ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ಬೆಳೆಹಾನಿ: ಜಂಟಿ ಸಮೀಕ್ಷೆ

ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ವಿಳಂಬ: ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ತರಾಟೆ
Last Updated 12 ಅಕ್ಟೋಬರ್ 2017, 10:36 IST
ಅಕ್ಷರ ಗಾತ್ರ

ಕಲಬುರ್ಗಿ: ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿಯಾಗಿದ್ದು, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳನ್ನೊಳಗೊಂಡ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾ ಆಡಳಿತ ನಿರ್ಧರಿಸಿದೆ.

ಬುಧವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿಯ ತಿಂಗಳ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶ ಜಿಲಾನಿ ಮೊಕಾಶಿ, ‘ಮಳೆಯಿಂದ ಚಿತ್ತಾಪುರ, ಚಿಂಚೋಳಿ ತಾಲ್ಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ. ಜಂಟಿ ಸಮೀಕ್ಷೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಕೂಡಲೇ ಸಮೀಕ್ಷೆ ಆರಂಭಿಸುತ್ತೇವೆ’ ಎಂದರು.

‘ಕಡಲೆ ಮತ್ತಿತರ ಬೆಳೆ ಹಾನಿಯಾಗಿದೆ. ಹೊಸದಾಗಿ ಬಿತ್ತನೆ ಮಾಡಲು ಇಲಾಖೆಯಲ್ಲಿ ಬೀಜದ ದಾಸ್ತಾನು ಇದೆ’ ಎಂದು ಹೇಳಿದರು.

ತರಾಟೆಗೆ: ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಜೆಸ್ಕಾಂನೊಂದಿಗೆ ಸಮನ್ವಯ ಸಾಧಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ವಿಷಯದಲ್ಲಿ ತಮ್ಮ ಸೂಚನೆ ಪಾಲಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌  ಅವರನ್ನು ತರಾಟೆಗೆ ತೆಗೆದುಕೊಂಡರು.

ಇದೇ ವಿಷಯವಾಗಿ ಈ ಅಧಿಕಾರಿ ಮತ್ತು ಜೆಸ್ಕಾಂ ಅಧಿಕಾರಿ ಮಧ್ಯೆ ಆರೋಪ–ಪ್ರತ್ಯಾರೋಪವೂ ನಡೆಯಿತು. ‘ಸಂಬಂಧಿಸಿದ ಅಧಿಕಾರಿಗಳು ಸಭೆ ನಡೆಸಿ, ಕುಡಿಯುವ ನೀರಿನ ಯೋಜನೆಗಳಿಗೆ ತುರ್ತಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು’ ಎಂದು ಸಿಇಒ ತಾಕೀತು ಮಾಡಿದರು.

‘ಕೊಳವೆಬಾವಿ ಕೊರೆಯುವಲ್ಲಿ ಅಕ್ರಮ ನಡೆದಿದೆ. ನಿರ್ದಿಷ್ಟ ಆಳ ಕೊರೆದಿಲ್ಲ. ಸ್ಥಳ ಪರಿಶೀಲನೆ ನಡೆಸಿ ಬಿಲ್‌ ಪಾವತಿಸುತ್ತೇವೆ’ ಎಂದು ಅಧಿಕಾರಿ ಹೇಳಿದರು.

ಗುಣಮಟ್ಟದ ವಿದ್ಯುತ್‌ನ್ನು ಸಮರ್ಪಕವಾಗಿ ಪೂರೈಸುವಂತೆ ಅಧ್ಯಕ್ಷೆ ಸುವರ್ಣಾ ಮಲಾಜಿ ಸೂಚಿಸಿದರೆ, ‘ನಿರಂತರ ಜ್ಯೋತಿ ಹೆಸರಿಗಷ್ಟೇ, ಅಲ್ಲಿ ವಿದ್ಯುತ್ತೇ ಇರಲ್ಲ’ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ ಆಕ್ಷೇಪಿಸಿದರು.

‘ಜಿಲ್ಲೆಯಲ್ಲಿ ಈ ವರೆಗೆ 768 ಜನರಲ್ಲಿ ಡೆಂಗಿ ದೃಢಪಟ್ಟಿದ್ದು, ಈ ರೋಗ ಈಗ ಇಳಿಮುಖವಾಗುತ್ತಿದೆ’ ಎಂದು ಆರೋಗ್ಯ ಅಧಿಕಾರಿ ತಿಳಿಸಿದರು.

‘1.32 ಲಕ್ಷ ಅನಕ್ಷರಸ್ಥರನ್ನು ಗುರುತಿಸಿದ್ದು, 14 ಕಲಿಕಾ ಕೇಂದ್ರಗಳನ್ನು ಶೀಘ್ರ ಆರಂಭಿಸುವ ಮೂಲಕ ಅವರನ್ನು ಸಾಕ್ಷರರನ್ನಾಗಿಸಲಾಗುವುದು’ ಎಂದು ವಯಸ್ಕರ ಶಿಕ್ಷಣಾಧಿಕಾರಿ ತಿಳಿಸಿದರು.

‘ಶಾಸಕರ ನೇತೃತ್ವದ ಕಾರ್ಯಪಡೆ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ನಾನು ತಕರಾರು ಸಲ್ಲಿಸಿದ್ದರೂ ನೀವು ಆ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದೀರಿ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ ಅವರು ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಅವರನ್ನು ತರಾಟೆಗೆ ತೆಗೆದುಕೊಂಡರು.

ವರದಿಗೆ ಸೂಚನೆ: ‘ಅಫಜಲಪುರ ತಾಲ್ಲೂಕು ಭೈರಾಮಡಗಿ– ಗೊಬ್ಬೂರ ಮಧ್ಯೆ ಮೇ ತಿಂಗಳಲ್ಲಿ ನಿರ್ಮಿಸಿದ್ದ ರಸ್ತೆ ಕಳಪೆಯಾಗಿದ್ದು, ಎರಡೇ ತಿಂಗಳಲ್ಲಿ ಸಂಪೂರ್ಣ ಕಿತ್ತು ಹೋಗಿದೆ. ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಉಪಾಧ್ಯಕ್ಷೆ ಶೋಭಾ ಶಿರಸಗಿ ಅವರು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಶರಣಪ್ಪ ಅವರಿಗೆ ಸೂಚಿಸಿದರು.

ಗುತ್ತಿಗೆಯಲ್ಲಿ ಮೀಸಲಾತಿ ಕಡ್ಡಾಯ:  ಯಾವುದೇ ಇಲಾಖೆ ಟೆಂಡರ್‌ ಮೂಲಕ ಕೈಗೊಳ್ಳುವ ₹50 ಲಕ್ಷಕ್ಕಿಂತ ಕಡಿಮೆ ಮೊತ್ತದ ಸಿವಿಲ್‌ ಕಾಮಗಾರಿಗಳ ನೀಡಿಕೆಯಲ್ಲಿ ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಗೆ ಶೇ 17.1 ಹಾಗೂ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಶೇ 6.9ರಷ್ಟು ಮೀಸಲಾತಿ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

‘ಈ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮೀಸಲಾತಿ ಹೊರತಾಗಿಯೂ ಈ ವರ್ಗದ ಗುತ್ತಿಗೆದಾರರಿಗೆ ಇತರೆ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ನಿಮಗೆ ಮೀಸಲಿಟ್ಟ ಕಾಮಗಾರಿಗಳಿಗೆ ಮಾತ್ರ ನೀವು ಅರ್ಹರು ಎಂದು ಅವರಿಗೆ ತಪ್ಪು ಮಾಹಿತಿ ನೀಡಬೇಡಿ’ ಎಂದು ಸಿಇಒ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೇಳೆ ಪೂರೈಕೆ ಸ್ಥಗಿತ: ಬಿಸಿಯೂಟಕ್ಕೆ ಕಳೆದ ತಿಂಗಳು ಬೇಳೆ ಪೂರೈಕೆಯಾಗಿಲ್ಲ. ಬೇಳೆ ದರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಬೇಳೆ ಪೂರೈಸಿಲ್ಲ. ಹಿಂದೆ ದಾಸ್ತಾನಿದ್ದ ಬೇಳೆಯಿಂದ ಇನ್ನು ಕೆಲವೆಡೆ ಟೊಮೆಟೊ ಬಳಸಿ ಸಾಂಬಾರ್‌ ತಯಾರಿಸಲಾಗಿದೆ. ಈ ತಿಂಗಳು ಬೇಳೆ ಪೂರೈಕೆಯಾಗಲಿದೆ’ ಎಂದು ಅಧಿಕಾರಿಗಳು ಹೇಳಿದರು.

ಉಪಾಧ್ಯಕ್ಷೆ ಶೋಭಾ ಶಿರಸಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಹಿರೇಮಠ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT