ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ತಾಲ್ಲೂಕು ಘೋಷಣೆ ಕಷ್ಟ

ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿ ಪರಿಷ್ಕರಿಸಿದ ಕೇಂದ್ರ ಸರ್ಕಾರ
Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಕೊರತೆ, ಬೆಳೆ ನಷ್ಟವಾಗಿದ್ದರೂ ಈ ವರ್ಷ ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡುವುದು ರಾಜ್ಯ ಸರ್ಕಾರಕ್ಕೆ ಕಷ್ಟವಾಗಲಿದೆ.

ಆಗಸ್ಟ್‌ ಅಂತ್ಯದವರೆಗೆ ಮಳೆ ಮತ್ತು ತೇವಾಂಶ ಕೊರತೆ, ಬೆಳೆ ನಷ್ಟದ ಅಂದಾಜಿನಲ್ಲಿ ಸುಮಾರು 61 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗಬಹುದು ಎಂದು ಕಂದಾಯ ಇಲಾಖೆ ಅಂದಾಜಿಸಿತ್ತು. ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್‌ ಅಂತ್ಯದವರೆಗಿನ ಮಳೆ–ಬೆಳೆ ಅಂದಾಜು ಪರಿಗಣಿಸಿ ಮುಂಗಾರು ಹಂಗಾಮಿನಲ್ಲಿ ಬರಘೋಷಣೆ ಮಾಡಬೇಕು. ಈ ಸಾಲಿನಲ್ಲಿ ಸೆಪ್ಟೆಂಬರ್‌ನಲ್ಲಿ ಕೆಲವು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. ಇದರ ಜತೆಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಪರಿಷ್ಕರಿಸಿದೆ. ಈ ಎರಡೂ ಕಾರಣಗಳಿಂದಾಗಿ ಬರಪೀಡಿತ ತಾಲ್ಲೂಕು ಘೋಷಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಉಪ ಸಮಿತಿ (ಪ್ರಕೃತಿ ವಿಕೋಪ ಪರಿಶೀಲನೆ) ಸಭೆಯಲ್ಲಿ ಈ ಬಗ್ಗೆ ಚರ್ಚೆನಡೆಸಲಾಗಿದೆ.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ‘ಹಿಂದೆ ಇದ್ದ ಮಾರ್ಗಸೂಚಿಗಳ ಅನುಸಾರ
ಶೇ 20ಕ್ಕಿಂತ ಹೆಚ್ಚು ಮಳೆ ಕೊರತೆ, ಬಿತ್ತನೆ ಪ್ರದೇಶದಲ್ಲಿ ಶೇ 60ರಷ್ಟು ಬೆಳೆ ನಷ್ಟ, ಎರಡು ವಾರಗಳ ಸತತ ತೇವಾಂಶ ಕೊರತೆ ಇದ್ದರೆ ಬರ ಎಂದು ಘೋಷಣೆ ಮಾಡಬಹುದಿತ್ತು. ಈಗ ಸರಾಸರಿಮಳೆ ಪ್ರಮಾಣ, ಜಲಾಶಯ, ಕೆರೆಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನೂ ಲೆಕ್ಕ ಹಾಕಬೇಕಾಗುತ್ತದೆ. ಸೆಪ್ಟೆಂಬರ್‌ನಲ್ಲಿ ತೇವಾಂಶ ಕೊರತೆ ಕಾಣಿಸದೇ ಇರುವುದರಿಂದ ಬರಗಾಲ ಘೋಷಣೆ ಕಷ್ಟವಾಗಲಿದೆ. ಹೊಸ ಮಾರ್ಗ
ಸೂಚಿಯನ್ನು ಪರಿಷ್ಕರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನೂ 10 ದಿನ ಕಾದು ನೋಡಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಹೇಳಿದರು.

ರಿಯಾಯಿತಿ ದರದಲ್ಲಿ ಕೀಟನಾಶಕ ಪೂರೈಕೆ

ಭತ್ತ, ಶೇಂಗಾ, ರಾಗಿ, ಮೆಕ್ಕೆಜೋಳ ಬೆಳೆಯನ್ನು ನಾಶ ಮಾಡುತ್ತಿರುವ ಸೈನಿಕ ಹುಳುಗಳನ್ನು ನಿಯಂತ್ರಿಸಲು ಶೇ 50ರಷ್ಟು ರಿಯಾಯಿತಿ ದರದಲ್ಲಿ ಮೊನೊಕ್ರೊಟೋಪಾಸ್‌ ಕೀಟನಾಶಕವನ್ನು ರೈತರಿಗೆ ಪೂರೈಸಲು ನಿರ್ಧರಿಸಲಾಗಿದೆ ಎಂದು ಸಚಿವ ಜಯಚಂದ್ರ ಹೇಳಿದರು.

ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಸೈನಿಕ ಹುಳುಗಳು ರೈತರ ಹೊಲಗದ್ದೆಗಳ ಮೇಲೆ ದಾಳಿ ನಡೆಸುತ್ತಿದ್ದು, ಸಾವಿರಾರು ಹೆಕ್ಟೇರ್‌ಗಳಲ್ಲಿನ ಬೆಳೆ ನಾಶವಾಗುತ್ತಿದೆ. ರೋಗ ನಿಯಂತ್ರಣಕ್ಕೆ ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪರಿಹಾರ ಕೊಡಲು ಕೇಂದ್ರ ಹಿಂದೇಟು

ಒಣಗಿ ನಿಂತ ತೆಂಗು ಮತ್ತು ಅಡಕೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದೆ. ರಾಜ್ಯದಲ್ಲಿ 45 ಲಕ್ಷ ತೆಂಗು ಹಾಗೂ 1.83 ಕೋಟಿ ಅಡಕೆ ಮರ ಸಂಪೂರ್ಣ ಒಣಗಿಹೋಗಿದ್ದು, ಶೇ 50ಕ್ಕಿಂತ ಹೆಚ್ಚು ಮರಗಳು ಫಲ ನೀಡದ ಸ್ಥಿತಿಗೆ ತಲುಪಿವೆ. ಪ್ರತಿ ಹೆಕ್ಟೇರ್‌ಗೆ ₹75,000 ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

‘ತೆಂಗಿನ ಗಿಡಗಳ ಮರುನಾಟಿಗೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಬಿಡುಗಡೆ ಮಾಡಿರುವ ₹36 ಕೋಟಿ ಅನುದಾನವನ್ನು ಬಳಸಿಕೊಳ್ಳುವಂತೆ  ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಇದೇ 4ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಒಣಗಿದ ಮರಗಳಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇದನ್ನು ಗಮನಿಸಿದರೆ ಪರಿಹಾರ ಸಿಗುವ ಸಾಧ್ಯತೆ ಕಡಿಮೆ’ ಎಂದು ಸಚಿವ ಜಯಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT