ಒತ್ತುವರಿ ಜಮೀನು ತೆರವುಗೊಳಿಸಲು ಆಗ್ರಹ

ಶುಕ್ರವಾರ, ಜೂನ್ 21, 2019
22 °C

ಒತ್ತುವರಿ ಜಮೀನು ತೆರವುಗೊಳಿಸಲು ಆಗ್ರಹ

Published:
Updated:

ಬೇಲೂರು: ತಾಲ್ಲೂಕಿನ ಮುಗುಳುವಳ್ಳಿ ಮತ್ತು ಹಾರೋಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಗ್ರಾಮಸ್ಥರ ಉಪಯೋಗಕ್ಕೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿ ಎರಡೂ ಗ್ರಾಮಗಳ ಜನ ಬುಧವಾರ ಜಮೀನಿನ ಬಳಿ ಪ್ರತಿಭಟನೆ ನಡೆಸಿದರು.

ಮುಗುಳುವಳ್ಳಿ ಗ್ರಾಮದ ಸರ್ವೆ ನಂ. 80ರಲ್ಲಿ 8.15 ಎಕರೆ ಮತ್ತು ಹಾರೋಹಳ್ಳಿ ಗ್ರಾಮದ ಸರ್ವೆ ನಂ. 15ರಲ್ಲಿರುವ 5.33 ಎಕರೆ ಜಮೀನನ್ನು ಹೊಸಳ್ಳಿ ರಾಜು (ಜಿ.ಪಂ. ಮಾಜಿ ಅಧ್ಯಕ್ಷೆ ಕಾಮಾಕ್ಷಿರಾಜು ಪತಿ) ಎಂಬುವವರು ಒತ್ತುವರಿ ಮಾಡಿದ್ದಾರೆ. ಇದನ್ನು ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡಬೇಕೆಂದು ತಹಶೀಲ್ದಾರ್‌ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಜಮೀನನ್ನು ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಒತ್ತುವರಿ ಜಮೀನು ತೆರವುಗೊಳಿಸಲು ವಿಫಲವಾಗಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸ್ಥಳಕ್ಕೆ ತಹಶೀಲ್ದಾರ್‌ ಬಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಮುಗುಳುವಳ್ಳಿ ಗ್ರಾಮದ ಆನಂದ್‌ ‘ಮುಗುಳುವಳ್ಳಿ ಮತ್ತು ಹಾರೋಹಳ್ಳಿ ಗ್ರಾಮದಲ್ಲಿ ಎಲ್ಲ ಜಾತಿಗೆ ಸೇರಿದ ಬಡವರು ವಾಸವಾಗಿದ್ದಾರೆ. ಕೆಲವರಿಗೆ ಜಮೀನು ಇಲ್ಲವಾಗಿದೆ. ಜಾನುವಾರುಗಳಿಗೆ ಮೇಯಲು ಜಮೀನು ಇಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಗಮನಹರಿಸಿ ಜಮೀನು ತೆರವು ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಹಮ್ಮದ್‌ ಶಫಿ, ಚನ್ನಯ್ಯ, ದಾಸಯ್ಯ, ಲತೇಶ್‌, ಹೇಮಾವತಿ, ರತ್ನಾ, ಪುಟ್ಟಮ್ಮ, ಪಾಲಾಕ್ಷ, ದೊಡ್ಡಯ್ಯ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry