ವಿನಯ್‌ ಬಳಗದ ಕಠಿಣ ಅಭ್ಯಾಸ

ಗುರುವಾರ , ಜೂನ್ 20, 2019
29 °C
ರಣಜಿ: ಕರ್ನಾಟಕ–ಅಸ್ಸಾಂ ಪಂದ್ಯ ನಾಳೆಯಿಂದ

ವಿನಯ್‌ ಬಳಗದ ಕಠಿಣ ಅಭ್ಯಾಸ

Published:
Updated:
ವಿನಯ್‌ ಬಳಗದ ಕಠಿಣ ಅಭ್ಯಾಸ

ಮೈಸೂರು: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಹೊಸ ಋತುವನ್ನು ಗೆಲು ವಿನೊಂದಿಗೆ ಆರಂಭಿಸುವ ವಿಶ್ವಾಸದಲ್ಲಿರುವ ಕರ್ನಾಟಕ ತಂಡದ ಆಟಗಾರರು ಗುರುವಾರ ಇಲ್ಲಿನ ಜೆ.ಸಿ. ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರದಿಂದ ನಡೆಯಲಿರುವ ‘ಎ’ ಗುಂಪಿನಲ್ಲಿ ತನ್ನ ಮೊದಲ ಪಂದ್ಯದಲ್ಲಿ ವಿನಯ್‌ ಕುಮಾರ್‌ ನೇತೃತ್ವದ ತಂಡ ಅಸ್ಸಾಂ ವಿರುದ್ಧ ಪೈಪೋಟಿ ನಡೆಸಲಿದೆ.

ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ ಅವರನ್ನು ಹೊರತುಪಡಿಸಿ ತಂಡದ ಇತರ 15 ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡರು. ನ್ಯೂಜಿ ಲೆಂಡ್‌ ‘ಎ’ ತಂಡದ ವಿರುದ್ಧ ವಿಶಾಖಪಟ್ಟಣದಲ್ಲಿ ಬುಧವಾರ ನಡೆದ ಏಕದಿನ ಪಂದ್ಯದಲ್ಲಿ ಭಾರತ ’ಎ’ ತಂಡದ ಪರ ಆಡಿದ್ದ ಮಯಂಕ್‌ ಶುಕ್ರವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ನಗರದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಕಾರಣ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಆಗಿಲ್ಲ. ಆಟಗಾರರ ಅಭ್ಯಾಸಕ್ಕೆ ಸಿದ್ಧಪಡಿಸಿದ್ದ ಪಿಚ್‌ಗಳಿಗೆ ನೀರು ನುಗ್ಗಿದೆ. ಇದರಿಂದ ಎಸ್‌ಜೆಸಿಇ ಮೈದಾನದಲ್ಲಿ ಅಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕೋಚ್‌ ಪಿ.ವಿ.ಶಶಿಕಾಂತ್‌ ಮತ್ತು ಸಹಾಯಕ ಕೋಚ್‌ ಜಿ.ಕೆ.ಅನಿಲ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಆಟಗಾರರು ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ತಾಲೀಮು ನಡೆಸಿದರು.

ಅಸ್ಸಾಂ ಆಟಗಾರರ ತಾಲೀಮು: ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ದೆಹಲಿ ಎದುರು ಡ್ರಾ ಸಾಧಿಸಿದ್ದ ಅಸ್ಸಾಂ ತಂಡದವರು ಗುರುವಾರ ಬೆಳಿಗ್ಗೆ ಅಭ್ಯಾಸ ನಡೆಸಿದರು. ಬುಧವಾರ ಕೂಡಾ ಅಭ್ಯಾಸ ನಡೆಸಿದ್ದ ಅಸ್ಸಾಂ ಆಟಗಾರರು ಪ್ರಬಲ ಕರ್ನಾಟಕದ ಸವಾಲು ಎದುರಿಸಲು ತಂತ್ರಗಳನ್ನು ರೂಪಿಸುತ್ತಿದ್ದಾರೆ.

‘ಗ್ಲೇಡ್ಸ್‌ನಲ್ಲಿ ಸ್ಪೋರ್ಟಿಂಗ್‌ ಪಿಚ್‌’

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಸ್ಪೋರ್ಟಿಂಗ್‌ ಪಿಚ್‌ ಸಿದ್ಧಪಡಿಸಲಾಗಿದ್ದು, ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳಿಗೆ ಸಮಾನ ರೀತಿಯಲ್ಲಿ ನೆರವು ನೀಡಲಿದೆ ಎಂದು ಕೆಎಸ್‌ಸಿಎ ಕ್ಯುರೇಟರ್‌ ಎಸ್‌.ಚಂದ್ರಶೇಖರ್‌ ತಿಳಿಸಿದರು. ಮೊದಲ ದಿನ ವೇಗಿಗಳಿಗೆ ನೆರವು ನೀಡಲಿರುವ ಪಿಚ್‌, ಆ ಬಳಿಕ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆಯಿದೆ ಎಂದು ಹೇಳಿದರು.

ಬಿಸಿಸಿಐ ಈ ಬಾರಿಯ ರಣಜಿ ಪಂದ್ಯಗಳಿಗೆ ತಟಸ್ಥ ಕ್ಯುರೇಟರ್‌ಗಳನ್ನು ನೇಮಿಸಿದೆ. ಕರ್ನಾಟಕ–ಅಸ್ಸಾಂ ನಡುವಿನ ಪಂದ್ಯಕ್ಕೆ ಪಿಚ್‌ ಸಿದ್ಧಪಡಿಸುವ ಜವಾಬ್ದಾರಿಯನ್ನು ಚೆನ್ನೈನ ಕ್ಯುರೇಟರ್‌ ವೆಂಕಟ್‌ ಅವರಿಗೆ ವಹಿಸಲಾಗಿದೆ.

‘ಬಿಸಿಸಿಐ ನೇಮಿಸಿರುವ ಕ್ಯುರೇಟರ್‌ಗೆ ನೆರವು ನೀಡುವುದಷ್ಟೇ ನನ್ನ ಕೆಲಸ. ಇಲ್ಲಿನ ಪಿಚ್‌ ಬಗ್ಗೆ ಹೆಚ್ಚಿನ ಅರಿವು ಹೊಂದಿರುವ ಕಾರಣ ವೆಂಕಟ್‌ ನನ್ನ ಸಲಹೆಗಳನ್ನೂ ಪಡೆದಿದ್ದಾರೆ. ಆದರೆ ಪಿಚ್‌ ಸಿದ್ಧಪಡಿಸುವ ಪೂರ್ಣ ಹೊಣೆ ಅವರದ್ದು’ ಎಂದು ಚಂದ್ರಶೇಖರ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry