ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಬಳಿ ಕೇಂದ್ರ ಘೋಷಣೆಗೆ ಆಗ್ರಹ

ಗಜೇಂದ್ರಗಡ: ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗೆ ಮನವಿ
Last Updated 12 ಅಕ್ಟೋಬರ್ 2017, 9:22 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ ನಾಡಕಚೇರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ವೀರಣ್ಣ ಸೊನ್ನದ ನೇತೃತ್ವದಲ್ಲಿ ಬುಧವಾರ ಪಟ್ಟಣದ ವಿಶೇಷ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವೀರಣ್ಣ ಸೊನ್ನದ ಮಾತನಾಡಿ, ಗಜೇಂದ್ರಗಡ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ಕೆಲವೇ ತಿಂಗಳಲ್ಲಿ ವಿವಿಧ ಇಲಾಖೆ ಕಚೇರಿಗಳು ಇಲ್ಲಿ ಕಾರ್ಯ ನಿರ್ವಹಣೆ ಆರಂಭಿಸಲಿವೆ. ಪಟ್ಟಣದಲ್ಲಿ ಈಗಾಗಲೇ ವಿಶೇಷ ತಹಶೀಲ್ದಾರ್ ಮತ್ತು ಉಪನೋಂದಣಿ ಅಧಿಕಾರಿ ಕಚೇರಿ ಇದ್ದು ನಾಡಕಚೇರಿ ಮಾತ್ರ ಇಲ್ಲದಾಗಿದೆ. ಈ ಕಾರಣ ಸುತ್ತಲಿನ ಹಳ್ಳಿಗರು, ವಿದ್ಯಾರ್ಥಿಗಳು ವಿವಿಧ ಪ್ರಮಾಣಪತ್ರಗಳನ್ನು ಪಡೆಯಲು ಸ್ಥಳೀಯ ನೆಮ್ಮದಿ ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಿ ನಂತರ ಅರ್ಜಿಗಳನ್ನು ನರೇಗಲ್‌ಗೆ ಕಳುಹಿಸಿ ಅಲ್ಲಿ ಅನುಮೋದನೆಗೊಂಡ ನಂತರ ಪ್ರಮಾಣಪತ್ರ ಪಡೆಯುವ ಪರಿಪಾಠವಿದೆ. ಇದರಿಂದ ವಿದ್ಯಾರ್ಥಿಗಳ, ಹಳ್ಳಿಗರು ನೆಮ್ಮದಿ ಕೇಂದ್ರಕ್ಕೆ ಅಲೆದಾಡಬೇಕಿದೆ ಎಂದು ಹೇಳಿದರು.

ಇದಲ್ಲದೇ ಗಜೇಂದ್ರಗಡ ಗದಗ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, 80 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಪಟ್ಟಣದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕುಗಳು ಇದ್ದು, ನೇಕಾರಿಕೆ ಬಹು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಹೀಗಾಗಿ, ಪಟ್ಟಣವನ್ನು ತಾಲ್ಲೂಕು ಕೇಂದ್ರದ ಜತೆ ಹೋಬಳಿ ಕೇಂದ್ರವನ್ನಾಗಿಯೂ ಘೋಷಿಸಿ, ನಾಡ ಕಚೇರಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿದರು. ವಿಶೇಷ ತಹಶೀಲ್ದಾರ್ ಶಿವಕುಮಾರ ವಸ್ತ್ರದ ಮನವಿ ಸ್ವೀಕರಿಸಿ ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಹೇಳಿದರು. ಈ ವೇಳೆ ಬಾಲು ರಾಠೋಡ, ಹಸನ ತಟಗಾರ, ಚತ್ರಪ್ಪ ರಾಠೋಡ, ಕರಿದುರಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT