ಸುಲಭವೂ ಹೌದು ಕಷ್ಟವೂ ಹೌದು

ಬುಧವಾರ, ಮೇ 22, 2019
32 °C

ಸುಲಭವೂ ಹೌದು ಕಷ್ಟವೂ ಹೌದು

Published:
Updated:
ಸುಲಭವೂ ಹೌದು ಕಷ್ಟವೂ ಹೌದು

‘ಮೀಸಲಾತಿ ಏರಿಕೆಯ ದಾರಿ ಸುಲಭವೇ?’ ಎಂದು ಎಸ್. ಗಣೇಶನ್ ಅನುಮಾನದಿಂದ ಪ್ರಶ್ನಿಸಿದ್ದಾರೆ (ಪ್ರ.ವಾ., ಸಂಗತ, ಅ. 10). ಮೀಸಲಾತಿ ಏರಿಕೆ ಬಿಡಿ, ಈಗಿರುವ ಮೀಸಲಾತಿಯ ಜಾರಿ ಕೂಡಾ ಸುಲಭ ಅಲ್ಲ. ಸುತ್ತಮುತ್ತಲಿನ ವಿದ್ಯಮಾನಗಳನ್ನು ಗಮನಿಸಿದರೆ, ಇಂದಿನ ಪರಿಸ್ಥಿತಿ ಅಂದು ಇದ್ದಿದ್ದರೆ ಸಂವಿಧಾನದಲ್ಲಿ ಮೀಸಲಾತಿ ನೀತಿಯನ್ನು ಸೇರಿಸುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ.

ಮೊದಲು ಸಣ್ಣದೊಂದು ಸ್ಪಷ್ಟೀಕರಣ. ‘ಪರಿಶಿಷ್ಟ ಜಾತಿಗೆ ಈಗ ಶೇಕಡ 15ರಷ್ಟಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸುವುದು ಸರ್ಕಾರದ ಉದ್ದೇಶ ಇದ್ದಂತಿದೆ’ ಎಂದು ಲೇಖಕರು ಊಹೆಯನ್ನು ಆಧರಿಸಿ ಸಂಶಯ ವ್ಯಕ್ತಪಡಿಸಿದ್ದಾರೆ.

ನನಗೆ ತಿಳಿದಂತೆ ಮುಖ್ಯಮಂತ್ರಿ ಇಂಥ ಅಭಿಪ್ರಾಯವನ್ನು ಎಲ್ಲಿಯೂ ವ್ಯಕ್ತಪಡಿಸಿಲ್ಲ. ಇಷ್ಟುಮಾತ್ರವಲ್ಲ, ಮೀಸಲಾತಿಯನ್ನು ಶೇ 70ಕ್ಕೆ ಏರಿಸುವ ಪ್ರಸ್ತಾವದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ರಾಜ್ಯದ ಜನಸಂಖ್ಯೆಯ ಶೇ 24.1ರಷ್ಟಿದ್ದಾರೆ. ಅವರಿಗೆ ಶೇ 18ರಷ್ಟು ಮೀಸಲಾತಿ ಇದೆ. ಇದು ಯಾವ ನ್ಯಾಯ?’ ಎಂದು ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿರುವುದನ್ನು ಕೇಳಿದ್ದೇನೆ.

ಮೀಸಲಾತಿ ನೀತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಷ್ಟೇ ಸೀಮಿತವಾಗಿಸಿ, ಫಲಾನುಭವಿಗಳನ್ನಷ್ಟೇ ಗುರಿಯಾಗಿಸಿ ಅವರನ್ನು ಹಂಗಿಸಿ, ನಿಂದಿಸಿ, ಗೇಲಿ ಮಾಡುವ ಪ್ರವೃತ್ತಿ ಸಮಾಜದಲ್ಲಿರುವುದು ನಿಜ. ಈ ಬಗ್ಗೆ ದಲಿತೇತರ ಫಲಾನುಭವಿಗಳು ಬಾಯಿ ಬಿಡದೆ ಇರುವುದು ಕೂಡಾ ಅಷ್ಟೇ ನಿಜ.

ಕರ್ನಾಟಕದಲ್ಲಿನ ಮೀಸಲಾತಿ ನೀತಿಯ ವ್ಯಾಪ್ತಿಯಲ್ಲಿ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರು ಮಾತ್ರವಲ್ಲ, ಲಿಂಗಾಯತ, ಒಕ್ಕಲಿಗ ಸಮುದಾಯದೊಳಗಿನ ಪಂಗಡಗಳೂ ಇವೆ ಎನ್ನುವ ಬಗ್ಗೆ ಯಾರೂ ಚರ್ಚೆ ನಡೆಸುವುದಿಲ್ಲ. ವಿದ್ಯಾಸಿರಿ ಯೋಜನೆಯ ಫಲಾನುಭವಿಗಳ ಪಟ್ಟಿ ಪರಿಶೀಲಿಸಿದರೆ ಮೀಸಲಾತಿಯ ಲಾಭ ಪಡೆದವರಲ್ಲಿ ಯಾರ್‍ಯಾರು ಸೇರಿದ್ದಾರೆ ಎಂಬ ಖಚಿತ ಮಾಹಿತಿ ಸಿಗುತ್ತದೆ.

ಶೇ 70ರಷ್ಟು ಮೀಸಲಾತಿ ಏರಿಕೆ ಸಾಧ್ಯವೇ ಎಂಬ ಪ್ರಶ್ನೆಗೆ ಗಣೇಶನ್ ತಾವೇ ಲೇಖನದಲ್ಲಿ ವಿವರವಾಗಿ ಉಲ್ಲೇಖಿಸಿರುವ ತಮಿಳುನಾಡು ಸರ್ಕಾರ ನಡೆಸಿದ್ದ ದೀರ್ಘ ರಾಜಕೀಯ ಹೋರಾಟವೇ ಉತ್ತರ. ಹೌದು, ಇಂತಹದ್ದೊಂದು ಹೋರಾಟ ಕರ್ನಾಟಕದಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆ ಖಂಡಿತ ನಮ್ಮೆದುರು ಇದೆ.

ಸಾಮಾಜಿಕ ನ್ಯಾಯದ ಎರಡು ಕೊಡುಗೆಗಳಾದ ಭೂ ಸುಧಾರಣೆ ಮತ್ತು ಮೀಸಲಾತಿ, ಇತಿಮಿತಿಗಳ ನಡುವೆಯೂ ಯಶಸ್ವಿಯಾಗಿ ಜಾರಿಗೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ. ಈ ಕೊಡುಗೆಗಳನ್ನು ಈವರೆಗಿನ ಎಲ್ಲ ಸರ್ಕಾರಗಳೂ ಎಷ್ಟೊಂದು ದುರ್ಬಲಗೊಳಿಸುತ್ತಾ ಬಂದಿವೆ ಎನ್ನುವುದು ಪ್ರತ್ಯೇಕ ಚರ್ಚೆಯ ವಸ್ತು. ಆದರೆ ಕರ್ನಾಟಕದಲ್ಲಿ ಭೂಸುಧಾರಣೆಗಾಗಿ ದಲಿತ ಸಂಘಟನೆಗಳು ಅಲ್ಲಲ್ಲಿ ನಡೆಸಿದ್ದ ಭೂ ಹೋರಾಟ ಮತ್ತು ರಾಷ್ಟ್ರದ ಗಮನ ಸೆಳೆದ ಕಾಗೋಡು ಸತ್ಯಾಗ್ರಹವನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತಹ ಚಳವಳಿಗಳು ಭೂ ಸುಧಾರಣೆ ಜಾರಿಗೆ ಮೊದಲು ನಡೆದೇ ಇಲ್ಲ. ಅದೇ ರೀತಿ ಹಿಂದುಳಿದ ಜಾತಿಗಳ ಮೀಸಲಾತಿಗಾಗಿ ಕೂಡಾ ಯಾವ ಹಿಂದುಳಿದ ಜಾತಿ ಸಂಘಟನೆಯೂ ಹಾವನೂರು ಆಯೋಗದ ವರದಿ ಬರುವುದಕ್ಕಿಂತ ಮೊದಲು ಹೋರಾಟ ನಡೆಸಿಲ್ಲ. ಇವೆರಡೂ ಅನುಷ್ಠಾನಗೊಂಡಿದ್ದರೆ ಅದಕ್ಕೆ ಕಾರಣ ದೇವರಾಜ ಅರಸು ಅವರ ಪ್ರಾಮಾಣಿಕ ಕಾಳಜಿ.

ಈ ಹಿನ್ನೆಲೆಯಲ್ಲಿ ಮೀಸಲಾತಿಗಾಗಿಯೇ ಒತ್ತಾಯಿಸದೆ ಇದ್ದ ರಾಜ್ಯದ ಜನ, ಮೀಸಲಾತಿ ಏರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ರೀತಿಯಲ್ಲಿ ಹೋರಾಟ ನಡೆಸುತ್ತಾರೆಯೇ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ.

‘ಕೇಂದ್ರದ ಮೇಲೆ ಒತ್ತಡ ತರುವಷ್ಟು ಸಾಮರ್ಥ್ಯ ಸಿದ್ದರಾಮಯ್ಯ ಅವರಿಗೆ ಇದೆಯೇ’ ಎಂದು ಲೇಖಕರು ಕೇಳಿದ್ದಾರೆ. ಒಬ್ಬ ಮುಖ್ಯಮಂತ್ರಿ, ಮಂತ್ರಿ ಇಲ್ಲವೇ ಶಾಸಕರಿಗೆ ದೈವದತ್ತವಾದ ಸಾಮರ್ಥ್ಯ ಇರುವುದಿಲ್ಲ, ‘ಕಾಂಪ್ಲಾನ್’ ಕುಡಿದು ಅದನ್ನು ಗಳಿಸಲು ಸಾಧ್ಯ ಇಲ್ಲ. ಜನಪ್ರತಿನಿಧಿಗಳು ಸಾಮರ್ಥ್ಯವನ್ನು ಪಡೆಯುವುದು ಜನರಿಂದ, ಜನಬೆಂಬಲದಿಂದ ಮತ್ತು ಜನರ ಹೋರಾಟದಿಂದ.

ಈ ಹಿನ್ನೆಲೆಯಲ್ಲಿ ಲೇಖಕರು ಈ ಪ್ರಶ್ನೆಯನ್ನು ಬದಲಾಯಿಸಿ ‘ಮೀಸಲಾತಿ ಏರಿಸಲು ಸಮರ್ಥವಾದ ತಮಿಳುನಾಡಿನ ಸಾಮರ್ಥ್ಯ ಕರ್ನಾಟಕದ ಜನರಿಗಿದೆಯೇ’ ಎಂದು ಕೇಳಬೇಕಿತ್ತು. ಅಂತಿಮವಾಗಿ ಪ್ರಭುತ್ವ ಮಣಿಯುವುದು ಜನಶಕ್ತಿಗೆ ಮಾತ್ರ.

ಅಂತರಂಗದಲ್ಲಿ ಮೀಸಲಾತಿ ವ್ಯವಸ್ಥೆಗೆ ವಿರೋಧವಾಗಿರುವ ಬಿಜೆಪಿ ಮತ್ತು ಜನತಾದಳ ಇದಕ್ಕೆ ವಿಧಾನಮಂಡಲದಲ್ಲಿ ಬೆಂಬಲ ನೀಡಲಿವೆಯೇ ಎನ್ನುವುದನ್ನು ಕಾದು ನೋಡಬೇಕು ಎನ್ನುವ ಅನುಮಾನದ ದನಿಯೊಂದಿಗೆ ಲೇಖನ ಕೊನೆಗೊಂಡಿದೆ.

ಚರ್ಚೆಯಾಗಬೇಕಾಗಿರುವುದು ಈ ಪ್ರಶ್ನೆ. ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಸೇರಿಸಿದಾಗ ಭಾರತೀಯರೆಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿದ್ದರೇ? ಸಂವಿಧಾನ ರಚನಾ ಮಂಡಳಿಯ ಚರ್ಚೆ ಓದಿದರೆ ವಿರೋಧದ ಒತ್ತಡ ಅರಿವಾಗುತ್ತದೆ. ಪ್ರಧಾನಿಯಾಗಿದ್ದ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಮಂಡಲ್ ವರದಿಯನ್ನು ಜಾರಿಗೊಳಿಸಿದಾಗ ದೇಶದಲ್ಲಿ ಏನಾಗಿತ್ತು? ಅದನ್ನು ಪ್ರತಿಭಟಿಸಿದ್ದು ಯಾರು ಎನ್ನುವುದನ್ನು ನೆನಪು ಮಾಡಿಕೊಳ್ಳೋಣ.

ಸಂಘ ಪರಿವಾರದ ಅಂಗಸಂಸ್ಥೆಗಳ ಯುವ ನಾಯಕರು ನೇರವಾಗಿ ಬೀದಿಗಿಳಿದು ಮೈಗೆ ಬೆಂಕಿ ಹಚ್ಚಿಕೊಂಡರೆ, ಹಿರಿಯ ನಾಯಕರು ನೇಪಥ್ಯದಲ್ಲಿ ನಿಂತು ಬೆಂಕಿಗೆ ತುಪ್ಪ ಸುರಿದಿದ್ದರು. ಅಂದಿನ ಪರಿಸ್ಥಿತಿಯಲ್ಲಿ ಯಾರಿಗೂ ಮಂಡಲ್ ವರದಿ ಜಾರಿ ಸಾಧ್ಯ ಎಂದು ಅನಿಸಿರಲಿಲ್ಲ.ಆದರೆ ಜಾರಿಯಾಗಿದ್ದು ಮಾತ್ರವಲ್ಲ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮೀಸಲಾತಿ ಪಡೆದ ಹಿಂದುಳಿದ ಜಾತಿಗಳು ಸುಶಿಕ್ಷಿತರಾಗಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದು ಕೂಡಾ ನಿಜ. ಈಗಿನ ಪ್ರಧಾನಿ ಮತ್ತು ಮಂಡಲೋತ್ತರ ಕಾಲದಲ್ಲಿ ಮುಖ್ಯಮಂತ್ರಿಗಳಾದವರ ಪಟ್ಟಿ ಮಾಡಿದರೆ ಮಂಡಲ ವರದಿ ಜಾರಿಯ ಮಹತ್ವ ಗೊತ್ತಾಗುತ್ತದೆ.

ನಾನು ಗಣೇಶನ್ ಅವರಷ್ಟು ನಿರಾಶಾವಾದಿಯಲ್ಲ, ಆಶಾವಾದಿ. ನನ್ನ ಆಶಾವಾದಿತನ ಆಕಾಶದಿಂದ ಉದುರಿಬಿದ್ದಿದ್ದಲ್ಲ, ನೆಲದ ವಾಸ್ತವದ ಗ್ರಹಿಕೆಯಿಂದ ಹುಟ್ಟಿಕೊಂಡಿದ್ದು. ಮಂಡಲ್ ವರದಿ ಜಾರಿಯ ಸಮಯದಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯನ್ನು ಯಾರಾದರೂ ತೆಗೆದು ಓದಿ. ಆಗ ಯಾರ್‍ಯಾರು ಮೀಸಲಾತಿಯನ್ನು ವಿರೋಧಿಸಿದ್ದರೋ, ಅವರಲ್ಲಿ ಯಾರೂ ಈಗ ಬಹಿರಂಗವಾಗಿ ಸಂಸತ್, ವಿಧಾನಮಂಡಲ ಇಲ್ಲವೆ ಸಾರ್ವಜನಿಕ ಸಭೆಗಳಲ್ಲಿ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ವಿರೋಧಿಸಿದರೆ ಅವರು ರಾಜಕೀಯವಾಗಿ ಬದುಕುಳಿಯುವುದು ಕಷ್ಟ ಎಂಬ ಪರಿಸ್ಥಿತಿ ಇದೆ.

ಇದಕ್ಕಾಗಿಯೇ ಚುನಾವಣೆಯ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳುವ ಧೈರ್ಯ ಇಲ್ಲದ ಆರ್‌ಎಸ್‌ಎಸ್ ನಾಯಕರು ಮಾತ್ರ ಮೀಸಲಾತಿಯನ್ನು ಆಗಾಗ ವಿರೋಧಿಸುತ್ತಾ, ನಂತರ ಸ್ಪಷ್ಟೀಕರಿಸುತ್ತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದ್ದರಿಂದ ಪರಿಸ್ಥಿತಿಯು ಲೇಖಕರು ಅಂದುಕೊಂಡಷ್ಟು ನಿರಾಶಾದಾಯಕವಾಗಿಲ್ಲ.

ನಮ್ಮಿಂದ ಲೋಕಸಭೆಗೆ ಆಯ್ಕೆಯಾಗಿರುವ 28 ಸದಸ್ಯರು ಮತ್ತು ರಾಜ್ಯಸಭೆಗೆ ಆಯ್ಕೆಯಾಗಿರುವ ಹನ್ನೆರಡು ಸದಸ್ಯರಿದ್ದಾರೆ. ಅವರು ಪಕ್ಷಾತೀತರಾಗಿ, ಪೂರ್ವಗ್ರಹ ಇಲ್ಲದೆ ರಾಜ್ಯದ ಆರೂವರೆ ಕೋಟಿ ಜನರ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡಿದರೆ ಹಿಂದುಳಿದ ಜಾತಿಗೆ ಸೇರಿರುವ ಪ್ರಧಾನಿಯವರನ್ನೂ ಒಪ್ಪಿಸಲು ಸಾಧ್ಯ. ಸ್ವಯಂಪ್ರೇರಣೆಯಿಂದ ಅವರು ಆ ರೀತಿ ಯೋಚನೆ ಮಾಡದೆ ಇದ್ದರೆ, ಅವರನ್ನು ಯೋಚಿಸುವಂತೆ ಮಾಡುವ ಜವಾಬ್ದಾರಿ ರಾಜ್ಯದ ಜನರ ಮೇಲಿದೆ. ಅದಕ್ಕಾಗಿ ಇದು ಮುಂದಿನ ಚುನಾವಣೆಯ ವಿಷಯವಾಗಬೇಕು.

ಲೇಖಕ: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry