ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅಭಿವೃದ್ಧಿ ವಿರೋಧಿಯಲ್ಲ; ಸಚಿವ ಮಂಜು

Last Updated 12 ಅಕ್ಟೋಬರ್ 2017, 9:52 IST
ಅಕ್ಷರ ಗಾತ್ರ

ಕೊಣನೂರು: ‘ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಕಟ್ಟೇಪುರ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ನಾನು ಅಧಿಕಾರಿಗಳ ಮೂಲಕ ಅಡ್ಡಗಾಲು ಹಾಕುತ್ತಿದ್ದೇನೆ ಎಂಬ ಆರೋಪಗಳು ಕೇಳಿರುತ್ತಿವೆ. ಇದರಲ್ಲಿ ಹುರುಳಿಲ್ಲ. ನಾನು ಅಭಿವೃದ್ಧಿ ವಿರೋಧಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದರು.

ಕಟ್ಟೇಪುರ ಗ್ರಾಮದಲ್ಲಿ ಮಂಗಳವಾರ ಮಲ್ಲರಾಜಪಟ್ಟಣದಿಂದ ಕಟ್ಟೇಪುರದ 4.5 ಕಿ.ಮೀ.ವರೆಗೆ ಹಾಗೂ ಕಟ್ಟೇಪುರದಿಂದ - ಮಾದಾಪುರವರೆಗಿನ 6 ಕಿ.ಮೀ.ವರೆಗೆ ತಲಾ ₹ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ತಾಲ್ಲೂಕು ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಿಗೆ ನಾನು ತಡೆ ಹಾಕಿದ್ದರೆ ಅಂತಹ ಇಲಾಖೆ ಕಾಮಗಾರಿಗಳ ಪಟ್ಟಿ ನೀಡಿದರೆ, ಸಹಿ ಹಾಕಿ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುತ್ತೇನೆ. ಆದರೆ, ಎಚ್.ಡಿ. ದೇವೇಗೌಡರು ಗ್ರಾಮಗಳ ಅಭಿವೃದ್ಧಿ ಕೆಲಸಗಳಿಗೆ ಯಾವ್ಯಾವ ಇಲಾಖೆಯಿಂದ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು’ ಎಂದು ಸವಾಲು ಹಾಕಿದರು.

‘ಸರ್ಕಾರ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮುಖೇನ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆದರೆ, 3 ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಇಲ್ಲಿಯವರೆಗೆ ಸುಮ್ಮನೆ ಕೂತು ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಕಡೆಗಳಲ್ಲಿಯೂ ನಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರು ಶಾಸಕರಾಗಿದ್ದಾಗ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಮಾಡದೇ ನಮ್ಮ ಸರ್ಕಾರದ ಕಾರ್ಯಕ್ರಮ ಮತ್ತು ನನ್ನ ಇಲಾಖೆಯ ಬಗ್ಗೆ ಮಾತಾನಾಡುವುದು ನಾಚಿಕೆಗೇಡು’ ಎಂದರು.

ಕಾರ್ಯಕ್ರಮದಲ್ಲಿ ಹಾರಂಗಿ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ, ರಾಜೀವ್‌ ಗಾಂಧಿ ವಸತಿ ನಿಗಮದ ನಿರ್ದೇಶಕ ಭೈರೇಗೌಡ, ಮಗ್ಗೆ ರಾಜೇಗೌಡ, ಪಿ.ಎಲ್.ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರಘುನಂದನ್, ಮುಖಂಡರಾದ ಮಂಜೇಗೌಡ, ಬೊಮ್ಮನಹಳ್ಳಿ ಕೃಷ್ಣ, ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT