ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.20ರಿಂದ ದೆಹಲಿಯಲ್ಲಿ ಬೃಹತ್‌ ರೈತರ ಹೋರಾಟ

Last Updated 12 ಅಕ್ಟೋಬರ್ 2017, 9:03 IST
ಅಕ್ಷರ ಗಾತ್ರ

ದಾವಣಗೆರೆ: ರೈತರ ಸಾಲಮನ್ನಾ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ನ.20ರಿಂದ ಒಂದು ತಿಂಗಳ ಕಾಲ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೆ.ಎಸ್‌.ಪುಟ್ಟಣ್ಣಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ’176 ಸಂಘಟನೆಗಳು ಒಟ್ಟಾಗಿ ಕಿಸಾನ್ ಸಂಸತ್ತು ಹೋರಾಟ ಹಮ್ಮಿಕೊಂಡಿವೆ. ಸುಮಾರು 10ರಿಂದ15 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ನ.20.21ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದಿಂದ ಅಂದಾಜು 5 ಸಾವಿರ ರೈತರು ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಿಂದ ಭಾಗವಹಿಸುವ ರೈತರು ಪ್ರಯಾಣಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ದೆಹಲಿಯಲ್ಲಿ ವಸತಿ ಹಾಗೂ ತಂಗಲು ವ್ಯವಸ್ಥೆ ಮಾಡಲಾಗುವುದು. ‌‌ಕೃಷಿ ಕ್ಷೇತ್ರದ ಬಿಕ್ಕಟ್ಟು, ಪರಿಹಾರ, ರೈತ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ, ಸಂವಾದಗಳು ನಡೆಯಲಿದ್ದು, ರೈತರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರು ಕೃಷಿಗಾಗಿ ಪಡೆದಿದ್ದಾರೆಯೇ ಹೊರತು ವೈಯಕ್ತಿಕವಾಗಿ ಅಲ್ಲ. ದೇಶದ ಆಹಾರ ಭದ್ರತೆಗೆ ಪಡೆದ ಸಾಲವನ್ನು ರೈತರ ತಲೆಗೆ ಕಟ್ಟುವುದು ಸರಿಯಲ್ಲ. ಸರ್ಕಾರಗಳು ಅನ್ನದಾತರನ್ನು ಭಿಕ್ಷೆಬೇಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಅಂಕಿಅಂಶಗಳ ಪ್ರಕಾರವೇ ದೇಶದಲ್ಲಿ 3.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ 7 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಎಸ್‌ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರೆ ಪ್ರಕರಣವನ್ನು ಸಿಬಿಐಗೆ ವಹಿಸುವ ಸರ್ಕಾರಗಳು ರೈತರು ಮೃತಪಟ್ಟಾಗ ಸಾವಿಗೆ ನಿಖರ ಕಾರಣ ತಿಳಿಯಲು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಪಂಚದ ಕೃಷಿ ಹಾಗೂ ಆರ್ಥಿಕ ನೀತಿಯ ಬಗ್ಗೆ ಸಂಶೋಧನೆ ಮಾಡಿದ್ದ ಸ್ವಾಮಿನಾಥನ್‌ ಆಯೋಗದ ವರದಿಯನ್ನೇ ಸರ್ಕಾರ ಮೂಲೆಗುಂಪು ಮಾಡಿದೆ. ವರದಿ ಅನುಷ್ಠಾನಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲೇಬೇಕು ಎಂದರು.

***

‘ರಾಜಕೀಯ ಪ್ರಜ್ಞೆ ಬೆಳೆಯಬೇಕಿದೆ’

ರೈತರು ಚಳವಳಿಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಅವರಲ್ಲೂ ರಾಜಕೀಯ ಪ್ರಜ್ಞೆ ಬೆಳೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘವು ಸ್ವರಾಜ್‌ ಇಂಡಿಯಾ ಪಕ್ಷದಡಿ ರಾಜ್ಯದ ಹಲವೆಡೆ ಸ್ಪರ್ಧಿಸುವ ಚಿಂತನೆ ಇದೆ. ‘ಮತದಾನ ಪ್ರಸ್ತುತ ಮತಧನ’ವಾಗಿದೆ. ಆದರೂ ರೈತಸಂಘ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ ಎಂದು ಪುಟ್ಟಣ್ಣಯ್ಯ ಹೇಳಿದರು.

ಪ್ರಸ್ತುತ ಯುವ ಸಮುದಾಯ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮಗ್ನವಾಗಿದೆ. ಇವರನ್ನು ರೈತ ಹೋರಾಟಗಳತ್ತ ಸೆಳೆಯಲು ಆದ್ಯತೆ ನೀಡಲಾಗುವುದು. ಮಹಿಳಾ ಸಂಘಟನೆಗೂ ಒತ್ತು ನೀಡಲಾಗುವುದು ಎಂದರು.

***

ಶಿವಮೊಗ್ಗದಲ್ಲಿ ಸುಂದರೇಶ್‌ ಸ್ಮರಣೆ

ಡಿಸೆಂಬರ್ 21ಕ್ಕೆ ರೈತ ಹೋರಾಟಗಾರ ಎನ್‌.ಡಿ.ಸುಂದರೇಶ್‌ ಮೃತಪಟ್ಟು 25ವರ್ಷಗಳು ತುಂಬಲಿವೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಸುಂದರೇಶ್ ಸ್ಮರಣೆ ಹಮ್ಮಿಕೊಳ್ಳಲಾಗುವುದು. ಈ ಬಾರಿ ಅವರ ಹೆಸರಿನಲ್ಲಿ ಕಾಯಕ ಪ್ರಶಸ್ತಿ ನೀಡುವ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡುವ ಚಿಂತನೆಯೂ ಇದೆ ಎಂದು ಪುಟ್ಟಣ್ಣಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT