ಸೋತು ನಿರ್ಗಮಿಸಿದ ಭಾರತ

ಸೋಮವಾರ, ಜೂನ್ 17, 2019
27 °C

ಸೋತು ನಿರ್ಗಮಿಸಿದ ಭಾರತ

Published:
Updated:
ಸೋತು ನಿರ್ಗಮಿಸಿದ ಭಾರತ

ನವದೆಹಲಿ: ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಚೊಚ್ಚಲ ಬಾರಿಗೆ ಆಡಿದ ಭಾರತ ತಂಡದವರಿಗೆ ಗೆಲುವು ಮರೀಚಿಕೆಯಾಯಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಎ’ ಗುಂಪಿನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಆತಿಥೇಯರು 0–4 ಗೋಲು ಗಳಿಂದ ಘಾನಾ ತಂಡಕ್ಕೆ ಶರಣಾದರು.

ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿದ್ದ ಅಮರ್‌ಜೀತ್‌ ಕಿಯಾಮ್‌ ಬಳಗ ಆರಂಭದಿಂದಲೇ ಎದುರಾಳಿ ತಂಡದ ಆವರಣ ಪ್ರವೇಶಿಸುವ ಪ್ರಯತ್ನ ನಡೆಸಿತು. ಇನ್ನೊಂದೆಡೆ ಘಾನಾ ಕೂಡ ಮಿಂಚಿನ ಆಟ ಆಡಿತು. ಶುರುವಿನಲ್ಲೇ ಈ ತಂಡಕ್ಕೆ ಗೋಲು ಗಳಿಸುವ ಉತ್ತಮ ಅವಕಾಶ ಲಭ್ಯವಾಗಿತ್ತು. ಆದರೆ ಭಾರತ ಗೋಲ್‌ಕೀಪರ್‌ ಧೀರಜ್‌ ಗೋಡೆಯಂತೆ ನಿಂತು ಎದುರಾಳಿಗಳ ‍ಪ್ರಯತ್ನವನ್ನು ವಿಫಲಗೊಳಿಸಿದರು.

42ನೇ ನಿಮಿಷದವರೆಗೂ ಭಾರತದ ಆಟಗಾರರು ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿ ತವರಿನ ಅಭಿಮಾನಿಗಳ ಮನ ಗೆದ್ದರು. 43ನೇ ನಿಮಿಷದಲ್ಲಿ ಘಾನಾ ತಂಡ ಖಾತೆ ತೆರೆಯಿತು. ಎರಿಕ್‌ ಅಯಿಹಾ ಗೋಲು ದಾಖಲಿಸಿ ಮುನ್ನಡೆಗೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಘಾನಾ ಆಟಗಾರರು ವೇಗ ಹೆಚ್ಚಿಸಿಕೊಂಡರು. 52ನೇ ನಿಮಿಷದಲ್ಲಿ ಎರಿಕ್‌ ಮತ್ತೊಮ್ಮೆ ಮೋಡಿ ಮಾಡಿದರು.  ಆ ನಂತರದ 30 ನಿಮಿಷಗಳ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ದಾಖಲಿಸಲು ಆಗಲಿಲ್ಲ. ಬಳಿಕ ಘಾನಾ ಆಟಗಾರರು ಪ್ರಾಬಲ್ಯ ಮೆರೆದರು.

86ನೇ ನಿಮಿಷದಲ್ಲಿ ರಿಚರ್ಡ್‌ ಡಾನ್ಸೊ ಚೆಂಡನ್ನು ಗುರಿ ಮುಟ್ಟಿಸಿದರು. ಇದರ ಬೆನ್ನಲ್ಲೇ (87ನೇ ನಿಮಿಷ) ಎಮಾನುಯೆಲ್‌ ಟೋಕು ಕಾಲ್ಚಳಕ ತೋರಿದರು. ಹೀಗಾಗಿ ಪ್ರವಾಸಿ ಬಳಗ ಮುನ್ನಡೆಯನ್ನು 4–0ಗೆ ಹೆಚ್ಚಿಸಿಕೊಂಡು ಗೆಲುವು ಖಾತ್ರಿ ಪಡಿಸಿಕೊಂಡಿತು.

ನಾಕೌಟ್‌ಗೆ ಮಾಲಿ: ಆಫ್ರಿಕಾದ ಚಾಂಪಿಯನ್‌ ತಂಡ ಮಾಲಿ   ಕೂಟದಲ್ಲಿ ನಾಕೌಟ್‌ಗೆ ಲಗ್ಗೆ ಇಟ್ಟಿತು. ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಈ ತಂಡ 3–1 ಗೋಲುಗಳಿಂದ ನ್ಯೂಜಿಲೆಂಡ್‌ ಸವಾಲು ಮೀರಿ ನಿಂತಿತು.

ಹೋದ ಬಾರಿ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿದ್ದ ಮಾಲಿ ತಂಡದವರು 18ನೇ ನಿಮಿಷದಲ್ಲೇ ಮುನ್ನಡೆ ಗಳಿಸಿದರು. ಸಲಾಮ್‌ ಜಿದೌದು ಚೆಂಡನ್ನು ಗುರಿ ಮುಟ್ಟಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು. ಜೆಮೌಸಾ ಟ್ರಾವೊರ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸಲಾಮ್ ಅದನ್ನು 25 ಗಜ ದೂರದಿಂದ ಗುರಿಯೆಡೆಗೆ ಒದ್ದರು.

ನಂತರ ನ್ಯೂಜಿಲೆಂಡ್‌ ಆಟಗಾರರು ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದರು. 50ನೇ ನಿಮಿ ಷದಲ್ಲಿ ಮಾಲಿ ತಂಡ ಮುನ್ನಡೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಜೆಮೌಸಾ ಟ್ರಾವೊರ್‌ ಕಾಲ್ಚಳಕ ದಲ್ಲಿ ಅರಳಿದ ಈ ಗೋಲಿನಿಂದಾಗಿ ಮಾಲಿ ತಂಡ ಮುನ್ನಡೆಯನ್ನು 2–0ಗೆ ಹೆಚ್ಚಿಸಿಕೊಂಡಿತು.

72ನೇ ನಿಮಿಷದಲ್ಲಿ ಚಾರ್ಲೆಸ್‌ ಸ್ಪ್ರಾಗ್‌ ಚೆಂಡನ್ನು ಗುರಿ ಮುಟ್ಟಿಸಿದ್ದ ರಿಂದ ನ್ಯೂಜಿಲೆಂಡ್‌ ತಂಡ ಹಿನ್ನಡೆ ಯನ್ನು 1–2ಕ್ಕೆ ತಗ್ಗಿಸಿಕೊಂಡಿತು. ಆ ಬಳಿಕ ಈ ತಂಡ ಸಮಬಲದ ಗೋಲು ದಾಖಲಿಸಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. 82ನೇ ನಿಮಿಷದಲ್ಲಿ ಮಾಲಿ ತಂಡದ ಲಾಸನಾ ದಿಯಾಯೆ ಗೋಲು ಬಾರಿಸುತ್ತಿದ್ದಂತೆ ಕಿವೀಸ್‌ ನಾಡಿನ ತಂಡದ ಗೆಲುವಿನ ಕನಸು ಕಮರಿ ಹೋಯಿತು.

ಪರುಗ್ವೆ ಜಯಭೇರಿ: ಮುಂಬೈನ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪರುಗ್ವೆ 3–1 ಗೋಲುಗಳಿಂದ ಟರ್ಕಿ ವಿರುದ್ಧ ಜಯಭೇರಿ ಮೊಳಗಿಸಿತು.

ಪರುಗ್ವೆ ತಂಡ ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲೂ ಗೆಲುವಿನ ತೋರಣ ಕಟ್ಟಿ ಒಟ್ಟು 9 ಪಾಯಿಂಟ್ಸ್‌ ಸಂಗ್ರಹಿಸಿತು. ಈ ಮೂಲಕ ನಾಕೌಟ್‌ಗೆ ಲಗ್ಗೆ ಇಟ್ಟಿತು. ಈ ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ  ಮಾಲಿ (3–2) ಮತ್ತು ನ್ಯೂಜಿಲೆಂಡ್‌ (4–2) ತಂಡಗಳನ್ನು ಸೋಲಿಸಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry