ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಎಳೆ ಹೊಸ ಬೆಳೆ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಿನಿಮಾದ ದ್ವಿತೀಯಾರ್ಧವನ್ನು ನಾನು ಮೊದಲು ಬರೆದುಕೊಂಡಿದ್ದೆ. ಚಿತ್ರಕ್ಕೆ ಒಳ್ಳೆಯ ಕ್ಲೈಮ್ಯಾಕ್ಸ್‌ ಕೊಡಲು ಸಾಧ್ಯವಾದರೆ ಮಾತ್ರ ಮೊದಲಾರ್ಧ ಬರೆಯಬೇಕು ಅಂದುಕೊಂಡಿದ್ದೆ.  ಒಳ್ಳೆಯ ಕ್ಲೈಮ್ಯಾಕ್ಸ್‌ ಸಿಕ್ಕಿತು. ಅದಕ್ಕೆ ಆಮೇಲೆ ಪ್ರಥಮಾರ್ಧ ಬರೆದೆ’

–ಹೀಗೆ ತಮ್ಮ ನಿರ್ದೇಶನದ ‘ಸಿತಾರ’ ಬಗ್ಗೆ ಹೇಳಲು ಶುರು ಮಾಡಿದರು ಎ.ಆರ್‌. ಮಸ್ತಾನ್‌.

‘ಸಿತಾರ’ ಸಿನಿಮಾ ಶುರುವಾಗಿದ್ದು ಐದು ವರ್ಷಗಳ ಹಿಂದೆ. ಆದರೆ ಪೂರ್ಣಗೊಂಡಿದ್ದು ಈಗ. ಐದು ವರ್ಷಗಳ ಹಿಂದೆ ಶುರುವಾದ ಸಿನಿಮಾ ನಿರ್ಮಾಪಕರು ತೀರಿಹೋಗಿದ್ದರಿಂದ ನಿಂತಿತ್ತು. ಅದಕ್ಕೆ ಮತ್ತೆ ಮರುಜೀವನ ನೀಡಿದ್ದು ಡಾ.ವಿಜಯ್‌ ಅವರು. ಅವರು ಈ ವಾರ (ಅ.13) ‘ಸಿತಾರ’ವನ್ನು ತೆರೆಗೆ ತರಲು ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.

(ಮಸ್ತಾನ್‌)

‘ಇದು ಅಣ್ಣ–ತಂಗಿ ಸಂಬಂಧದ ಭಾವುಕ ಕಥನವನ್ನು ಒಳಗೊಂಡ ಸಿನಿಮಾ’ ಎನ್ನುತ್ತಾರೆ ಮಸ್ತಾನ್‌. ಈ ಎಳೆಯಿಟ್ಟುಕೊಂಡು ಈಗಾಗಲೇ ಸಾಕಷ್ಟು ಸಿನಿಮಾ ಬಂದಿದೆಯಲ್ಲವೇ ಎಂದು ಪ್ರಶ್ನಿಸಿದರೆ ಅದನ್ನು ಅವರು ಒಪ್ಪಿಕೊಳ್ಳುತ್ತಾರೆ.

‘ಈ ಎಳೆಯನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಕಥೆಯಲ್ಲಿ ಹೊಸತು ಎನ್ನುವುದೇನೂ ಇಲ್ಲ. ಆದರೆ ಅದನ್ನು ಹೇಳುವ ರೀತಿಯಲ್ಲಿ, ಅದನ್ನು ತೆರೆಯ ಮೇಲೆ ಕಟ್ಟಿಕೊಡುವ ಬಗೆಯಲ್ಲಿ ಸಮಕಾಲೀನ ಅಂಶಗಳನ್ನು ಸೇರಿಸಿಕೊಂಡಿದ್ದೇವೆ’ ಎಂಬ ಸಮರ್ಥನೆ ಅವರದು.

‘ಸಾಮಾನ್ಯವಾಗಿ ಮದುವೆ ಯಾಗಿ ಹೋದ ತಂಗಿ ಗಂಡನ ಮನೆಯಲ್ಲಿ ಅನುಭವಿಸುವ ತೊಂದರೆಗಳನ್ನು ಇಟ್ಟುಕೊಂಡು ಹಲವರು ಸಿನಿಮಾ ಮಾಡಿದ್ದಾರೆ. ಆದರೆ ಇದು ಮದುವೆಯಾಗುವ ಮುನ್ನವೇ ತಂಗಿ ಅನುಭವಿಸುವ ಸಂಕಷ್ಟಗಳನ್ನು ಹೇಳುವ ಸಿನಿಮಾ’ ಎಂದು ತಮ್ಮ ಭಿನ್ನತೆಯ ಕುರಿತೂ ಅವರು ಹೇಳುತ್ತಾರೆ.

ನೇಹಾ ಪಾಟೀಲ್‌ ಈ ಚಿತ್ರದ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿತಾರ ಎನ್ನುವುದು ಚಿತ್ರದ ನಾಯಕಿಯ ಹೆಸರೂ ಹೌದು. ಅವಳು ತುಂಬ ಇಷ್ಟಪಡುವ ಸಂಗೀತ ವಾದ್ಯದ ಹೆಸರೂ ಹೌದು. ‘ಮುಗ್ಧ ಹುಡುಗಿಯೊಬ್ಬಳು ಸಿಟಿಗೆ ಹೋಗಿ ಮತ್ತೆ ಊರಿಗೆ ಬಂದಾಗ ಅವಳಲ್ಲಿ ಏನೇನು ಬದಲಾಗಿರುತ್ತದೆ ಎಂಬುದು ಈ ಚಿತ್ರದ ಕಥಾವಸ್ತು. ಇಬ್ಬರು ಅಣ್ಣಂದಿರ ಮುದ್ದಿನ ತಂಗಿಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು ನೇಹಾ.

(ನೀತು)

ನೀತು ಕೂಡ ಈ ಚಿತ್ರದಲ್ಲಿ ಒಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಚ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಮೂಲಕ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆ್ಯನಿಮೇಶನ್‌ಗಳನ್ನು ಬಳಸಿಕೊಂಡು ವಿಭಿನ್ನ ವಾಗಿ ಪ್ರಚಾರ ಮಾಡುವ ಯೋಜನೆಯನ್ನೂ ತಂಡ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT