ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೋರ ಟೋರ’ ಎಂಬ ಕಾಲಯಾನದ ಸಿನಿಮಾ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾಲನ ಎಲ್ಲೆಗಳನ್ನು ಮೀರಿ, ಭೂತಕಾಲಕ್ಕೆ ಹಾಗೂ ಭವಿಷ್ಯತ್ ಕಾಲಕ್ಕೆ ಹೋಗಿಬರುವ ಕಥೆ ಇರುವ ಸಿನಿಮಾವೊಂದು ಶೀಘ್ರದಲ್ಲೇ ತೆರೆಗೆ ಬರಲಿದೆ. ಇದರ ಹೆಸರು ‘ಟೋರ ಟೋರ’.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಬೆಂಗಳೂರಿನಲ್ಲಿ ಈಚೆಗೆ ಸುದ್ದಿಗೋಷ್ಠಿ ಕರೆದಿತ್ತು. ಮೊದಲು ಮಾತು ಆರಂಭಿಸಿದವರು ಚಿತ್ರದ ಕಫ್ತಾನ, ಅಂದರೆ ನಿರ್ದೇಶಕ, ಹರ್ಷ ಗೌಡ ಅವರು. ‘ಈ ಸಿನಿಮಾದ ಪಾತ್ರಗಳು ಕಾಲಯಂತ್ರವನ್ನು (ಟೈಮ್ ಮೆಷಿನ್) ಇಟ್ಟುಕೊಂಡು ಭೂತಕಾಲ ಹಾಗೂ ಭವಿಷ್ಯತ್ ಕಾಲಗಳಿಗೆ ಹೋಗಿ ಬರುತ್ತವೆ’ ಎನ್ನುತ್ತ ಮಾತಿಗೆ ಶುರುವಿಟ್ಟುಕೊಂಡರು.

ಹರ್ಷ ಗೌಡ ಅವರ ಪ್ರಕಾರ, ಕಾಲಯಂತ್ರದ ಪರಿಕಲ್ಪನೆಯ ಸಿನಿಮಾ ಕನ್ನಡ ವೀಕ್ಷಕರಿಗೆ ಹೊಸತು. ‘ರಜಾ ಅವಧಿಯಲ್ಲಿ ಐದು ಜನ ಯುವಕರು ಹಾಗೂ ಇಬ್ಬರು ಯುವತಿಯರಿಗೆ ಕಾಲ ಯಂತ್ರ ಸಿಗುತ್ತದೆ. ಆಗ ಆಗುವ ಘಟನೆಗಳೇ ಈ ಸಿನಿಮಾ ಕಥೆಯ ಹಂದರ’ ಎಂದರು ಹರ್ಷ.

ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ 27 ದಿನಗಳಲ್ಲಿ ನಡೆದಿದೆಯಂತೆ. ‘ಟೈಮ್ ಮೆಷಿನ್ ಬಳಸಿ, ಹಿಂದಿನ ಕಾಲಕ್ಕೂ ಮುಂದಿನ ಕಾಲಕ್ಕೂ ಹೋಗಿಬರುವಂತಹ ಕಥೆಯೇ ನಮ್ಮ ಚಿತ್ರದ ವೈಶಿಷ್ಟ್ಯ’ ಎಂದೂ ಅವರು ಹೇಳಿದರು. ಈ ಸಿನಿಮಾದಲ್ಲಿ ಒಂದು ಹಾಡು ಇದೆ. ಇದಕ್ಕೆ ಸಂಗೀತ ನೀಡಿದವರು ಸಿದ್ಧಾರ್ಥ ಕಾಮತ್.

ಇದು ಒಂದಿಷ್ಟು ತರಲೆ ಹಾಗೂ ಇನ್ನೊಂದಿಷ್ಟು ತಮಾಷೆ ಇರುವ ಸಿನಿಮಾ ಎಂದು ಹೇಳಿದರು ನಟ ಸಿದ್ದು ಮೂಲಿಮನಿ. ಸನತ್, ಮಂಜು ಹೆದ್ದೂರ್, ಪೂಜಾ ರಾಜು ಹಾಗೂ ಇತರರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.

ನಟಿ ಸನಿಹಾ ಯಾದವ್ ಅವರ ಪಾಲಿಗೆ ಇದು ಮೊದಲ ಸಿನಿಮಾವಂತೆ. ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ಇರುವ ಟೋರ ಟೋರದಲ್ಲಿ ಸಿಗುವಂತಹ ಮೋಜು ಈ ಸಿನಿಮಾ ವೀಕ್ಷಿಸುವ ವೇಳೆ ಸಿಗುತ್ತದೆ. ಹಾಗಾಗಿ ಅದರ ಹೆಸರನ್ನೇ ಸಿನಿಮಾಕ್ಕೂ ಇಡಲಾಗಿದೆ ಎಂದರು ಸನಿಹಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT