ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣಗೆ ಮತ್ತೆ ಬುದ್ಧಿ ಹೇಳಿದ ದೇವೇಗೌಡ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ನಲ್ಲಿ ‘ಬಕೆಟ್ ಸಂಸ್ಕೃತಿ’ ಇದೆ ಎಂಬ ಪ್ರಜ್ವಲ್ ರೇವಣ್ಣ ಹೇಳಿಕೆಯಿಂದ ನೊಂದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮೊಮ್ಮಗನಿಗೆ ದೂರವಾಣಿ ಕರೆ ಮಾಡಿ ಮತ್ತೊಮ್ಮೆ ಬುದ್ಧಿಮಾತು ಹೇಳಿದ್ದಾರೆ.

ಪಕ್ಷದ ಯುವ ಮುಖಂಡರಾದ ಪ್ರಜ್ವಲ್ ರೇವಣ್ಣ ಪಕ್ಷಕ್ಕೆ ಮುಜುಗರ ಆಗುವಂತೆ ಸಾರ್ವಜನಿಕ ವೇದಿಕೆಯಲ್ಲಿ ಪದೇ ಪದೇ ಹೇಳಿಕೆ ನೀಡುತ್ತಿರುವುದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಅವರಿಗೆ ತಿಳಿ ಹೇಳಬೇಕು ಎಂದು ಅನೇಕ ನಾಯಕರು ದೇವೇಗೌಡರಿಗೆ ಒತ್ತಡ ಹೇರಿದ್ದಾರೆ.

‘ದೇವೇಗೌಡ ಅವರು ಗುರುವಾರ ದೂರವಾಣಿ ಮೂಲಕ ಪ್ರಜ್ವಲ್ ಜೊತೆ ಮಾತನಾಡಿ, ‘ಬಕೆಟ್‌ ರಾಜಕಾರಣಿಗಳಿಂದಾಗಿ ಹುಣಸೂರಿನಲ್ಲಿ ಟಿಕೆಟ್ ಸಿಗುವುದಕ್ಕೆ ಕಲ್ಲುಬಿತ್ತು’ ಎಂಬ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಈ ಹಿಂದೆ ಹೇಳಿಕೆ ನೀಡಿರುವುದೇ ಸಾಕಷ್ಟು ಹಾನಿಯುಂಟು ಮಾಡಿದೆ. ಅದಕ್ಕಾಗಿ ನೋಟಿಸ್ ಸಹ ನೀಡಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದೆ ಅದೇ ರೀತಿಯ ಹೇಳಿಕೆಗಳನ್ನು ಮುಂದುವರಿಸಿರುವುದು ಸರಿಯಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

‘ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಮಾತ್ರ ಸ್ಪರ್ಧೆ ಮಾಡುತ್ತಾರೆ’ ಎಂದು ಈಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ಸ್ವತಂತ್ರ ಸ್ಪರ್ಧೆ?

ಪ್ರಜ್ವಲ್ ರೇವಣ್ಣ ಅವರಿಗೆ ಹುಣಸೂರಿನಿಂದ ಟಿಕೆಟ್‌ ನಿರಾಕರಿಸಿದ ಬಳಿಕ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಪಕ್ಷ ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಇದನ್ನು ತಳ್ಳಿಹಾಕಿರುವ ದೇವೇಗೌಡ ಅವರು, ‘ಅ.10ರಂದು ರಾಜರಾಜೇಶ್ವರಿ ನಗರದಲ್ಲಿ ನಡೆದ ಸಭೆಗೆ ಪ್ರಜ್ವಲ್ ರೇವಣ್ಣ ಟಿಕೆಟ್ ಆಕಾಂಕ್ಷಿಯಾಗಿ ಭಾಗವಹಿಸಿರಲಿಲ್ಲ. ಅಲ್ಲದೆ, ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಾನು ಮತ್ತು ಕುಮಾರಸ್ವಾಮಿ ಮಾತ್ರ ನಿರ್ಧರಿಸುವುದಿಲ್ಲ. ಪಕ್ಷದ ಪ್ರಮುಖರ ಸಮಿತಿಯ ಸಭೆಯಲ್ಲಿ ನಿರ್ಣಯ ಆಗುತ್ತದೆ ’ ಎಂದು ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾನೂನು ಘಟಕದ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.

ಜೆಡಿಎಸ್‌ನತ್ತ ಶಾಸಕ ಯೋಗೇಶ್ವರ ಒಲವು?

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವದ ಗುಸುಗುಸು ಜೋರಾಗಿದ್ದು, ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ ಜೆಡಿಎಸ್‌ ಸೇರಲು ಒಲವು ತೋರಿದ್ದಾರೆ.‌

ವಿಧಾನಪರಿಷತ್‌ ಜೆಡಿಎಸ್‌ ಸದಸ್ಯ ಪುಟ್ಟಣ್ಣ ಬಿಜೆಪಿ ಸೇರಿ, ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ವದಂತಿ ಹರಡಿರುವ  ಬೆನ್ನಲ್ಲೆ, ಯೋಗೇಶ್ವರ ಮಾತೃಪಕ್ಷ ತ್ಯಜಿಸುವುದು ಬಹುತೇಕ ಖಚಿತಗೊಂಡಿದೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ಯೋಗೇಶ್ವರ ಅವರ ಜೊತೆ ಮಾತುಕತೆ ನಡೆಸಿದ್ದು, ತಮ್ಮ ಪಕ್ಷ ಸೇರುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಯೋಗೇಶ್ವರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಗೊತ್ತಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಯೋಗೇಶ್ವರ ಸ್ಪರ್ಧಿಸುವ ಸಾಧ್ಯತೆ ಇದೆ. ಯೋಗೇಶ್ವರ ಅವರ ಮಗಳು ಅಥವಾ ತಮ್ಮ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದೂ ಹೇಳಲಾಗಿದೆ.

‘2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿ ಬಳಿಕ ಕಾಂಗ್ರೆಸ್‌ಗೆ ಮರಳಿದ್ದ ಯೋಗೇಶ್ವರ, ಇದೀಗ ಪಕ್ಷದ ನಾಯಕರೊಂದಿಗೆ ಅಸಮಾಧಾನಗೊಂಡಿದ್ದಾರೆ. 20 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದರೂ ಕಾಂಗ್ರೆಸ್‌ ತಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂಬ ಆಕ್ರೋಶ ಅವರಲ್ಲಿದೆ’ ಎಂದು ಅವರ ಆಪ್ತರು ತಿಳಿಸಿದ್ದಾರೆ.

‘ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಅವರ ತಮ್ಮ ಸಂಸದ ಡಿ.ಕೆ. ಸುರೇಶ್‌ ರಾಮನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರು ಯೋಗೇಶ್ವರ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ.  ಹೀಗಾಗಿ ಅವರು ಬೇಸರಗೊಂಡಿದ್ದಾರೆ’ ಎಂದೂ ಆಪ್ತರು ಹೇಳಿದ್ದಾರೆ.

‘ಒಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಯೋಗೇಶ್ವರ ಉಸಿರುಗಟ್ಟುವ ವಾತಾವರಣದಲ್ಲಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವುದು ಖಚಿತ. ಜೆಡಿಎಸ್‌ ಕಡೆಗೆ ಹೆಚ್ಚಿನ ಒಲವು ಹೊಂದಿದ್ದಾರೆ’ ಎಂದೂ ಅವರು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಯೋಗೇಶ್ವರ, ‘ನಾನು ಸದ್ಯ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದೇನೆ. ಪಕ್ಷ ತ್ಯಜಿಸುವ ಅಥವಾ ಇನ್ನೊಂದು ಪಕ್ಷಕ್ಕೆ ಸೇರುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಇದೇ 22ರಂದು ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ಕರೆದಿದ್ದೇನೆ’ ಎಂದರು.

‘ಚುನಾವಣೆಗೆ ಇನ್ನೂ ಸಮಯ ಇದೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ಇದೆ. ಕುಮಾರಸ್ವಾಮಿ ನನ್ನನ್ನು ಭೇಟಿ ಮಾಡಿ ಮಾತನಾಡಿದ್ದು ನಿಜ. ಬಿಜೆಪಿ ನಾಯಕರೂ ಮಾತುಕತೆ ನಡೆಸಿದ್ದಾರೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT