ಹುಲಿ– ಮಾನವ ಸಂಘರ್ಷ; ಇನ್ನೂ ಕಗ್ಗಂಟು

ಗುರುವಾರ , ಜೂನ್ 27, 2019
30 °C
ಹುಲಿ–ಹುಲಿಗಳ ನಡುವಣ ಸಂಘರ್ಷ, ಆಹಾರ ಅರಸಿ ಬಂದಿರುವ ಸಾಧ್ಯತೆ ಶಂಕೆ

ಹುಲಿ– ಮಾನವ ಸಂಘರ್ಷ; ಇನ್ನೂ ಕಗ್ಗಂಟು

Published:
Updated:
ಹುಲಿ– ಮಾನವ ಸಂಘರ್ಷ; ಇನ್ನೂ ಕಗ್ಗಂಟು

ಮೈಸೂರು: ಜಿಲ್ಲೆಯಲ್ಲಿ ಮತ್ತೆ ಹುಲಿ–ಮಾನವ ಸಂಘರ್ಷ ತಲೆದೋರಿದೆ. ಈ ವರ್ಷದ ಆರಂಭದಲ್ಲಿ ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಭಾಗದಲ್ಲಿ ಹುಲಿಗಳ ಸರಣಿ ಸಾವು ಆತಂಕ ಸೃಷ್ಟಿಸಿತ್ತು. ಇದೀಗ ಒಂದು ದಿನದ ಅಂತರದಲ್ಲಿ ಅರಣ್ಯ ವ್ಯಾಪ್ತಿಯಿಂದ ಹೊರಗೆ ಎರಡು ಹುಲಿಗಳು ಸೆರೆ ಸಿಕ್ಕುವ ಮೂಲಕ ಮತ್ತೆ ದಿಗಿಲು ಮೂಡಿಸಿದೆ.

ಪ್ರಾಣಹಾನಿ ಉಂಟು ಮಾಡದೆ ಹೋದರೂ ಮಹಿಳೆಯೊಬ್ಬರನ್ನು ಗಾಯಗೊಳಿಸಿದೆ. ಹಸುವೊಂದನ್ನು ತಿಂದಿರುವುದು ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ. ಅಂತರಸಂತೆ ಹಾಗೂ ದೊಡ್ಡ ಬರಗಿ ಗ್ರಾಮಗಳಲ್ಲಿ ಒಂಟಿಯಾಗಿ ಹೊಲ, ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.

ಸಂಘರ್ಷ ಏಕೆ?: ಈ ಭಾಗದಲ್ಲಿ ಹುಲಿ ಸಂಖ್ಯೆ ಹೆಚ್ಚಳವೇ ಹುಲಿ–ಮಾನವ ಸಂಘರ್ಷಕ್ಕೆ ಕಾರಣ ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ. ಕಳೆದ ನವೆಂಬರ್‌– ಡಿಸೆಂಬರ್‌ನಲ್ಲಿ ನಡೆದ 45 ದಿನಗಳ ಗಣತಿಯಲ್ಲಿ ನಾಗರಹೊಳೆ ಅರಣ್ಯದಲ್ಲಿ 8 ಹುಲಿ ಹೆಚ್ಚಾಗಿರುವುದು ಕಂಡು ಬಂದಿತ್ತು. 2015–16ರಲ್ಲಿ 81 ಹುಲಿಗಳಿದ್ದವು. 2016–17ರಲ್ಲಿ 91 ಹುಲಿಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

ನಾಗರಹೊಳೆ ವ್ಯಾಪ್ತಿಯಲ್ಲಿ 2014–15ರಲ್ಲಿ ಪ್ರತಿ 100 ಕಿ.ಮೀ ವ್ಯಾಪ್ತಿಯಲ್ಲಿ 8 ಹುಲಿಗಳು ವಾಸವಾಗಿದ್ದವು. 2015–16ರಲ್ಲಿ 10 ಮತ್ತು 2016–17ರಲ್ಲಿ 8 ಹುಲಿ ಹಾಗೂ 1ರಿಂದ 2 ವರ್ಷದ ಒಳಗಿನ 27 ಮರಿಗಳು ಇವೆ. ಇವುಗಳ ವಾಸಸ್ಥಳದ ಪರಿಮಿತಿಯೂ ವೃದ್ಧಿಯಾಗಿದೆ.

ಹುಲಿಗಳಿಗೆ ನಾಗರಹೊಳೆ ಉತ್ತಮ ವಾಸಸ್ಥಳವಾಗಿದೆ. ಸಂತತಿ ವೃದ್ಧಿಯಾಗಲು ಆಹಾರ ಭದ್ರತೆಯೂ ಮುಖ್ಯ. ಅರಣ್ಯದಲ್ಲಿ ಜಿಂಕೆ, ಕಡವೆ ಮತ್ತು ಕಾಡು ಎಮ್ಮೆ ಸಂತತಿ ಹೆಚ್ಚಾಗಿದ್ದು, ಹುಲಿಗಳಿಗೆ ಉತ್ತಮ ಆಹಾರ ಸಿಗುತ್ತಿವೆ. ಇದರಿಂದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ವ್ಯಾಪ್ತಿ ಪ್ರದೇಶದ ಸಂಘರ್ಷ ಕಾರಣವಲ್ಲ: ವಯಸ್ಕ ಗಂಡು ಹುಲಿಗಳ ಮಧ್ಯೆ ವ್ಯಾಪ್ತಿ ಪ್ರದೇಶಕ್ಕಾಗಿ ಕಿತ್ತಾಟ ನಡೆಯುತ್ತದೆ. ಹಲವು ಸಲ ನಡೆಯುವ ಕಾಳಗದ ವೇಳೆ ದುರ್ಬಲ ಗಂಡು ಹುಲಿ ಗಾಯಗೊಂಡು ಸೋತು ಕಾಡಿನಿಂದ ನಿರ್ಗಮಿಸುತ್ತದೆ. ಆಗ ಅದು ಅನಿವಾರ್ಯವಾಗಿ ಕಾಡಂಚಿನ ಗ್ರಾಮಗಳತ್ತ ಬರುತ್ತದೆ. ಕಾಡಿನೊಳಗೆ ಹೇರಳವಾಗಿ ಸಿಗುವ ಜಿಂಕೆ, ಕಡವೆಗಳು ಹುಲಿಗೆ ಗ್ರಾಮಗಳಲ್ಲಿ ಸಿಕ್ಕುವುದಿಲ್ಲ. ಹಸಿವಿನಿಂದ ಬಳಲುವ ಅದು ಆಹಾರಕ್ಕಾಗಿ ಜಾನುವಾರುಗಳನ್ನು ಹಾಗೂ ಕೆಲವು ಸಲ ಮನುಷ್ಯರನ್ನೂ ಕೊಂದು ತಿನ್ನುತ್ತದೆ. ಆದರೆ, ಸಿಕ್ಕಿರುವ ಎರಡೂ ಹುಲಿಗಳು ಹೆಣ್ಣು. ಹೀಗಾಗಿ, ವ್ಯಾಪ್ತಿ ಸಂಘರ್ಷ ಸಾಧ್ಯತೆ ಕ್ಷೀಣ.

ಮತ್ತೇನು ಕಾರಣ?: ದೊಡ್ಡಬರಗಿಯಲ್ಲಿ ಸಿಕ್ಕ ಹುಲಿ ಗಾಯಗೊಂಡಿತ್ತು. ಬಹುಶಃ ಇದನ್ನು ಕೂಡಲು ಗಂಡು ಹುಲಿ ಯತ್ನಿಸಿದ್ದು, ಅದರೊಂದಿಗೆ ನಡೆದ ಕಾಳಗದಲ್ಲಿ ಗಾಯಗೊಂಡು ನಾಡಿನತ್ತ ಬಂದಿರಬಹುದು ಎಂದು ‍ಪಶುವೈದ್ಯರು ಶಂಕಿಸಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಹುಲಿಗಳು ನವೆಂಬರ್ ನಿಂದ ಜನವರಿ ಅಂತ್ಯದವರೆಗೆ ಬೆದೆಗೆ ಬರುತ್ತವೆ. ಚಳಿಗಾಲ ಮುಗಿದ ಬಳಿಕ, ಗರ್ಭಿಣಿಯಾಗಿದ್ದಾಗ, ಮರಿ ಹಾಕಿದ ಮೂರು ತಿಂಗಳವರೆಗೂ ಅವು ಗಂಡು ಹುಲಿಯನ್ನು ಕೂಡಲು ಸುತಾರಂ ಒಪ್ಪುವುದಿಲ್ಲ. ಈ ಕಾರಣಕ್ಕಾಗಿ ಗಂಡು ಹುಲಿಯ ಜತೆ ಸಂಘರ್ಷ ಏರ್ಪಟ್ಟು ಅವು ನಾಡಿನತ್ತ ಬಂದಿರಬಹುದು ಎಂಬ ಗುಮಾನಿ ಇದೆ.

ಆಹಾರಕ್ಕಾಗಿ ನಾಡಿನತ್ತ ಬಂದ ಹುಲಿ?: ದೊಡ್ಡ ಬರಗಿಯಲ್ಲಿ ಸಿಕ್ಕಿದ 10 ವರ್ಷ ವಯಸ್ಸಿನ ಹುಲಿ ಹಾಗೂ ಅಂತರಸಂತೆಯಲ್ಲಿ ಸಿಕ್ಕಿದ 9 ವರ್ಷ ವಯಸ್ಸಿನ ಹುಲಿ ಆಹಾರ ಅರಸಿ ನಾಡಿನತ್ತ ಬಂದಿರುವ ಶಂಕೆಯೂ ವ್ಯಕ್ತವಾಗಿದೆ. ಸಾಮಾನ್ಯವಾಗಿ ಹುಲಿಗಳಿಗೆ ವಯಸ್ಸಾಗುತ್ತಿದ್ದಂತೆ ಜಿಂಕೆ, ಕಡವೆಗಳನ್ನು ಬೇಟೆಯಾಡಲು ಅಶಕ್ತವಾಗುತ್ತವೆ. ಅವುಗಳನ್ನು ಬೆನ್ನಟ್ಟುವುದು ಸುಲಭವಲ್ಲ. ಈ ಮೊದಲು ಕಾಡಿಗೆ ಜನರು ಹೆಚ್ಚಾಗಿ ಜಾನುವಾರುಗಳನ್ನು ಮೇಯಲು ಬಿಡುತ್ತಿದ್ದರು. ಆಗ ಒಂದೋ, ಎರಡೋ ಹಸುಗಳನ್ನು ಸುಲಭವಾಗಿ ವಯೋವೃದ್ಧ ಹುಲಿಗಳು ಕಬಳಿಸುತ್ತಿದ್ದವು. ಆದರೆ, ಈಗ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಒಂದೂ ಹಸು ಕಾಡಿನೊಳಗೆ ಹೋಗಲು ಸಾಧ್ಯವಿಲ್ಲ. ಸಿಗುವ ಕಾಡೆಮ್ಮೆ, ಕಾಡುಕೋಣಗಳು ವೃದ್ಧ ಹಾಗೂ ಅಶಕ್ತ ಹುಲಿಗೆ ಸುಲಭವಾಗಿ ದಕ್ಕವುದೂ ಇಲ್ಲ. ಹೀಗಾಗಿ, ಅವು ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ವಲಸೆ ಬಂದಿರಬಹುದಾದ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.

***

ಹುಲಿಗಳ ಹೆಚ್ಚಳ ಹೊಸದೇನಲ್ಲ!

ಹುಲಿಗಳ ಆವಾಸಸ್ಥಾನವಾಗಿ ನಾಗರಹೊಳೆಯು ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ. ಬರಗ ಎಂದರೆ ಹುಲಿ. ಇಲ್ಲಿ ಹೆಚ್ಚಾಗಿ ಹುಲಿಗಳು ಇದ್ದುದ್ದರಿಂದಲೇ ಈ ಊರಿಗೆ ಬರಗಿ ಎಂದು ಹೆಸರಿಡಲಾಗಿದೆ. ಮಲೈ ಮಹದೇಶ್ವರ ಇಲ್ಲಿನ ಅರಣ್ಯದಿಂದಲೇ ಹುಲಿಯನ್ನೇರಿ ಸಂಚಾರಕ್ಕೆ ಹೊರಟಿದ್ದು ಎಂದು ಜನಪದ ಮಹಾಕಾವ್ಯ ಹೇಳುತ್ತದೆ. ಚಿಕ್ಕಮ್ಮದೇವಿ ಬೆಟ್ಟ ಕುರಿತು ಇರುವ ಜನಪದ ಗೀತೆಗಳಲ್ಲಿ ಹುಲಿ ಪ್ರಸ್ತಾಪವೇ ಪ್ರಧಾನವಾಗಿ ಕಂಡು ಬರುತ್ತದೆ. ಹೀಗಾಗಿ, ನಾಗರಹೊಳೆ ಹಾಗೂ ಇದರ ಅಂಚಿನ ಗ್ರಾಮಗಳಲ್ಲಿನ ಜನರಿಗೆ ಹುಲಿಯೊಡನೆಯ ಮುಖಾಮುಖಿ ಹೊಸತೇನೂ ಅಲ್ಲ.

ಹುಲಿಗಳ ವ್ಯಾಪ್ತಿ ಎಷ್ಟು?

ಹುಲಿಗಳ ಸಂಖ್ಯೆ ಹೆಚ್ಚಾದಷ್ಟೂ ಗಂಡು ಹುಲಿಗಳ ಮಧ್ಯೆಯೇ ಸಂಘರ್ಷ ಏರ್ಪಡುತ್ತದೆ. ಪ್ರತಿಯೊಂದು ಹುಲಿಯೂ ತನ್ನದೇ ಆದ ವ್ಯಾಪ್ತಿ ಹೊಂದಿರುತ್ತದೆ. ಒಂದು ಗಂಡು ಹುಲಿ 10 ಚದರ ಕಿ.ಮೀ (2,500 ಎಕರೆ) ವ್ಯಾಪ್ತಿ ಗುರುತಿಸಿಕೊಂಡಿರುತ್ತದೆ. ಹೆಣ್ಣು ಹುಲಿ 5 ಕಿ.ಮೀ ವ್ಯಾಪ್ತಿ ಹೊಂದಿರುತ್ತದೆ. ಮರಿಗಳು ತಾಯಿಯೊಂದಿಗೆ ಬೆಳೆಯುತ್ತವೆ.

***

ಒಂದು ಹುಲಿ ಸ್ಥಿತಿ ಗಂಭೀರ

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸೆರೆ ಹಿಡಿಯಲಾದ ಎರಡೂ ಹುಲಿಗಳನ್ನು ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಚಾಮುಂಡಿ ವನ್ಯಜೀವಿ ಪುನರ್ ವಸತಿ ಕೇಂದ್ರಕ್ಕೆ ಬಿಡಲಾಗಿದೆ. ಇವುಗಳಲ್ಲಿ ದೊಡ್ಡ ಬರಗಿಯಲ್ಲಿ ಸೆರೆ ಹಿಡಿಯಲಾದ ಹುಲಿಯ ಸ್ಥಿತಿ ಗಂಭೀರವಾಗಿದೆ. ಅಂತರಸಂತೆಯಲ್ಲಿ ಸೆರೆ ಹಿಡಿಯಲಾದ ಹುಲಿಯ ಸ್ಥಿತಿ ಸುಧಾರಿಸುತ್ತಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry