ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಕಾರಿ ವಿದ್ವಾಂಸರು

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿದ್ವಾಂಸರು ಎಂದರೆ ಜ್ಞಾನಿಗಳು, ಪಂಡಿತರು, ತಿಳಿದವರು. ಇವರೇ ನಡೆದಾಡುವ ಜ್ಞಾನಕೋಶಗಳು. ಆದ್ದರಿಂದಲೇ ಅರಸ ತನ್ನ ನಾಡಿನಲ್ಲಿ ಮಾತ್ರ ಗೌರವಕ್ಕೆ ಪಾತ್ರನಾದರೆ, ವಿದ್ವಾಂಸ ನಾಡಿನಗಡಿಯನ್ನು ದಾಟಿ ಎಲ್ಲ ಕಡೆಯೂ ಗೌರವಾದರಗಳಿಗೆ ಭಾಜನನಾಗುತ್ತಾನೆ. ಜೈನ ಪರಂಪರೆಯಲ್ಲಿ "ದಿವ್ಯಧ್ವನಿ"ಯ ಜ್ಞಾನ, ದಿಗಂಬರ ಮುನಿಗಳ ನೆನಪಿನ ಶಕ್ತಿಯನ್ನು ಅವಲಂಬಿಸಿ ಮೌಖಿಕವಾಗಿ ಹರಿದುಬರುತ್ತಿತ್ತು. ಅಪಾರ ವಾದ ಶ್ರುತಜ್ಞಾನ ಅಸಂಖ್ಯಾತ ಮುನಿಗಳ ಮೂಲಕ ಪ್ರವಹಿಸುತ್ತಿತ್ತು. ಅನೇಕ ಕಾರಣಗಳಿಂದ ಶ್ರುತಧಾರಕ ಮುನಿಗಳ ಸಂಖ್ಯೆ ಕಡಿಮೆ ಯಾದುದರಿಂದ ಹಾಗೂ ಅವರ ಸ್ಮರಣಶಕ್ತಿ ದಿನಂಪ್ರತಿ ಕುಗ್ಗುತ್ತಾ ಬಂದುದರಿಂದ ಶ್ರುತಜ್ಞಾನ ಲಿಪಿಬದ್ಧವಾಗುವುದು ಅನಿವಾರ್ಯವಾಯಿತು.

ಮುಂದೆ ಅವು ಮುದ್ರಣವಾಗುತ್ತಾ ಬಂದುವು. ಇದರಿಂದ ಮುನಿಗಳಲ್ಲದೆ, ಗೃಹಸ್ಥ ವಿದ್ವಾಂಸರು ಸಹ ಶ್ರುತಗ್ರಂಥಗಳ ಸ್ವಾಧ್ಯಾಯ ಮಾಡ ತೊಡಗಿದರು. ಆದುದರಿಂದಲೇ ಪಂಡಿತ ಆಶಾಧರರು ಸ್ವಾಧ್ಯಾಯಕ್ಕೆ ಹೀಗೆ ಪ್ರೇರಣೆ ನೀಡಿದ್ದಾರೆ-

ಸ್ವಾಧ್ಯಾಯಾಯಂ ವಿಧಿವತ್ ಕುರ್ಯಾದ್ ಉದ್ಧರೇಚ್ಚ ವಿಪದ್ಧತಾನ್ |
ಪಕ್ವಜ್ಞಾನಾ ದಯಾಸ್ಯೈವ ಗುಣಾಃ ಸರ್ವೇದಿ ಸಿದ್ಧಿದಾ ||
(ವಿಧಿಪೂರ್ವಕ ಸ್ವಾಧ್ಯಾಯ ಮಾಡಿರಿ. ವಿಪತ್ತಿನಲ್ಲಿರುವ ಪ್ರಾಣಿಗಳನ್ನು ಉದ್ಧರಿಸಿ. ಯಾರಲ್ಲಿ ಜ್ಞಾನ ಮತ್ತು ದಯೆ ಪರಿಪಕ್ವ ವಾಗಿದೆಯೋ ಅವರಿಗೆ ಎಲ್ಲ ಗುಣಗಳು ಸಿದ್ಧಿಸುತ್ತವೆ.)

ಸ್ವಾಧ್ಯಾಯ ನಿರತ ವಿದ್ವಾಂಸರ ಜೀವನ ಸದಾ ಧರ್ಮದಲ್ಲೇ ಲೀನವಾಗಿರುತ್ತದೆ. ಧರ್ಮದ ಮೂಲಕ ಒಳನೋಟ ವಿಕಸಿತವಾಗುವುದು.
ಅಂತರಂಗ ನಿರ್ಮಲವಾಗುವುದು. ಅದೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮಂತ್ರ. ಇಂಥವರೇ ನಿಜವಾದ ನಾಡೋಜರು. ನೌಕೆಯಿಲ್ಲದೆ
ಜಲಧಿಯನ್ನು ಹೇಗೆ ದಾಟಲು ಸಾಧ್ಯವಿಲ್ಲವೋ, ಅದೇ ರೀತಿ ಇಂಥ ನಾಡೋಜರಿಲ್ಲದೆ ಸಂಸಾರ ಸಾಗರದ ಇನ್ನೊಂದು ತಟವನ್ನು ಕಾಣುವುದು
ಕಠಿಣ.

ಹಾಲಿನಲ್ಲಿ ಪೌಷ್ಟಿಕತೆಯ ಜೊತೆಗೆ ಔಷಧೀಯ ಗುಣವೂ ಇರುವಂತೆ, ವಿದ್ವಾಂಸರ ವಿದ್ವತ್ತಿನಲ್ಲಿ ಲೌಕಿಕ ಪ್ರಯೋಜನದ ಜೊತೆಗೆ ಆಧ್ಯಾತ್ಮಕ ಪ್ರಯೋಜನವೂ ಅಡಗಿರುವುದು.

ಆಗಮ ಸಾಹಿತ್ಯದ ಗಹನವಾದ ಅಧ್ಯಯನ ಮಾಡಿದ ವಿದ್ವಾಂಸರಲ್ಲಿ ಕಿಂಚಿತ್ತೂ ಅಹಂ ಇರುವುದಿಲ್ಲ. ಇದೇ ನಿಜವಾದ ವಿದ್ವತ್ತಿನ ಗುರುತು. ಇಂಥ ವಿದ್ವಾಂಸರಿಗೆ ವಿಶೇಷವಾಗಿ ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ಅವುಗಳ ಪ್ರಾಮಾಣಿಕ ನಿರ್ವಹಣೆಯೇ ಅವರಿಗೆ ಪ್ರತಿಷ್ಠೆಯನ್ನು ತಂದುಕೊಡುತ್ತದೆ.

ಪ್ರವಚನ ಕಲೆಗೆ ಈಗಲೂ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ವಿದ್ವಾಂಸರು ಪ್ರವಚನ ಕಲೆಯಲ್ಲಿ ನಿಪುಣರಾಗಿರುತ್ತಾರೆ. ತನ್ಮೂಲಕ ಶ್ರೀಸಾಮಾನ್ಯರಿಗೆ ತತ್ತ್ವಜ್ಞಾನದ ಬೋಧನೆಮಾಡಲು ಹಾಗೂ ಅವರನ್ನು ಸ್ವಾಧ್ಯಾಯ ತಪದಲ್ಲಿ ತೊಡಗಿಸಲು ಸಮರ್ಥರಾಗಿರುತ್ತಾರೆ.

ಸಮಾಜದಲ್ಲಿ ಕ್ರಿಯಾಕಾಂಡವನ್ನು ಮಾಡಿಸುವವರು ಸಹ ವಿದ್ವಾಂಸರೇ. ಇವರು ಕ್ರಿಯಾಕಾಂಡದ ಬಗ್ಗೆ ಒತ್ತು ಕೊಡುವುದನ್ನು ಸ್ವಲ್ಪ ಕಡಿಮೆ ಮಾಡಿ, ಇಂದಿನ ಸಮಾಜಕ್ಕೆ ಅಗತ್ಯವಿರುವ ಧ್ಯಾನ, ದಯೆ ಹಾಗೂ ಸೇವಾ ಭಾವಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಆಗ ಅವರ ಕಾರ್ಯ ಅತ್ಯಂತ ಲೋಕೋಪಯೋಗಿ ಆಗುವುದು. ಅಂಥ ಲೋಕೋಪಕಾರಿ ವಿದ್ವಾಂಸರ ಸಂತತಿ ಅಧಿಕಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT