾದ ವರ್ಷಧಾರೆ ಬೆಳಿಗ್ಗೆ 7.30ರವರೆಗೂ ಸುರಿಯಿತು.

ಸಣ್ಣ ವಿರಾಮವನ್ನೂ ನೀಡದೆ ನಿರಂತರವಾಗಿ ಸುರಿದ ಮಳೆಯಿಂದ ಹಲವೆಡೆ ರಸ್ತೆಗಳು ಜಲಾವೃತವಾದವು. ಕಿತ್ತುಹೋಗಿರುವ ಮತ್ತು ಕೆಸರಿನಿಂದ ಕೂಡಿರುವ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದರು. ಚಾಮರಾಜನಗರ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅಧಿಕ ಮಳೆಯಾಗಿದೆ.

ಕೆಲ ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು.

ಚಾಮರಾಜನಗರ ತಾಲ್ಲೂಕಿನ ಉಡಿಗಾಲದಲ್ಲಿ 12 ಸೆಂ.ಮೀ. ಮಳೆ ದಾಖಲಾಗಿದೆ. ಹೆಗ್ಗೋಠಾರಾದಲ್ಲಿ 10 ಸೆಂ.ಮೀ., ಕೊತ್ತಲವಾಡಿಯಲ್ಲಿ 9.5 ಸೆಂ.ಮೀ., ಅಟ್ಟುಗೂಳಿಪುರ 9 ಸೆಂ.ಮೀ., ಮಲೆಮಹದೇಶ್ವರ ಬೆಟ್ಟ, ಗೋಪಿನಾಥಂ, ಅಗರ, ಅರಕಲವಾಡಿ, ಮಾಲಯ್ಯನಪುರಗಳಲ್ಲಿ ತಲಾ 8 ಸೆಂ.ಮೀ., ಹೂಗ್ಯಂನಲ್ಲಿ 7 ಸೆಂ.ಮೀ., ಧನಕೆರೆ, ಮಾರ್ಟಳ್ಳಿ ತಲಾ 6 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT