ಸತತ ಒಂಬತ್ತು ಸೋಲುಗಳ ದಾಟಿ ಗೆದ್ದ ದಿಟ್ಟ

ಮಂಗಳವಾರ, ಜೂನ್ 18, 2019
23 °C

ಸತತ ಒಂಬತ್ತು ಸೋಲುಗಳ ದಾಟಿ ಗೆದ್ದ ದಿಟ್ಟ

Published:
Updated:
ಸತತ ಒಂಬತ್ತು ಸೋಲುಗಳ ದಾಟಿ ಗೆದ್ದ ದಿಟ್ಟ

ಸಾಜಿದ್ ಅಲಿ ಖಾನ್ ಎಂದರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ಸೈಫ್ ಅಲಿ ಖಾನ್ ಎಂದರೆ ಥಟ್ಟನೆ ಹಿಂದಿ ನಟ ಎಂದು ಗೊತ್ತಾಗುತ್ತದೆ.

ಹಿಮಾಚಲ ಪ್ರದೇಶದಲ್ಲಿ ಬೆಚ್ಚಗಿನ ಬಟ್ಟೆ ಹಾಕಿಕೊಂಡು, ದಿ ಲಾರೆನ್ಸ್ ಸ್ಕೂಲ್‌ಗೆ ಕಲಿಯಲು ಹೋಗುತ್ತಿದ್ದ ಹುಡುಗ ಸೈಫ್. ಸಾಜಿದ್ ಎನ್ನುವುದು ಹುಟ್ಟಿದಾಗ ಇಟ್ಟಿದ್ದ ಹೆಸರು. ಅಪ್ಪ ಮನ್ಸೂರ್ ಅಲಿ ಖಾನ್ ಪಟೌಡಿ ಹುಟ್ಟಾ ಶ್ರೀಮಂತ, ಕ್ರಿಕೆಟಿಗ. ಅಮ್ಮ ಶರ್ಮಿಳಾ ಟ್ಯಾಗೋರ್ ಜನಪ್ರಿಯ ನಟಿ. ಎರಡೂ ದೊಡ್ಡ ಗರಿಗಳೇ. ಮೈದಾನದಲ್ಲಿ ಅಪ್ಪ ಕ್ರಿಕೆಟ್ ಅಭ್ಯಾಸ ಮಾಡುವುದನ್ನು ಗಂಟೆಗಟ್ಟಲೆ ನೋಡಿದ ಸೈಫ್‌ಗೆ ತಾನೂ ಹಾಗೆ ಆಗಬೇಕು ಎನಿಸಲಿಲ್ಲ. ಯಾರಾದರೂ ಅಂಕ ಕಡಿಮೆಯಾಯಿತು ಎಂದು ದೂರಿದರೆ, ಮುಂದಿನ ಟೆಸ್ಟ್‌ನಲ್ಲಿ ತರಗತಿಗೇ ಮೊದಲಿಗನಾಗಿ ಸೈ ಎನಿಸಿಕೊಂಡ ದಿನಗಳೂ ಇವೆ. ಆದರೂ ಓದಿನ ವಿಷಯದಲ್ಲಿ ಸ್ಥಿರತೆ ಇರಲಿಲ್ಲ.

ಮಗ ಚೆನ್ನಾಗಿ ಓದಲಿ ಎಂದು ಇಂಗ್ಲೆಂಡ್‌ನ ಹರ್ಟ್ ಫೋರ್ಡ್ ಷೈರ್‌ನ ಲಾಕರ್ಸ್ ಪಾರ್ಕ್ ಸ್ಕೂಲ್‌ಗೆ ಸೇರಿಸಿದರು. ಆ ಪಯಣ ವಿಂಚೆಸ್ಟರ್ ಕಾಲೇಜಿನವರೆಗೆ ಸಾಗಿತು. ಶೈಕ್ಷಣಿಕವಾಗಿ ಸದಾ ಅಸ್ಥಿರನಾಗಿ ಇದ್ದುದರಿಂದಲೇ ಸಹಪಾಠಿಗಳಲ್ಲಿ ಕೆಲವರು ಉನ್ನತ ಅಧ್ಯಯನದ ದಾರಿ ಹಿಡಿದರೂ, ಸೈಫ್ ಮೂಕಪ್ರೇಕ್ಷಕನಂತೆ ಇದ್ದ.

ಬೋರ್ಡಿಂಗ್ ಕಾಲೇಜಿನಲ್ಲಿ ಐಷಾರಾಮವಾಗಿಯೇ ಇದ್ದ ನವಾಬರ ಮಗನಿಗೆ ತನ್ನದೇ ವೃತ್ತಿಬದುಕು ಕಟ್ಟಿಕೊಳ್ಳಬೇಕು ಎನಿಸಿತು. ದೆಹಲಿಯಲ್ಲಿ ಮೊದಲು ಜಾಹೀರಾತು ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ಸ್ನೇಹಿತನೊಬ್ಬ ನಿಲುವು ಚೆನ್ನಾಗಿರುವುದನ್ನು ನೋಡಿ 'ಮಾಡೆಲ್ ಆಗು' ಎಂದು ಸಲಹೆ ಕೊಟ್ಟ. ಗ್ವಾಲಿಯರ್ ಸೂಟಿಂಗ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇ ಚಿತ್ರರಂಗದ ಕೆಲವರ ಕಣ್ಣಿಗೂ ಬಿದ್ದಿದ್ದಾಯಿತು.

ಆನಂದ್ ಮಹೀಂದ್ರೂ ಎಂಬ ನಿರ್ದೇಶಕ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಏಕ್‌ದಂ ನಾಯಕನಾಗುವ ಅವಕಾಶ ಹೀಗೆ ಒದಗಿಬಂದರೆ ಪುಳಕವಾಗದೇ ಇರುವುದೇ; ಅದೂ 21ನೇ ವಯಸ್ಸಿನಲ್ಲಿ. ಕಾರಣಾಂತರಗಳಿಂದ ಆ ಸಿನಿಮಾ ಚಿತ್ರೀಕರಣವೇ ಶುರುವಾಗಲಿಲ್ಲ. ಮನೆಯವರು ಮುಂಬೈ ಸಹವಾಸ ಬೇಕೋ, ಬೇಡವೋ ಯೋಚಿಸುವಂತೆ ಕಿವಿಮಾತು ಹೇಳಿದರು. ತನ್ನಿಷ್ಟದ ವೃತ್ತಿಬದುಕನ್ನು ತಾನೇ ಇಟ್ಟುಕೊಳ್ಳುವ ಸಂಕಲ್ಪ ಮಾಡಿದ್ದಾಗಿತ್ತು. ಅಲ್ಲಾಡಲಿಲ್ಲ.

ರಾಹುಲ್ ರವುಲ್ ಎಂಬ ಇನ್ನೊಬ್ಬ ನಿರ್ದೇಶಕ 'ಬೇಖುದಿ' ಹಿಂದಿ ಸಿನಿಮಾಗೆ ಹೊಸಮುಖಗಳನ್ನು ಹುಡುಕುತ್ತಿದ್ದರು. ಅವರಿಗೆ ಸೈಫ್ ಇಷ್ಟವಾದದ್ದೇ ಅವಕಾಶ ಕೊಟ್ಟರು. ಕಾಜೋಲ್ ಅದರ ನಾಯಕಿ. ಮೊದಲ ಹಂತದ ಚಿತ್ರೀಕರಣ ನಡೆಯಿತು. ನವಾಬರ ಮಗನಿಗೆ ಸಹಜವಾಗಿಯೇ ಗತ್ತು ಇರುತ್ತದಲ್ಲ. ಅದನ್ನು ರಾಹುಲ್ ಅವರಿಗೆ ಜೀರ್ಣಿಸಿಕೊಳ್ಳಲು ಆಗಲಿಲ್ಲ. 'ಹುಡುಗನಿಗೆ ಶಿಸ್ತು ಇಲ್ಲ' ಎಂದು ನಿರ್ಧರಿಸಿದ ಅವರು ಗೇಟ್ ತೋರಿಸಿದರು. ಎರಡನೇ ಅವಕಾಶವೂ ಹೊಳೆಯಲ್ಲಿ ತೊಳೆದ ಹುಣಸೆಯಂತಾಯಿತು. 1991ರಲ್ಲಿ ಎರಡೆರಡು ಭಗ್ನಾವಕಾಶದ ನಂತರ ನಟಿ ಅಮೃತಾ ಸಿಂಗ್ ಪರಿಚಯವಾಯಿತು. ಅದೇ ವರ್ಷ ಅಕ್ಟೋಬರ್ ನಲ್ಲಿ ಇಬ್ಬರಿಗೂ ಮದುವೆ ಆಯಿತು.

ಸೈಫ್ ಮುಂಬೈನಿಂದ ಓಡಲಿಲ್ಲ. 1993ರಲ್ಲಿ ಯಶ್ ಚೋಪ್ರಾ 'ಪರಂಪರಾ' ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅದು ಸಿನಿಪ್ರಿಯರ ಮನ ಗೆಲ್ಲಲಿಲ್ಲ. ಆಮೇಲೆ 'ಯೇ ದಿಲ್ಲಗಿ' ಹಾಗೂ 'ಮೈ ಖಿಲಾಡಿ ತೂ ಅನಾಡಿ' ಚಿತ್ರಗಳು ಯಶಸ್ವಿಯಾದ ನಂತರವಷ್ಟೇ ವೃತ್ತಿಬದುಕಿಗೆ ಆಮ್ಲಜನಕ ದೊರೆತದ್ದು.

ಅವಕಾಶಗಳು ಹುಡುಕಿಕೊಂಡು ಬರಲು ಅಷ್ಟು ಸಾಕಾಯಿತು. ಆದರೆ, ಸ್ಥಿರಗೊಳ್ಳಲು ಸಾಧ್ಯವಾಗಲೇ ಇಲ್ಲ. 1995ರಿಂದ 1998ರ ಅವಧಿಯಲ್ಲಿ ಸೈಫ್ ಅಭಿನಯಿಸಿದ ಒಂಬತ್ತು ಚಿತ್ರಗಳು ತೋಪಾದವು. ಅಲ್ಲಿಗೆ ನಟನ ಸಿನಿಮಾ ಪಯಣ ಮುಗಿದಂತೆ ಎಂದೇ ಅನೇಕರು ಭಾವಿಸಿದರು. ಸೈಫ್ ಅದನ್ನು ಸುಳ್ಳಾಗಿಸಿದ. 'ದಿಲ್ ಚಾಹ್ತಾ ಹೈ' ತರಹದ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಿದ. 'ಹಮ್ ತುಮ್' ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಎಂದಿತು. 'ಕಚ್ಛೆ ಧಾಗೆ' ಹಿಟ್ ಆಯಿತು.

ಅಲ್ಲಿಂದಾಚೆಗೆ ಸೈಫ್ ಹೆಚ್ಚು ಹೆಚ್ಚು ಪ್ರಯೋಗಮುಖಿಯಾದ. ನಿರ್ಮಾಣಕ್ಕೂ ಕೈಹಾಕಿ ಗೆದ್ದ. ಸೋತಾಗ ಮತ್ತೆ ಗೆಲ್ಲುವ ದಾರಿ ಹುಡುಕಿದ.

ಇಪ್ಪತ್ತರಿಂದ ಮೂವತ್ತನೇ ವಯಸ್ಸಿನ ಅವಧಿಯಲ್ಲಿ ಸೈಕಲ್ ಹೊಡೆದದ್ದು ಆನಂತರದ ಒಂದೂವರೆ ದಶಕದಲ್ಲಿ ಫಲ ಕೊಟ್ಟಿತು. ಮೊನ್ನೆ ಮೊನ್ನೆ ತೆರೆಕಂಡ ಕಡಿಮೆ ಬಜೆಟ್‌ನ 'ಶೆಫ್' ಕೂಡ ಸೈಫ್ ಪ್ರಯೋಗಮುಖಿ ಎನ್ನುವುದಕ್ಕೆ ಉದಾಹರಣೆಯಾಗಬಲ್ಲ ಸಿನಿಮಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry